ಮುಂಗಾರು ಹಂಗಾಮಿಗೆ ಜಿಲ್ಲೆಯ ಪ್ರಮುಖ ಬೆಳೆಯಾದ ತೊಗರಿ ಮಳೆಯಾಶ್ರಿತ ಮತ್ತು ನೀರಾವರಿ ಬೆಳೆಗೆ ಬೆಳೆ ವಿಮೆಗೆ ಜಿಲ್ಲೆಯ ರೈತರು ನೋಂದಣಿ ಮಾಡಿಕೊಳ್ಳಲು 2021ರ ಜುಲೈ 31 ಕೊನೆಯ ದಿನವಾಗಿದೆ ಎಂದು ಕಲಬುರಗಿ ಜಂಟಿ ಕೃಷಿ ನಿರ್ದೇಶಕರು ತಿಳಿಸಿದ್ದಾರೆ.
ಕಲಬುರಗಿ ಜಿಲ್ಲೆಗೆ 2021 ರ ಮುಂಗಾರು ಹಂಗಾಮಿಗೆ ಕರ್ನಾಟಕ ರೈತ ಸುರಕ್ಷಾ ಪ್ರಧಾನ ಮಂತ್ರಿ ಫಸಲ್ ಬಿಮಾ (ವಿಮಾ) ಯೋಜನೆ ಅನುಷ್ಟಾನಗೊಳಿಸಲು ಬೆಂಗಳೂರಿನ ಯುನಿವರ್ಸಲ್ ಸೊಂಪೊ ಜೆನೆರಲ್ ಇನ್ಸುರೆನ್ಸ್ ಕಂಪನಿ ಲಿ. ವಿಮಾ ಸಂಸ್ಥೆ ನಿಗದಿಪಡಿಸಲಾಗಿದೆ.
ಪ್ರಸ್ತಕ ಸಾಲು ಮತ್ತು ಮುಂಗಾರು ಹಂಗಾಮಿನಲ್ಲಿ ಮಳೆ ಅಭಾವ ಅಥವಾ ಇತರೆ ಪ್ರತಿಕೂಲ ಹವಾಮಾನ ಪರಿಸ್ಥಿತಿಗಳಿಂದ ಅಥವಾ ಸ್ಧಳ, ನಿರ್ದಿಷ್ಟ, ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ, ಬೆಳೆ ಮುಳುಗಡೆ, ಮೇಘ ಸ್ಪೋಟ ಮತ್ತು ಗುಡುಗು ಮಿಂಚುಗಳಿAದಾಗಿ ಉಂಟಾಗುವ ಬೆಂಕಿ ಅವಗಡ ಸಂದರ್ಭದಲ್ಲಿ ಬೆಳೆ ನಷ್ಟವುಂಟಾದರೆ ರೈತರು ಬೆಳೆ ವಿಮೆಯ ಸದುಪಯೋಗ ಪಡೆಯಬಹುದಾಗಿದೆ.
ರೈತ ಭಾಂದವರು ಉಳಿದ ಬೆಳೆಗಳ ಆಯ್ಕೆಗೆ ಹತ್ತಿರದ ರೈತ ಸಂಪರ್ಕ ಕೇಂದ್ರ ಅಥವಾ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯನ್ನು ಹಾಗೂ ನೋಂದಣಿಗಾಗಿ ತಮ್ಮ ಹತ್ತಿರದ ಬ್ಯಾಂಕುಗಳಿಗೆ ಅಥವಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಸಂಪರ್ಕಿಸಿ ಬೆಳೆ ವಿಮೆ ನೋಂದಣಿಯ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ.
Localized calamity ಯಡಿ ಅತಿ ಮಳೆ, ಪ್ರವಾಹದಿಂಗಾಗಿ ಬೆಳೆ ಹಾನಿಯಾದ ಕುರಿತು ಈಗಾಗಲೇ ವಿಮೆ ಮಾಡಿಸಿದ ರೈತರು 72 ಗಂಟೆಯೊಳಗೆ ಸಹಾಯವಾಣಿ ಸಂಖ್ಯೆ 1800-200-5142 ಕರೆ ಮಾಡಿ ಮಾಹಿತಿ ನೀಡಬೇಕು.
ಜಿಲ್ಲೆಯ ರೈತರು ಮತ್ತಿತರ ಹೆಚ್ಚಿನ ಮಾಹಿತಿಗಾಗಿ ಸಂಬಂಧಪಟ್ಟ ತಮ್ಮ ತಾಲೂಕಿನ ಹತ್ತಿರದ ರೈತ ಸಂಪರ್ಕ ಕೇಂದ್ರವನ್ನು ಅಥವಾ ಸಹಾಯಕ ಕೃಷಿ ನಿರ್ದೇಶಕರ ಕಚೇರಿಗೆ ಸಂಪರ್ಕಿಸಬೇಕೆಂದು ಅವರು ತಿಳಿಸಿದ್ದಾರೆ.
ಏನಿದು ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ?
ಬೆಳೆ ನಷ್ಟ, ಬೆಳೆ ವಿಫಲಗೊಂಡ ಸಂದರ್ಭದಲ್ಲಿ ನಷ್ಟ ಹೊಂದಿದ ರೈತರ ಕೈಹಿಡಿಯಲು ರಾಜ್ಯ ಸರ್ಕಾರವು ಕೇಂದ್ರ ಸರ್ಕಾರದ ಸಹಭಾಗೀತ್ವದಲ್ಲಿ ಕರ್ನಾಟಕ ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆಯನ್ನು ಅನುಷ್ಠಾನಗೊಳಿಸಿದೆ.
ಈ ಯೋಜನೆಯಡಿ ಹಿಂಗಾರು ಹಂಗಾಮಿನಲ್ಲಿ ನಿರ್ಧಿಷ್ಟ ಪ್ರಕೃತಿ ವಿಕೋಪಗಳಾದ ಆಲಿಕಲ್ಲು ಮಳೆ, ಭೂ ಕುಸಿತ ಮತ್ತು ಬೆಳೆ ಮುಳುಗಡೆ ಗಳಿಂದ ಉಂಟಾಗುವ ನಷ್ಟದ ನಿರ್ಧರಣೆಯನ್ನು ವೈಯಕ್ತಿಕವಾಗಿ ನಿರ್ಧರಿಸಿ ಬೆಳೆ ವಿಮಾ ನಷ್ಟ ಪರಿಹಾರವನ್ನು ನೀಡಲಾಗುವುದು.
ಒಂದು ವೇಳೆ ಒಂದು ಅಧಿಸೂಚಿತ ಘಟಕದಲ್ಲಿ ಶೇಕಡಾ 25 ಕ್ಕಿಂತ ಹೆಚ್ಚು ವಿಸ್ತೀರ್ಣದಲ್ಲಿ ಬೆಳೆ ನಷ್ಟವಾದರೆ ಆ ಅಧಿಸೂಚಿತ ಘಟಕದಲ್ಲಿ ಬೆಳೆ ವಿಮೆಗೆ ಒಳಪಟ್ಟ ರೈತರಲ್ಲಿ ಬೆಳೆ ನಷ್ಟವಾದ ರೈತರಿಗೆ ಮಾತ್ರ ಮಾದರಿ ಸಮೀಕ್ಷೆಗನುಣವಾಗಿ ಬೆಳೆ ನಷ್ಟ ಪರಿಹಾರವನ್ನು ಇತ್ಯರ್ಥಪಡಿಸಲಾಗುವುದು.
ವಿಮೆ ಮಾಡಿಸಿರುವ ರೈತರು ಈ ಬಗ್ಗೆ ಸಂಬಂಧಪಟ್ಟ ಹಣಕಾಸು ಸಂಸ್ಥೆ ಅಥವಾ ವಿಮಾ ಸಂಸ್ಥೆಯ ಕಚೇರಿಗಳಿಗೆ 48 ಗಂಟೆಯೊಳಗೆ ಮಾಹಿತಿ ನೀಡಬೇಕು. ಯಾವುದೇ ಸಂದರ್ಭದಲ್ಲಿ ವಿಮೆ ಮಾಡಿಸಿದ ಬೆಳೆಯ ವಿವರಗಳನ್ನು, ಹಾನಿಯ ವ್ಯಾಪ್ತಿ ಹಾಗೂ ಹಾನಿಗೆ ಕಾರಣವನ್ನು 48 ಗಂಟೆಗಳೊಳಗಾಗಿ ತಿಳಿಸಿದಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗುವುದು.