News

ಸೆ. 19 ಕ್ಕೆ ರಾಜ್ಯದ ಮೊದಲ ಕಿಸಾನ್‌ ರೈಲು ಸಂಚಾರ ಆರಂಭ

16 September, 2020 9:10 AM IST By:

ರಾಜ್ಯದ ರೈತರಿಗೆ ಸಂತಸದ ಸುದ್ದಿ. ರಾಜ್ಯದ ಉತ್ಪನ್ನಗಳನ್ನು ಬೇರೆ ರಾಜ್ಯಗಳಿಗೆ ರಪ್ತು ಮಾಡಲು ತೊಂದರೆಯಾಗುತ್ತಿದ್ದರಿಂದ ಈಗ ವಿಶೇಷ ಕಿಸಾನ್ ರೈಲು ಆರಂಭಿಸಲಾಗುತ್ತಿದೆ. ರಾಜ್ಯದಿಂದ ಸೆ. 19 ರಂದು ಮೊದಲ ಕಿಸಾನ್ ರೈಲು ಆರಂಭವಾಗಲಿದೆ.

ಬೆಂಗಳೂರು–ನಿಜಾಮುದ್ದೀನ್‌ ನಡುವೆ ರಾಜ್ಯದಿಂದ ಮೊದಲ ಕಿಸಾನ್‌ ವಿಶೇಷ ರೈಲು ಸೆ.19 ರಂದು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ನಿಲ್ದಾಣದಿಂದ ಹೊರಡಲಿದೆ.

ದೇಶದ ಮೊಟ್ಟ ಮೊದಲ ಕಿಸಾನ್ ರೈಲನ್ನು ಇತ್ತೀಚೆಗೆ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಹಸಿರು ನಿಶಾಲೆ ತೋರಿಸಿದ್ದರು. ಮಹಾರಾಷ್ಟ್ರದ ದೇವಲಾಲಿ ಮತ್ತು ಬಿಹಾರದ ದಾನಾಪುರ ನಡುವೆ ಸಂಚರಿಸುತ್ತಿರುವ ಕಿಸಾನ್ ರೈಲು ದೇಶದ ಮೊದಲ ಕಿಸಾನ್ ರೈಲಾಗಿತ್ತು.   ಕಿಸಾನ್ ರೈಲು ಕೃಷಿ ಕ್ಷೇತ್ರದ ಪ್ರಗತಿಗೆ ಮತ್ತು ಬೆಳೆಗೆ ನ್ಯಾಯಯುತ ದರ ಒದಗಿಸಲು ಸಹಕಾರಿಯಾಗಲಿದೆ. ಸೂಕ್ತ ಸಾಗಾಣಿಕೆ ಸೌಲಭ್ಯವಿದ್ದರೆ ದರ‌ಕುಸಿತ ತಡೆಯಲು ಸಾಧ್ಯ. ಕೃಷಿ ಉತ್ಪನ್ನಗಳನ್ನು ಸುಗಮವಾಗಿ ಸಾಗಾಣಿಕೆ ಮಾಡಲು ಅನುಕೂಲವಾಗುವಂತೆ ಕಿಸಾನ್ ರೈಲು ಆರಂಭಿಸಲಾಗಿದೆ ಎಂದು ಇದೇ ಸಂದರ್ಭದಲ್ಲಿ ಕೃಷಿ ಸಚಿವರು ಹೇಳಿದ್ದರು.

ಈಗ ಕರ್ನಾಟಕದಿಂದ ಮೊದಲ ಕಿಸಾನ್ ರೈಲು ಸಂಚಾರ ಸೆಪ್ಟೆಂಬರ್ 19 ರಿಂದ ಆರಂಭವಾಗಲಿದೆ.  ಅಂದು ಸಂಜೆ 4.45ಕ್ಕೆ ಹೊರಟು, ಸೆ.21 ರಂದು ರಾತ್ರಿ 11.45ಕ್ಕೆ ನಿಜಾಮುದ್ದೀನ್‌ ತಲುಪಲಿದೆ. ಅ.17ರವರೆಗೆ ಪ್ರತಿ ಶನಿವಾರ ಸಂಚರಿಸಲಿದೆ.

ಸೆ. 22ರಿಂದ ಅ. 20ರ ತನಕ ಪ್ರತಿ ಮಂಗಳವಾರ ಸಂಜೆ 5.45ಕ್ಕೆ ನಿಜಾಮುದ್ದೀನ್‌ನಿಂದ ಹೊರಟು ಶುಕ್ರವಾರ ರಾತ್ರಿ 1.45ಕ್ಕೆ ಬೆಂಗಳೂರು ಮುಟ್ಟಲಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.

ಮೈಸೂರು, ಹಾಸನ, ಅರಸೀಕೆರೆ, ದಾವಣಗೆರೆ, ಹುಬ್ಬಳ್ಳಿ, ಲೋಂಡಾ, ಬೆಳಗಾವಿ, ಮೀರಜ್‌, ಪುಣೆ, ಮನ್ಮಾಡ್‌, ಭೂಸಾವಾಲ್‌, ಇಟಾರ್ಸಿ, ಭೋಪಾಲ್‌, ಝಾನ್ಸಿ, ಆಗ್ರಾ, ಮಥುರಾದಲ್ಲಿ ನಿಲುಗಡೆ ಇರಲಿದೆ.