ಕರ್ನಾಟಕದಲ್ಲಿ ದಿನದಿಂದ ದಿನಕ್ಕೆ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದರಿಂದ ಕರ್ನಾಟಕದ 8 ನಗರಗಳಲ್ಲಿ 10 ದಿನಗಳ ಕಾಲ ರಾತ್ರಿ ನಿಷೇಧಾಜ್ಞೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೊತೆಗಿನ ಸಭೆ ಬಳಿ ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ಪ್ರಧಾನಿ ಸಲಹೆ ಮೇರೆಗೆ ರಾಜ್ಯದ 7 ಜಿಲ್ಲೆಗಳ 8 ನಗರಗಳಲ್ಲಿ ನೈಟ್ ಕರ್ಫ್ಯೂ ಅಂದರೆ ಕೊರೊನಾ ಕರ್ಫ್ಯೂ ಜಾರಿಗೊಳಿಸಲಾಗುತ್ತದೆ.
ಏಪ್ರಿಲ್ 10ರಿಂದ ಏಪ್ರಿಲ್ 20ರವರೆಗೂ ರಾತ್ರಿ ನಿಷೇಧಾಜ್ಞೆಯನ್ನೇ ಕೊರೊನಾ ಕರ್ಫ್ಯೂ ಎಂದು ಕರೆಯಲಾಗಿದ್ದು, ಶನಿವಾರ ರಾತ್ರಿ 10 ಗಂಟೆಯಿಂದ ಬೆಳಗ್ಗೆ 5 ಗಂಟೆವರೆಗೂ ಕರ್ಫ್ಯೂ ಜಾರಿಯಲ್ಲಿ ಇರಲಿದೆ. ಈ ಅವಧಿಯಲ್ಲಿ ಅಗತ್ಯ ವಸ್ತುಗಳಿಗೆ ಯಾವುದೇ ಕೊರತೆ ಎದುರಾಗುವುದಿಲ್ಲ ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ.
ರಾತ್ರಿ ಕರ್ಫ್ಯೂ ವಿಧಿಸಿದ್ದರಿಂದ ಏಪ್ರೀಲ್ 10 ರಿಂದ 20ರವರೆಗೆ ರಾತ್ರಿಯಿಂದ ಆರಂಭವಾಗುವ ಕೊರೋನಾ ಕರ್ಫ್ಯೂಗೆ ಬಿಬಿಎಂಪಿ ಸಂಪೂರ್ಣ ಸಿದ್ಧತೆ ಕೈಗೊಂಡಿದ್ದು, ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್, ಅಪಾರ್ಟ್‌ಮೆಂಟ್ ಗಳ ಎಲ್ಲಾ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ.
ಜತೆಗೆ, ತುರ್ತು ಆರು ಸಾವಿರ ಹಾಸಿಗೆಗಳನ್ನು ಕಾಯ್ದಿರಿಸಲಾಗಿದ್ದು, ತೀವ್ರ ಸೋಂಕಿನಿಂದ ಬಳಲುತ್ತಿರುವವರನ್ನು ಇಲ್ಲಿಗೆ ದಾಖಲಿಸಲಾಗುವುದು. ಸರಣಿ ಸೋಂಕಿನ ಪ್ರಕರಣಗಳು ಬೆಳಕಿಗೆ ಬಂದರೆ, ಕಂಟೋನ್ಮೆಂಟ್ ಝೋನ್ ಎಂದು ಗುರುತಿಸಲು ಬಿಬಿಎಂಪಿ ಮುಂದಾಗಿದೆ.
ನಗರದಲ್ಲಿಂದು ಈ ಕುರಿತು ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ, ಮುಂದಿನ ಹತ್ತು ದಿನಗಳು ತುಂಬಾ ಕಷ್ಟಕರ ವಾಗಿದ್ದು, ಎಲ್ಲರೂ ಎಚ್ಚರವಹಿಸಬೇಕು. ರಾತ್ರಿ ಕರ್ಫ್ಯೂ ಹಿನ್ನೆಲೆ ಜನರ ಓಡಾಟ ತಗ್ಗಿಸಲಾಗುವುದು. ಭದ್ರತೆ ಕುರಿತು ಪೊಲೀಸರು ಕ್ರಮ ಕೈಗೊಳ್ಳುತ್ತಾರೆ.
ಹೆಚ್ಚಿನ ಹಾಸಿಗೆ ಸೌಲಭ್ಯಕ್ಕೆ ಕ್ರಮ: ಖಾಸಗಿ ಆಸ್ಪತ್ರೆಗಳಲ್ಲಿ ಶೇ.50 ರಷ್ಟು ಹಾಸಿಗೆಗಳನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಮೀಸಲಿಡಬೇಕೆಂದು ಸೂಚಿಸಲಾಗಿದೆ. ಇದರಲ್ಲಿ ಸರ್ಕಾರದ ಶಿಫಾರಸು ಮಾಡಿರುವ ರೋಗಿಗಳಿಗೆ ಎಷ್ಟುಮೀಸಲಿಡಬೇಕೆಂಬ ಬಗ್ಗೆ ಸಂಬಂಧಪಟ್ಟವರ ಜೊತೆ ಚರ್ಚಿಸಲಾಗುವುದು. ಸೋಂಕಿತರಿಗೆ ಚಿಕಿತ್ಸೆ ನೀಡಲು ಐಸಿಯು, ಆಕ್ಸಿಜನ್ ಸೌಲಭ್ಯ ಇರುವ ಹಾಸಿಗೆಗಳು ಸಾಕಷ್ಟುಇವೆ. ಯಾವುದೇ ಕೊರತೆ ಇಲ್ಲ ಎಂದರು.
ಕರ್ನಾಟಕದ ಯಾವ ಜಿಲ್ಲೆಗಳಲ್ಲಿ ರಾತ್ರಿ ಕರ್ಫ್ಯೂ?
ರಾಜ್ಯದ 8 ಜಿಲ್ಲಾ ಕೇಂದ್ರಗಳಲ್ಲಿ ಮಾತ್ರ ಕೊರೊನಾ ಕರ್ಫ್ಯೂ ಜಾರಿಗೊಳಿಸುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಬೆಂಗಳೂರು ನಗರ, ಮೈಸೂರು, ಕಲಬುರ್ಗಿ, ತುಮಕೂರು, ಬೀದರ್, ಮಂಗಳೂರು, ಉಡುಪಿ ಮತ್ತು ಮಣಿಪಾಲ್ ನಗರಗಳಲ್ಲಿ ಕರ್ಫ್ಯೂ ಜಾರಿಗೆ ಬರಲಿದೆ.