ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಯಶಸ್ಸು ನೋಡಿಕೊಂಡು ರಾಜ್ಯದ ಇತರೆ ವಿಭಾಗಗಳನ್ನು ಇದೇ ಮಾದರಿಯಲ್ಲಿ ಸಂಘಗಳನ್ನು ಸ್ಥಾಪನೆ ಮಾಡಲಾಗುವುದು ಎಂದು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಶುಕ್ರವಾರ ನಗರದ ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ಪ್ರಗತಿ ಕೇಂದ್ರ ಕಚೇರಿಗೆ ಭೇಟಿ ನೀಡಿ, ಸಭೆ ನಡೆಸಿ ಅವರು ಮಾತನಾಡುತ್ತಿದ್ದರು.
ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯು ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಕೆಲಸ ಮಾಡುತ್ತಿದ್ದರೆ, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘವು ನೈತಿಕ ಪಾಠ, ಸೇವಾ ಮನೋಭಾವ ಹಾಗೂ ಸಮುದಾಯ ಬೆಸೆಯುವಂತಹ ಕಾರ್ಯ ಮಾಡುತ್ತಿದೆ. ಮಾನವ ಸಂಪನ್ಮೂಲವನ್ನು ಹೆಚ್ಚಿಸುವಂತಹ, ಕೃಷಿ ಮತ್ತು ಸಾಂಸ್ಕೃತಿಕವಾಗಿ ಜನರನ್ನು ಸಿದ್ಧಪಡಿಸುವಂತಹ ಕಾಯಕ ಸಂಘ ಮಾಡುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ, ಕೃಷಿ ಹಾಗೂ ಸಾಂಸ್ಕೃತಿಕ ಸಂಘದ ರಚನೆ ಅಗತ್ಯವಾಗಿತ್ತು ಎಂದು ಒತ್ತಿಹೇಳಿದ ಅವರು, ವಿಭಿನ್ನ ಚಿಂತನೆ ಇಟ್ಟುಕೊಂಡು ಸಂಘ ಸ್ಥಾಪಿಸುವ ಮೂಲಕ ಮೊದಲ ಪ್ರಯೋಗ ಮಾಡಲಾಗಿದೆ. ಸಂಘ ಯಶಸ್ವಿಯಾಗುವುದು ಬಹಳಮುಖ್ಯ ಎಂದು ಪ್ರತಿಪಾದಿಸಿದರು.
ಸಂಘದ ಅಧ್ಯಕ್ಷ ಬಸವರಾಜ ಪಾಟೀಲ್ ಸೇಡಂ ಅವರದ್ದು ನಿಷ್ಕಲ್ಮಶ, ನಿಸ್ವಾರ್ಥ ಹಾಗೂ ಪರೋಪಕಾರಿ ವ್ಯಕ್ತಿತ್ವ, ಜನರನ್ನು ದೊಡ್ಡ ಪ್ರಮಾಣದಲ್ಲಿ ಸೆಳೆಯುವ ವ್ಯಕ್ತಿ ಇದ್ದರೆ ಅದು ಇವರು ಮಾತ್ರ ಎಂದು ಮುಖ್ಯಮಂತ್ರಿಗಳು ಹೊಗಳಿದರು.
ಈ ಸಂದರ್ಭದಲ್ಲಿ ಮಾತನಾಡಿದ ಬಸವರಾಜ ಪಾಟೀಲ್ ಸೇಡಂ ಅವರು, ತಮ್ಮ ನೇತೃತ್ವದಲ್ಲಿ ಸಂಘ ಕೈಗೊಂಡಿರುವ ವಿವಿಧ ಕಾರ್ಯಚಟುವಟಿಕೆಗಳನ್ನು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಜಿಲ್ಲಾ ಉಸ್ತುವಾರಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ್ ನಿರಾಣಿ, ಯೋಜನೆ, ಕಾರ್ಯಕ್ರಮ ಸಂಯೋಜನೆ ಹಾಗೂ ಸಾಂಖ್ಯಿಕ ಇಲಾಖೆ ಸಚಿವ ಮುನಿರತ್ನ, ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರದೇಶ ಮಂಡಳಿಯ ಅಧ್ಯಕ್ಷ ದತ್ತಾತ್ರೇಯ ಪಾಟೀಲ್ ರೇವೂರ್, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ್, ಕಲಬುರಗಿ ಲೋಕಸಭಾ ಸದಸ್ಯ ಡಾ. ಉಮೇಶ ಜಾಧವ, ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಅಧ್ಯಕ್ಷ ಬಾಬುರಾವ್ ಚಿಂಚಿನಸೂರ, ಅಫಜಲಪೂರ ಶಾಸಕ ಎಂ.ವೈ ಪಾಟೀಲ್, ಕಲಬುರಗಿ ಗ್ರಾಮೀಣ ಶಾಸಕ ಬಸವರಾಜ ಮತ್ತಿಮೂಡ, ಕಲ್ಯಾಣ ಕರ್ನಾಟಕ ಉತ್ಸವ ಸಮಿತಿ ಅಧ್ಯಕ್ಷ ಹಾಗೂ ವಿಧಾನ ಪರಿಷತ್ ಶಾಸಕ ಶಶೀಲ್ ಜಿ. ನಮೋಶಿ, ವಿಧಾನ ಪರಿಷತ್ ಶಾಸಕ ಬಿ.ಜಿ. ಪಾಟೀಲ್, ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ್, ಯೋಜನೆ ಮತ್ತು ಸಾಂಖ್ಯಿಕ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ್, ಜಿಲ್ಲಾಧಿಕಾರಿ ವಿ.ವಿ ಜ್ಯೋತ್ಸ್ನಾ, ಜಿಲ್ಲಾ ಪಂಚಾಯತ್ ಸಿಇಓ ದಿಲೀಶ್ ಸಸಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸಿಮಿ ಮರಿಯಮ್ ಜಾರ್ಜ್, ಡಿಸಿಪಿ ಅಡೂರು ಶ್ರೀನಿವಾಸಲು, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಸಂಘದ ಕಾರ್ಯದರ್ಶಿ ಭೀಮಾಶಂಕರ್ ತೆಗ್ಗಳ್ಳಿ, ಅಧೀನ ಕಾರ್ಯದರ್ಶಿ ಮಲ್ಲಕಾರ್ಜುನ ರೆಡ್ಡಿ ಪಾಟೀಲ್, ಸಂಘದ ಸಲಹಾ ಸಮಿತಿ ಸದಸ್ಯರಾದ ಡಾ. ಗುರುರಾಜ್ ಕರಜಗಿ, ಡಾ. ಎಸ್.ಎ. ಪಾಟೀಲ್, ಚಾಣಕ್ಯ ಅಕಾಡೆಮಿಯ ಎನ್.ಎಂ. ಬಿರಾದಾರ್ ಹಾಗೂ ನಿರ್ದೇಶಕರು ಇದ್ದರು.