News

ಲಾಕ್ಡೌನ್- ಸಂಕಷ್ಟದಲ್ಲಿರುವವರಿಗೆ ಶುಭಸುದ್ದಿ, ಸರ್ಕಾರದಿಂದ 1,610 ಕೋಟಿ ವಿಶೇಷ ಪ್ಯಾಕೇಜ್ ಘೋಷಣೆ

06 May, 2020 6:56 PM IST By:

ಕೊರೋನಾ ವೈರಸ್ ಸೋಂಕು ವ್ಯಾಪಿಸುವುದನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಳೆದ ಒಂದುವರೆ ತಿಂಗಳಿಂದ  ಜಾರಿಯಲ್ಲಿರುವ ಲಾಕ್‍ಡೌನ್‍ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಸರ್ಕಾರ 1610 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸುವ ಮೂಲಕ ಸಂಕಟದಲ್ಲಿದ್ದವರಿಗೆ ಆಸರೆಯಾಗಿದ್ದಾರೆ.
ಲಾಕ್‍ಡೌನ್‍ನಿಂದಾಗಿ ಆರ್ಥಿಕವಾಗಿ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ, ಆಟೋರಿಕ್ಷಾ, ಟ್ಯಾಕ್ಸಿ ಚಾಲಕರಿಗೆ, ಅತಿಸಣ್ಣ ಹಾಗೂ ಮಧ್ಯಮ ಉದ್ದಿಮೆದಾರರಿಗೆ, ನೇಕಾರರಿಗೆ, ಕಟ್ಟಡ ಕಾರ್ಮಿಕರಿಗೆ ಎಷ್ಟೇಷ್ಟು ಪರಿಹಾರ ಸಿಕ್ಕಿದೆ ಎಂಬ ಮಾಹಿತಿ ಇಲ್ಲಿದೆ.

ಹೂ ಬೆಳೆಗಾರರಿಗೆ ಹೆಕ್ಟೇರ್‍ಗೆ 25,000 ರೂಪಾಯಿ:

ಲಾಕ್‍ಡೌನ್‍ನಿಂದಾಗಿ ಎಲ್ಲ ದೇವಾಲಯಗಳು ಮುಚ್ಚಿರುವುದರಿಂದ ಹಬ್ಬ, ಮದುವೆ, ಸಭೆ-ಸಮಾರಂಭಗಳು ಹಾಗೂ ಮತ್ತಿತರ ಯಾವುದೇ ಕಾರ್ಯಕ್ರಮಗಳು ನಡೆಯದಿರುವುದರಿಂದ ಹೂವುಗಳ ಬೇಡಿಕೆ ಇಲ್ಲವಾಗಿದೆ. ಇದರಿಂದ ಹೂವು ಬೆಳೆಗಾರರು ತಾವು ಬೆಳೆದಿರುವ ಎಲ್ಲ ಹೂವುಗಳನ್ನು ತಮ್ಮ ಹೊಲದಲ್ಲಿಯೇ ನಾಶ ಮಾಡುವ ಪರಿಸ್ಥಿತಿ ಉದ್ಭವಿಸಿದೆ. ಒಟ್ಟಾರೆ 11687 ಹೆಕ್ಟೇರ್ ವಿಸ್ತೀರ್ಣದಲ್ಲಿ ಬೆಳೆದಿರುವ ಹೂವುಗಳು ಮಾರಾಟವಾಗದೆ ರೈತರಿಗೆ ನಷ್ಟವಾಗಿದೆ. ಇದರಿಂದ ಎಲ್ಲ ರೀತಿಯ ಹೂವುಗಳು ಬೆಳೆದಿರುವ ರೈತರಿಗೆ ನೆರವಾಗಲು ರಾಜ್ಯ ಸರಕಾರ ಹೆಕ್ಟೇರ್‍ಗೆ ಗರಿಷ್ಠ 25,000/-ರುಪಾಯಿಗಳಂತೆ ಪರಿಹಾರ ಘೋಷಣೆ ಮಾಡಿದೆ.

ಹೂ ಬೆಳೆಗಾರರ ಜತೆಗೆ ಅಗಸರು ಮತ್ತು ಕ್ಷೌರಿಕರು ತಮ್ಮ ಕಸುಬನ್ನು ನಡೆಸಲಾಗದೆ ದೈನಂದಿನ ಆದಾಯ ಕಳೆದುಕೊಂಡಿz್ದÁರೆ. ರಾಜ್ಯದಲ್ಲಿರುವ ಸುಮಾರು 60 ಸಾವಿರ ಅಗಸರು ಮತ್ತು 2.30 ಲಕ್ಷ ಮಂದಿ ಕ್ಷೌರಿಕ ವೃತ್ತಿಯಲ್ಲಿರುವವರಿಗೆ ಒಂದು ಬಾರಿ ಪರಿಹಾರವಾಗಿ 5 ಸಾವಿರ ರೂ.ಗಳನ್ನು ನೀಡುವ ತೀರ್ಮಾನವನ್ನು ಕೈಗೊಳ್ಳಲಾಗಿದೆ. ಹಾಗೆಯೇ ರಾಜ್ಯದಲ್ಲಿರುವ ಸುಮಾರು 7.75 ಲಕ್ಷ ಆಟೋ ಮತ್ತು ಟ್ಯಾಕ್ಸಿ ಚಾಲಕರಿಗೆ ಒಂದು ಬಾರಿ ಪರಿಹಾರವಾಗಿ 5 ಸಾವಿರ ರೂ.ಗಳನ್ನು ನೀಡುತ್ತಿರುವುದಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದರು.

ಕಟ್ಟಡ ಕಾರ್ಮಿಕರಿಗೆ 5,000 ರೂಪಾಯಿ:

ರಾಜ್ಯದಲ್ಲಿರುವ 15.80 ಲಕ್ಷ ನೋಂದಾಯಿತ ಕಟ್ಟಡ ಕಾರ್ಮಿಕರ ಪೈಕಿ ಈಗಾಗಲೇ 11.80 ಲಕ್ಷ ಕಟ್ಟಡ ಕಾರ್ಮಿಕರಿಗೆ ಸರಕಾರದಿಂದ 2,000 ರೂ.ಗಳನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ. ಇನ್ನುಳಿದ 4 ಲಕ್ಷ ಕಟ್ಟಡ ಕಾರ್ಮಿಕರಿಗೆ ಅವರವರ ಬ್ಯಾಂಕ್ ಖಾತೆಯ ವಿವರಗಳು ದೊರೆತ ನಂತರ 2,000 ರೂ.ಗಳನ್ನು ವರ್ಗಾಯಿಸಲು ಕ್ರಮ ವಹಿಸಲಾಗಿದೆ. ಈ ಎಲ್ಲ ಕಟ್ಟಡ ಕಾರ್ಮಿಕರಿಗೆ ಈಗಾಗಲೇ ನೀಡಿರುವ 2,000 ರೂ.ಗಳ ಜೊತೆಗೆ ಹೆಚ್ಚುವರಿಯಾಗಿ 3,000 ರೂ.ಗಳನ್ನು ನೀಡಲು ಸರ್ಕಾರ ನಿರ್ಧರಿಸಿದೆ. ಈ ಹಣವನ್ನು ಅವರ ಬ್ಯಾಂಕ್ ಖಾತೆಗೆ ನೇರವಾಗಿ ವರ್ಗಾವಣೆಗೊಳ್ಳಲಿದೆ.

ಎರಡು ತಿಂಗಳ ವಿದ್ಯುತ್ ಶುಲ್ಕ ಮನ್ನಾ:

ರಾಜ್ಯದ ಅತಿ ಸಣ್ಣ, ಸಣ್ಣ ಹಾಗೂ ಮಧ್ಯಮ ಉದ್ದಿಮೆಗಳನ್ನು ನಡೆಸುವ ಉದ್ದಿಮೆದಾರರು ತಮ್ಮ ಉತ್ಪನ್ನಗಳನ್ನು ಸಾಗಿಸಿ ಮಾರಾಟ ಮಾಡಲಾಗದೆ ನಷ್ಟ ಅನುಭವಿಸಿದ್ದು, ಇವರ ವಹಿವಾಟು ಚೇತರಿಕೆಯಾಗಲು ಕೆಲ ತಿಂಗಳು ಬೇಕಾಗಿರುವುದರಿಂದ ಸರ್ಕಾರ ಇವರ ನೆರವಿಗೂ ಸಹಾಯ ಹಸ್ತ ಚಾಚಿದ್ದು, ಅತಿ ಸಣ್ಣ, ಸಣ್ಣ ಹಾಗೂ ಉದ್ಯಮಗಳ ವಿದ್ಯುತ್ ಬಿಲ್ಲಿನ ಕನಿಷ್ಠ ನಿಗದಿ ಶುಲ್ಕ (ಫಿಕ್ಸಡ್ ಚಾರ್ಜ್)ವನ್ನು 2 ತಿಂಗಳ ಅವಧಿಗೆ ಪೂರ್ಣವಾಗಿ ಮನ್ನಾ ಮಾಡಲಾಗಿದೆ ಎಂದು ಅವರು ಹೇಳಿದರು.
ತರಕಾರಿ ಬೆಳೆಗಾರರಿಗೆ ವಿಶೇಷ ಪ್ಯಾಕೇಜ್: ಈ ವರ್ಷ ರಾಜ್ಯದಲ್ಲಿ ತರಕಾರಿ ಮತ್ತು ಹಣ್ಣುಗಳು ಇಳುವರಿಯು ಉತ್ತಮವಾಗಿದೆ. ಆದರೆ ಕೋವಿಡ್ - 19 ಸೋಂಕು ವ್ಯಾಪಿಸುವುದನ್ನು ತಡೆಯುವ ನಿಟ್ಟಿನಲ್ಲಿ ರಾಷ್ಟ್ರಾದ್ಯಂತ ಜಾರಿಗೊಳಿಸಲಾದ ಲಾಕ್‍ಡೌನ್‍ನಿಂದಾಗಿ ರೈತರು ತಮ್ಮ ಬೆಳೆಗಳಿಗೆ ಸೂಕ್ತ ದರಗಳನ್ನು ಪಡೆಯಲು ಸಾಧ್ಯವಾಗುತ್ತಿಲ್ಲ. ಲಾಕ್ಡೌನ್‍ನಿಂದ ಸಂಕಷ್ಟಕ್ಕೆ ಒಳಗಾಗಿರುವ ತರಕಾರಿ ಮತ್ತು ಹಣ್ಣು ಬೆಳೆಗಾರರಿಗೆ ಪ್ರತ್ಯೇಕ ಆರ್ಥಿಕ ಪರಿಹಾರ ಪ್ಯಾಕೇಜನ್ನು ಸದ್ಯದಲ್ಲಿಯೇ ಘೋಷಣೆ ಮಾಡುವುದಾಗಿ ಅವರು ಹೇಳಿದರು.
ಹಣ್ಣು ಮತ್ತು ತರಕಾರಿ ಬೆಳೆಗಾರರ ಬೆಳೆ ನಷ್ಟದ ಬಗ್ಗೆ ಸಮೀಕ್ಷೆಗಳು ನಡೆಯುತ್ತಿವೆ. ಇದು ಪೂರ್ಣವಾದ ನಂತರ ಹಣ್ಣ ಮತ್ತು ತರಕಾರಿ ಬೆಳೆಗಾರರಿಗೂ ಪ್ಯಾಕೇಜ್ ಘೋಷಿಸುವುದಾಗಿ ಅವರು ತಿಳಿಸಿದರು.