News

ನಿರುದ್ಯೋಗಿಗಗಳಿಗೆ ಗುಡ್ ನ್ಯೂಸ್-ಗದಗನಲ್ಲಿ ಜ. 19 ರಂದು ಉದ್ಯೋಗ ಮೇಳ

15 January, 2021 8:18 PM IST By:
job fair

ಉದ್ಯೋಗಕ್ಕಾಗಿ ಕಾದು ಕುಳಿತಿರುವ ನಿರುದ್ಯೋಗಿಗಳಿಗೆ ಇಲ್ಲಿದೆ ಸಂತಸದ ಸುದ್ದಿ. ಕೊರೋನಾ ಲಾಕ್ಡೌನ್ ನಿಂದಾಗಿ ಕೆಲಸ ಕಳೆದುಕೊಂಡಿದ್ದೀರಾ... ಹೊಸದಾಗಿ ಯಾವುದಾದರೂ ಕಂಪನಿಯಲ್ಲಿ ಸೇರಬೇಕೆಂದುಕೊಂಡಿದ್ದರೆ ನಿಮಗಿಲ್ಲಿದೆ ಗುಡ್ ನ್ಯೂಸ್.

ಹೌದು, ಗದಗ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಿಂದ ಜ.19ರಂದು ಬೆಳಿಗ್ಗೆ 10ರಿಂದ ಸಂಜೆ 4ರವರೆಗೆ ನಗರದ ರೋಟರಿ ಸರ್ಕಲ್ ಹತ್ತಿರದ ಬಸವೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ರಾಷ್ಟ್ರೀಯ ವೃತ್ತಿ ಸೇವಾ ಯೋಜನೆ ಅಡಿಯಲ್ಲಿ ಉದ್ಯೋಗ ಮೇಳ ಹಮ್ಮಿಕೊಳ್ಳಲಾಗಿದೆ.

ಉದ್ಯೋಗ ಮೇಳದಲ್ಲಿ ಕೋಲಾರದ ಎಸ್‌ಬಿಎಂಎಸ್‌ ಹೊಂಡಾ, ಗದುಗಿನ ಆರ್.ಎನ್.ಎಸ್. ಮೋಟಾರ್ಸ್, ಸ್ಪಂದನಾ ಮೈಕ್ರೋ ಫೈನಾನ್ಸ್ ಪ್ರೈವೇಟ್‌ ಲಿಮಿಟೆಡ್‌, ಎಸ್‌ಬಿಐ ಲೈಫ್ ಇನ್ಶುರೆನ್ಸ್‌, ದೀನಬಂಧು, ಬೆಂಗಳೂರಿನ ಇನ್ಫೋಸೋರ್ಸ್‌ ಪ್ರೈ. ಲಿಮಿಟೆಡ್‌, ಅಪೊಲೊ ಮೆಡಿಸ್ಕಿಲ್ಸ್, ಹುಬ್ಬಳ್ಳಿಯ ಯುರೇಕಾ ಪೋರ್ಬ್ಸ್‌, ಜೈಕಿಸಾನ್ ಗ್ರೀನ್ ಕೇರ್ ಪ್ರೈ. ಲಿಮಿಟೆಡ್‌, ಸಿಮನ್ ಸ್ಟಾಪಿಂಗ್ ಸೊಲುಶನ್ಸ್, ನವಭಾರತ ಫರ್ಟಿಲೈಜರ್ಸ್‌, ಬಿಜಾಪುರದ ಶಿವಯೋಗಿ ಎಕೊ ಅಗ್ರಿ ಸೈನ್ಸ್ ಪ್ರೈ. ಲಿಮಿಟೆಡ್, ಹಾಸನದ ಹಿಮ್ಮತ್‌ಸಿಂಗ್‌, ಧಾರವಾಡದ ಕನೆಕ್ಟ್ ಆಟೊ ಪ್ರೈ. ಲಿಮಿಟೆಡ್‌ ಕಂಪನಿಗಳು ಭಾಗವಹಿಸಲಿವೆ.

ಎಸ್ಸೆಸ್ಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೊಮಾ, ಪದವೀಧರರು, ತಾಂತ್ರಿಕ ಪದವೀಧರರು 18ರಿಂದ 35 ವರ್ಷದೊಳಗಿನ ಪುರುಷ ಮತ್ತು ಮಹಿಳಾ ಅಂಗವಿಕಲ ಅಭ್ಯರ್ಥಿಗಳು ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದು.

ಅಂಗವಿಕಲ ಅಭ್ಯರ್ಥಿಗಳಿಗೆ ಸೂಕ್ತ ತರಬೇತಿ ಮತ್ತು ಉದ್ಯೋಗಾವಕಾಶಕ್ಕಾಗಿ ಗದುಗಿನ ದೀನಬಂಧು ಸಂಸ್ಥೆಯವರು ಉದ್ಯೋಗ ಮೇಳದಲ್ಲಿ ಭಾಗವಹಿಸುತ್ತಾರೆ. ಅಭ್ಯರ್ಥಿಗಳು ತಮ್ಮ ವಿದ್ಯಾರ್ಹತೆಯ ಅಂಕಪಟ್ಟಿಗಳ ಝೆರಾಕ್ಸ್ ಪ್ರತಿಗಳು, ಬಯೋಡೇಟಾ ಜತೆಗೆ ಆಧಾರ್‌ ಕಾರ್ಡ್ ಝೆರಾಕ್ಸ್‌ ಪ್ರತಿಗಳೊಂದಿಗೆ ಭಾಗವಹಿಸಬಹುದು. ಉದ್ಯೋಗ ಮೇಳದಲ್ಲಿ ಭಾಗವಹಿಸುವ ಎಲ್ಲ ಅಭ್ಯರ್ಥಿಗಳು ಮೊದಲಿಗೆ ನೋಂದಣಿ ಮಾಡಿಸುವುದು ಕಡ್ಡಾಯ.

ಮಾಹಿತಿಗಾಗಿ ಉದ್ಯೋಗ ವಿನಿಮಯ ಕಚೇರಿಯ ದೂ. ಸಂಖ್ಯೆ 08372-220609, 63633 30688, 99012 03229ಗೆ ಸಂಪರ್ಕಿಸಬಹುದು ಎಂದು ಪ್ರಕಟಣೆ ತಿಳಿಸಿದೆ.