News

ರೈತನ ಹೆಗಲಿಗೆ ಹೆಗಲು ಕೊಟ್ಟು ದುಡಿಯುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಹಬ್ಬ ಕಾರ ಹುಣ್ಣಿಮೆ

24 June, 2021 7:01 PM IST By:

ಕಾರ ಹುಣ್ಣಿಮೆ, ಕರುನಾಡ ರೈತರ ಮನೆ ಮನೆಯ ಹಬ್ಬ. ಕೃಷಿ ಚಟುವಟಿಕೆಯಲ್ಲಿ ತಮ್ಮ ಹೆಗಲಿಗೆ ಹೆಗಲು ಕೊಟ್ಟು ಸಾಗುವ ಎತ್ತುಗಳಿಗೆ ಕೃತಜ್ಞತೆ ಸಲ್ಲಿಸುವ ಉದ್ದೇಶದಿಂದಲೇ ಈ ಹಬ್ಬವನ್ನು ಆಚರಿಸಲಾಗುತ್ತದೆ. ಅದರಲ್ಲೂ ಉತ್ತರ ಕರ್ನಾಟಕದ ರೈತ ಕುಟುಂಬಗಳಲ್ಲಿ, ಯುಗಾದಿ, ದೀಪಾವಳಿಯಂತೆ ಇದನ್ನೂ ಕೂಡ ಒಂದು ದೊಡ್ಡ ಹಬ್ಬದಂತೆಯೇ ಸಂಭ್ರಮಿಸುತ್ತಾರೆ.

ರೈತರ ಕುಟುಂಬಗಳಲ್ಲಿ ಒಂದೊಂದು ಸಂದರ್ಭಕ್ಕೂ ಒಂದೊಂದು ಹಬ್ಬವಿದೆ. ಭೂಮಿ ಹುಣ್ಣಿಮೆ, ಸುಗ್ಗಿಯ ಹಬ್ಬ ಸಂಕ್ರಾAತಿ, ಕಾರ ಹುಣ್ಣಿಮೆ ಎಂಬುವು ಕೇವಲ ಹೆಸರಿಸಲು ಇರುವ ಕೆಲವು ಹಬ್ಬಗಳಾದರೆ, ಬಿತ್ತನೆಗೆ ಮುನ್ನ ಮೊದಲ ಬಾರಿ ಭೂಮಿ ಉಳುಮೆ ಮಾಡುವಾಗ, ಬೆಳೆಯು ತೆನೆ ಅಥವಾ ಇಂಗಾರು ಬಿಟ್ಟಾಗ, ಕೊಯ್ಲು ಮಾಡುವ ಮುನ್ನ, ರಾಶಿ ಹಾಕಲು ಕಣ ಮಾಡುವಾಗ ಹೀಗೆ ವ್ಯವಸಾಯದ ಪ್ರತಿ ಹಂತವನ್ನೂ ಕೃಷಿಕರು ಸಂಭ್ರಮಿಸುತ್ತಾರೆ. ಅದರಲ್ಲೂ ಕಾರ ಹುಣ್ಣಿಮೆ ಬಂತೆಂದರೆ ಎತ್ತುಗಳನ್ನು ಸಿಂಗರಿಸಿ ಸಂಭ್ರಮಿಸುವ ಪರಿಗೆ ಪಾರವೇ ಇರುವುದಿಲ್ಲ.

ಕಾರ ಹುಣ್ಣಿಮೆ ಮುಗಿದ ನಂತರವೇ ಮಳೆಗಾಲ ಆರಂಭವಾಗುತ್ತದೆ ಎಂಬುದು ವಾಡಿಕೆ. ಜ್ಞಾನಪೀಠ ಪುರಸ್ಕೃತ ದ.ರಾ.ಬೇಂದ್ರೆ ಅವರೂ ತಮ್ಮ ‘ಮೇಘದೂತ’ ಕಾವ್ಯದಲ್ಲಿ; “ಆಗಲಿ ಇದ್ದರೂ ಆಸೆಗೊಂಡಿರಲು ಗಿರಿಯೊಳಂತೂ ಇತ್ತು ಕೆಲವೇ ತಿಂಗಳಲ್ಲಿ ಚಿನ್ನ ಕಡಗ ಮೊಳಕೈಗೆ ಸರಿದು ಬಂತು ಕಾರ ಹುಣ್ಣಿಮೆಯ ಮಾರನೆಯ ದಿನವೇ ಮೋಡ ಕೋಡನಪ್ಪಿ ಕಂಡಿತೊಡ್ಡಿ ನೋಡ ಢಿಕ್ಕಿಯಾಡುವಾ ಆನೆ ಬೆಡಗನೊಪ್ಪಿ”

ಎಂದು ಕಾರ ಹುಣ್ಣಿಮೆಯನ್ನು ಬಣ್ಣಿಸಿದ್ದಾರೆ. ಇನ್ನು ಮುಂಗಾರು ಬೆಳೆ ಬಿತ್ತನೆಯಾದ ಬಳಿಕ ಬರುವ ಮೊದಲ ಹಬ್ಬವೂ ಕಾರ ಹುಣ್ಣಿಮೆಯೇ ಆಗಿದೆ. ಜೇಷ್ಠ ಮಾಸದಲ್ಲಿ ಬರುವ ಕಾರ ಹುಣ್ಣಿಮೆ ಈ ಬಾರಿ ರೈತರ ಸಂಭ್ರಮ ಇಮ್ಮಡಿಗೊಳಿಸಿದೆ. ಕಾರಣ, ಈ ಬಾರಿ ರೋಹಿಣಿ ಮತ್ತು ಮೃಗಶಿರಾ ಮಳೆಗಳು ಉತ್ತಮವಾಗಿ ಸುರಿದು, ಭೂರಮೆ ಹಸಿರು ಸೀರೆಯನುಟ್ಟು ಕಂಗೊಳಿಸುತ್ತಿದ್ದಾಳೆ. ವಾರ, ಎರಡು ವಾರಗಳ ಹಿಂದೆ ಬಿತ್ತಿದ ಬೆಳೆಗಳು ಗೇಣುದ್ದ ಬೆಳೆದು ಹೊಲಗಳಲ್ಲೂ ಹಸಿರು ಕಳೆಗಟ್ಟಿದೆ. ಈ ಮುನ್ನ ಭೂಮಿಯನ್ನು ಉತ್ತು, ಬಿತ್ತಿ ಬಸವಳಿದಿರುವ ಎತ್ತುಗಳಿಗೆ ವಿಶ್ರಾಂತಿ ನೀಡಲೆಂದು ಬಂದಿರುವುದೇ ಕಾರ ಹುಣ್ಣಿಮೆ ಹಬ್ಬ.

ಹಬ್ಬದ ದಿನ (ಈ ಬಾರಿ ಜೂನ್ 24) ಎತ್ತುಗಳನ್ನು ಮೈತೊಳೆದು, ಮಿರಿಮಿರಿ ಮಿಂಚುವAತೆ ಮಾಡುವ ರೈತರು, ಕೊಂಬುಗಳಿಗೆ ಬಣ್ಣ ಹಚ್ಚಿ, ಕೊರಳಿಗೆ ಘಂಟೆ, ಹಣೆಪಟ್ಟಿ, ಬಲೂನು, ಟೇಪು, ರಿಬ್ಬನ್ನು ಬಣ್ಣದ ಪರಿಪರಿ ಮತ್ತಿತರ ಅಲಂಕಾರಿಕ ಸಾಮಗ್ರಿಗಳನ್ನು ಕಟ್ಟಿ, ಮೈಮೇಲೆ ಚಿತ್ರ ಬರೆದು, ರಂಗುರAಗಿನ ಬಟ್ಟೆಯ ಹೊದಿಸಿ ಅಂದವಾಗಿ ಅಲಂಕರಿಸುತ್ತಾರೆ. ಜೊತೆಗೆ ತಮಗಾಗಿ ಮಾಡಿಕೊಂಡ ವಿವಿಧ, ರುಚಿಯಾದ ಸಿಹಿ ಭಕ್ಷ ಭೋಜ್ಯಗಳನ್ನು ಎತ್ತುಗಳಿಗೆ ಉಣಬಡಿಸಿ ಸಂಭ್ರಮಿಸುತ್ತಾರೆ.

ಯುಗಾದಿ ನಂತರ ಬಹು ದಿನಗಳವರೆಗೂ ಕೃಷಿಕರ ಮನೆಗಳಲ್ಲಿ ಹಬ್ಬಗಳ ಸುಳಿವಿರುವುದಿಲ್ಲ. ಈ ನಡುವೆ ಬರುವ ಕಾರ ಹುಣ್ಣಿಮೆಯ ದಿನ ಬೆಳ್ಳಂಬೆಳಗ್ಗೆಯೇ ಎತ್ತು, ಹೋರಿಗಳ ಮೈತೊಳೆದು, ಮೊದಲ ಸೂರ್ಯ ರಷ್ಮಿ ಅವುಗಳನ್ನು ಸ್ಪರ್ಶಿಸಲೆಂದು ಹೊರಗೆ ಕರೆದೊಯ್ಯುವ ಪದ್ಧತಿ ಉತ್ತರ ಕರ್ನಾಟಕದಲ್ಲಿ ಆಚರಣೆಯಲ್ಲಿದೆ. ಎತ್ತುಗಳಿಗೆ ಮನೆಯವರೆಲ್ಲ ಸೇರಿ ಪೂಜೆ ಸಲ್ಲಿಸಿ, ನೈವೇದ್ಯ ಸಮರ್ಪಿಸಿದ ಬಳಿಕ ಕುಟುಂಬದ ಎಲ್ಲಾ ಸದಸ್ಯರೂ ಒಗ್ಗೂಡಿ ನಮಿಸುವುದು ಸಮರ್ಪಣಾ ಭಾವದ ಸಂಕೇತವಾಗಿದೆ.

ಈ ವೇಳೆ ಪುಟ್ಟ ಮಕ್ಕಳು, ತಮ್ಮಷ್ಟೇ ಪುಟ್ಟದಾಗಿರುವ ಕರುಗಳನ್ನು ತೊಳೆದು, ಸಿಂಗಾರ ಮಾಡಿ, ಊರಿನ ಓಣಿಗಳಲ್ಲಿ ಓಡಾಡಿಸುವುದೂ ಉಂಟು. ಕೆಲವು ಗ್ರಮಗಳಲ್ಲಿ ಕಾರ ಹುಣ್ಣಿಮೆಯ ದಿನ ಸಂಜೆ ಹೊತ್ತಿಲ್ಲಿ ಎತ್ತುಗಳನ್ನು ಊರಿನ ಪ್ರಮುಖ ರಸ್ತೆಯಲ್ಲಿ ಮೆರವಣಿಗೆ ಮಾಡಿ ಇಡೀ ಊರಿಗೆ ಊರೇ ಸಂಭ್ರಮದಲ್ಲಿ ಮುಳುತ್ತದೆ. ಇದರೊಂದಿಗೆ ಎತ್ತುಗಳನ್ನು ಬೆಂಕಿಯಲ್ಲಿ ಹಾಯಿಸಿ (ಕಿಚ್ಚು ಹಾಯಿಸಿ), ಕರಿ ಹರಿಯುವ ಮೂಲಕ ಅವುಗಳ ಸಾಮರ್ಥ್ಯ ಅಳೆಯುವ ಆಚರಣೆ ಕೂಡ ಕೆಲವೆಡೆ ಜಾರಿಯಲ್ಲಿದೆ.

ಸಂಭ್ರಮದ ಆಚರಣೆ

ಬೀದರ್, ಕಲಬುರ್ಗಿ, ರಾಯಚೂರು, ಯಾಗದಿರಿ ಸೇರಿ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಗುರುವಾರ (ಜೂನ್ 24) ಕಾರ ಹುಣ್ಣಿಮೆಯನ್ನು ಸಂಭ್ರಮದಿAದ ಆಚರಿಸಲಾಯಿತು. ಬೆಳಗ್ಗೆಯೇ ಜೋಡೆತ್ತುಗಳನ್ನು ಹಿಡಿದುಕೊಂಡು ಹಳ್ಳ, ಕೆರೆಗಳಿಗೆ ಹೋದ ರೈತರು, ಎತ್ತುಗಳ ಮೈ ತೊಳೆದು, ಸಿಂಗರಿಸಿ, ಪೂಜಿಸುವ ಮೂಲಕ ಸಂಭ್ರಮಿಸಿದರು. ಮನೆಗಳಲ್ಲಿ ಹೋಳಿಗೆ ಸೀಕರಣೆ ಮತ್ತಿತರ ಸಿಹಿ ಅಡುಗೆಗಳನ್ನು ಮಾಡಿ, ತಾವೂ ಸೇವಿಸಿ, ಎತ್ತುಗಳಿಗೂ ತ್ತಿನ್ನಿಸಿದ್ದು ಕಂಡುಬAತು. ‘ದೇಶದ ಬೆನ್ನೆಲುಬಾಗಿರುವ ರೈತ ತನಗೆ ಬೆನ್ನೆಲುಬಾಗಿರುವ ಎತ್ತುಗಳನ್ನು ಅತ್ಯಂತ ಪೂಜನೀಯ ಭಾವದಿಂದ ಕಾಣುತ್ತಾನೆ. ಆದ್ದರಿಂದಲೇ ವರ್ಷವಿಡೀ ತನ್ನೊಂದಿಗೆ ದುಡಿಯುವ ಎತ್ತುಗಳಿಗೆ ಕೃತಜ್ಞತೆ ಸಮರ್ಪಿಸುವ ದೃಷ್ಟಿಯಿಂದ ಈ ಹಬ್ಬವನ್ನು ಆಚರಿಸಲಾಗುತ್ತದೆ’ ಎನ್ನುತ್ತಾರೆ ದಾವಣಗೆರೆಯ ರೈತ ರೇವಣಸಿದ್ದನಗೌಡ.