News

ಕರ್ನಾಟಕ ಎಕ್ಸಿಟ್‌ ಪೋಲ್‌: ಬಸವಕಲ್ಯಾಣ, ಬೆಳಗಾವಿಯಲ್ಲಿ ಬಿಜೆಪಿಗೆ ಗೆಲುವು; ಮಸ್ಕಿಯಲ್ಲಿ 50:50

29 April, 2021 9:09 PM IST By:

ರಾಜ್ಯದಲ್ಲಿ ಭಾರಿ ಕುತೂಹಲ ಕೆರಳಿಸಿರುವ ಬಸವಕಲ್ಯಾಣ, ಮಸ್ಕಿ ವಿಧಾನಸಭಾ ಕ್ಷೇತ್ರಗಳು ಮತ್ತು ಬೆಳಗಾವಿ ಲೋಕಸಭಾ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿದೆ. ರಾಜ್ಯದಲ್ಲಿ ನಡೆದ ಒಂದು ಲೋಕಸಭೆ ಮತ್ತು 2 ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸಲಿದೆ ಎಂದು ಸಮೀಕ್ಷೆಗಳು ತಿಳಿಸಿವೆ.

ಬೆಳಗಾವಿ ಲೋಕಸಭಾ ಉಪಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಕೇಂದ್ರ ಸಚಿವ ಸುರೇಶ್ ಅಂಗಡಿ ಅವರ ಅಕಾಲಿಕ ನಿಧನದಿಂದ ತೆರವಾದ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿದ್ದು ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸುರೇಶ್ ಅಂಗಡಿ ಪತ್ನಿ ಕಣದಲ್ಲಿದ್ದು ಮೊದಲ ಬಾರಿಗೆ ಲೋಕಸಭೆ ಪ್ರವೇಶ ಮಾಡಲಿದ್ದಾರೆ ಎನ್ನಲಾಗಿದೆ. ಒಲ್ಲದ ಮನಸ್ಸಿನಿಂದ ಲೋಕಸಭಾ ಉಪಚುನಾವಣೆಯ ಕಣಕ್ಕಿಳಿದ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಹೊಳಿ ಅವರಿಗೆ ನಿರಾಸೆಯಾಗಲಿದೆ.

ಮಸ್ಕಿ: 50-50

ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ಅವರು ರಾಜೀನಾಮೆ ನೀಡಿ ಆನಂತರ ಅನರ್ಹಗೊಂಡ ಹಿನ್ನಲೆಯಲ್ಲಿ ತೆರವಾದ ಸ್ಥಾನಕ್ಕೆ ಮಸ್ಕಿ ವಿಧಾನಸಭಾ ಕ್ಷೇತ್ರದ ಚುನಾವಣೆ ನಡೆದಿತ್ತು ಈ ಕ್ಷೇತ್ರದಲ್ಲಿ ಕಾಂಗ್ರೆಸ್ ನ ಬಸವರಾಜ್ ತುರವಿನಾಳ ಮತ್ತು ಬಿಜೆಪಿಯ ಪ್ರತಾಪ್ ಗೌಡ ಪಾಟೀಲ್ ನಡುವೆ 50:50 ಎಂದು ಸಮೀಕ್ಷೆ ಹೇಳಿದ್ದು ಅಂತಿಮವಾಗಿ ಮತದಾರರನ ಒಲವು ಯಾರ ಕಡೆ ಎನ್ನುವುದು ಕುತೂಹಲ ಕೆರಳಿಸಿದೆ

ಬಸವಕಲ್ಯಾಣ ಬಿಜೆಪಿಗೆ:

ಕಾಂಗ್ರೆಸ್ ಶಾಸಕರಾಗಿದ್ದ ನಾರಾಯಣರಾವ್ ಅವರ ಅಕಾಲಿಕ ನಿಧನದಿಂದ ತೆರವಾದ ಬಸವ ಕಲ್ಯಾಣ ಕ್ಷೇತ್ರಕ್ಕೆ ಉಪ ಚುನಾವಣೆ ನಡೆದಿತ್ತು. ಈ ಕ್ಷೇತ್ರದಲ್ಲಿ ಅನುಕಂಪದ ಮತ ಪಡೆಯಲು ಅವರ ಪತ್ನಿ ಮಾಲಾ ಅವರನ್ನು ಕಾಂಗ್ರೆಸ್ ಪಕ್ಷ ಕಣಕ್ಕಿಳಿಸಿತ್ತು. ಆದರೆ ಇಲ್ಲಿ ಅನುಕಂಪ ಬೆಂಬಲಕ್ಕೆ ಬಂದಿಲ್ಲ ಎಂದು ಹೇಳಲಾಗಿದೆ. ಈ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿ ಜಯಗಳಿಸಲಿದ್ದಾರೆ ಎಂದು ಸಮೀಕ್ಷೆಗಳು ಹೇಳಿದ್ದು ಮೂರು ಉಪಚುನಾವಣೆಯಲ್ಲಿ ಬಿಜೆಪಿ ಮೇಲುಗೈ ಸಾಧಿಸುವುದು ಖಚಿತ ಎಂದು ಹೇಳಲಾಗಿದೆ.

ಬಸವಕಲ್ಯಾಣ ಕ್ಷೇತ್ರದಿಂದ ಜೆಡಿಎಸ್ ಪಕ್ಷ ತನ್ನ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಹೀಗಾಗಿ ಕಾಂಗ್ರೆಸ್ ಅಭ್ಯರ್ಥಿಯ ಎಲ್ಲರಿಗೆ ಜೆಡಿಎಸ್ ತಡೆಯೊಡ್ಡಿದೆ. ಈ ಮೂರೂ ಕ್ಷೇತ್ರಗಳ ಫಲಿತಾಂಶ ಮೇ 2ರ ಭಾನುವಾರ ಪ್ರಕಟವಾಗಲಿದೆ.