News

ಹಣ್ಣು ತರಕಾರಿ ಬೆಳಗಾರರಿಗೆ 137 ಕೋಟಿ ಪ್ಯಾಕೇಜ್

15 May, 2020 6:43 PM IST By:

ಲಾಕ್ ಡೌನ್ ಅವಧಿಯಲ್ಲಿ ತಮ್ಮ ಬೆಳೆಗಳಿಗೆ ಸೂಕ್ತ ಬೇಡಿಕೆ ಹಾಗೂ ಬೆಲೆ ಇಲ್ಲದೆ ಕಂಗಾಲಾಗಿದ್ದ ತರಕಾರಿ ಮತ್ತು ಹಣ್ಣು ಬೆಳೆಗಾರರ ಸಹಾಯಕ್ಕೆ ರಾಜ್ಯ ಸರಕಾರ ಧಾವಿಸಿದೆ.  ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ 137 ಕೋಟಿ ಪರಿಹಾರ ನೀಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. 50,083 ಹೆಕ್ಟೇರ್‌ನಲ್ಲಿ ತರಕಾರಿ ಹಾಗೂ 41,054 ಹೆಕ್ಟೇರ್‌ನಲ್ಲಿ ಹಣ್ಣು ಬೆಳೆಯಲಾಗಿದ್ದು, ಪ್ರತಿ ಹೆಕ್ಟೇರ್‌ಗೆ 15 ಸಾವಿರದಂತೆ ಪರಿಹಾರ ಸಿಗಲಿದೆ.


ಪ್ಯಾಕೇಜ್ ವ್ಯಾಪ್ತಿಯ ಹಣ್ಣುಗಳು

ಬಾಳೆ, ಪಪ್ಪಾಯ, ಟೇಬಲ್‌ ದಾಕ್ಷಿ, ಅಂಜೂರ, ಅನಾನಸ್‌, ಕಲ್ಲಂಗಡಿ, ಕರಬೂಜ, ಬೋರೆ, ಬೆಣ್ಣೆಹಣ್ಣು.

ಪ್ಯಾಕೇಜ್ ವ್ಯಾಪ್ತಿಯ ತರಕಾರಿ ಬೆಳೆ
ಟೊಮೆಟೊ, ಹಸಿರು ಮೆಣಸಿನಕಾಯಿ, ಹೂಕೋಸು, ಎಲೆಕೋಸು, ಸಿಹಿಗುಂಬಳ, ಬೂದು ಗುಂಬಳ, ಕ್ಯಾರೆಟ್‌, ಈರುಳ್ಳಿ, ದಪ್ಪ ಮೆಣಸಿನಕಾಯಿ, ಸೊಪ್ಪು, ಹೀರೆಕಾಯಿ, ತೊಂಡೆಕಾಯಿ ಬೆಳೆದ ರೈತರಿಗೆ ಈ ಪರಿಹಾರ ಸಿಗಲಿದೆ.

ನೇಕಾರರಿಗೆ ಬಂಪರ್ ಕೊಡುಗೆ

ಇದರ ಜೊತೆಗೆ ಈ ಹಿಂದೆ ಪ್ಯಾಕೇಜ್ ಘೋಷಣೆ ಮಾಡುವ ಸಂದರ್ಭದಲ್ಲಿ ಪ್ರತೀ ಕೈಮಗ್ಗ ನೇಕಾರರಿಗೆ 2,000 ರೂಪಾಯಿಗಳಂತೆ ಪರಿಹಾರ ನೀಡಲು ನಿರ್ಧರಿಸಲಾಗಿತ್ತು. ಪ್ರಸ್ತುತ ಒಂದು ಬಾರಿಗೆ ಈ ಪರಿಹಾರ ಸೌಲಭ್ಯವನ್ನು ರಾಜ್ಯದಲ್ಲಿರುವ 1.25 ಲಕ್ಷ ವಿದ್ಯುತ್ ಚಾಲಿತ ಘಟಕಗಳಿಗೂ ಸಹ ವಿಸ್ತರಿಸಲು ನಿರ್ಧರಿಸಲಾಗಿದೆ.
ಇದರ ಪ್ರಕಾರ ಪ್ರತೀ ವಿದ್ಯುತ್ ಚಾಲಿತ ಘಟಕಗಳಲ್ಲಿ ಕೆಲಸ ಮಾಡುತ್ತಿರುವ ಪ್ರತೀ ಕೂಲಿ ಕಾರ್ಮಿಕರಿಗೆ ತಲಾ 2000 ರೂಪಾಯಿಗಳಂತೆ ಒಟ್ಟು 25 ಕೋಟಿ ರೂಪಾಯಿಗಳನ್ನು ನೀಡಲಾಗುವುದು ಎಂಬ ಮಾಹಿತಿ ಲಭ್ಯವಾಗಿದೆ.