ದೇಶಾದ್ಯಂತ ಕೊರೋನಾ 2ನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ 2020-21ನೇ ಸಾಲಿನ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಕೆಗೆ ವಿಧಿಸಲಾಗಿದ್ದ ಜುಲೈ 31 ರ ಗಡುವನ್ನು ಸೆಪ್ಟೆಂಬರ್ 30ರವರೆಗೆ ವಿಸ್ತರಿಸಿದೆ. ಹೌದು, ಈಗಾಗಲೇ ದೇಶಾದ್ಯಂತ ಬಹುತೇಕ ಎಲ್ಲಾ ರಾಜ್ಯಗಳಲ್ಲಿ ಲಾಕ್ಡೌನ್ ಜಾರಿಯಿರುವುದರಿಂದ ತೆರಿಗೆದಾರರಿಗೆ ಸಮಸ್ಯೆಯಾಗುತ್ತಿರುವುದರಿಂದ ಸರ್ಕಾರ ಈ ನಿರ್ಧಾರ ತೆಗೆದುಕೊಂಡಿದೆ.
ಸಾಮಾನ್ಯವಾಗಿ ವ್ಯಕ್ತಿಗಳು ಜುಲೈ 31ರೊಳಗೆ ಕಂಪನಿಗಳು ಅಕ್ಟೋಬರ್ 31ರೊಳಗೆ ತಮ್ಮ ಆದಾಯ ತೆರಿಗೆ ವಿವರ ಸಲ್ಲಿಸಬೇಕು. ಸಾಂಕ್ರಾಮಿಕವು ತೀವ್ರವಾಗಿರುವ ಕಾರಣ, ತೆರಿಗೆ ಪಾವತಿದಾರರ ಅನುಕೂಲಕ್ಕಾಗಿ ಈ ಗಡುವು ವಿಸ್ತರಿಸಲಾಗಿದೆ ಎಂದು ನೇರ ತೆರಿಗೆಗಳ ಕೇಂದ್ರ ಮಂಡಳಿ (ಸಿಬಿಡಿಟಿ) ಹೇಳಿದೆ. ಉದ್ಯೋಗದಾತರು ಉದ್ಯೋಗಿಗಳಿಗೆ ಫಾರ್ಮ್ -16 ನೀಡುವುದಕ್ಕೆ ಇರುವ ಗಡುವನ್ನು ಜುಲೈ 31ರವರೆಗೆ ವಿಸ್ತರಿಸಲಾಗಿದೆ.
ಜೊತೆಗೆ ಕಂಪನಿಗಳಂತೆ ತೆರಿಗೆ ಪಾವತಿದಾರರಿಗೆ ಗಡುವು ಅಥವಾ ಆಡಿಟ್ ಮಾಡಬೇಕಾದ ಸಂಸ್ಥೆಗಳ ಅವಧಿಯು ಅಕ್ಟೋಬರ್ 31 ಆಗಿದೆ. ಇದರೊಂದಿಗೆ ಜೂನ್ 7 ರಂದು ಆದಾಯ ತೆರಿಗೆ ಕಟ್ಟಲು ಹೊಸ ವೆಬ್ ತಾಣ http://www.incometaxindiaefiling.gov.in/home ವನ್ನು ಇಲಾಖೆ ಪರಿಚಯಿಸುತ್ತಿದೆ.
ಆಡಿಟ್ ರಿಪೋರ್ಟ್(Audit Report) ಮತ್ತು ಟ್ರಾನ್ಸ್‌ಫರ್ ಪ್ರೈಸಿಂಗ್ ಸರ್ಟಿಫಿಕೆಟ್ ಸಲ್ಲಿಸುವ ದಿನಾಂಕವನ್ನು ಕ್ರಮವಾಗಿ ಅಕ್ಟೋಬರ್ 31 ಮತ್ತು ನವೆಂಬರ್ 30 ರವರೆಗೆ ವಿಸ್ತರಿಸಲಾಗಿದೆ. ಪರಿಷ್ಕೃತ ಆದಾಯವನ್ನು ಸಲ್ಲಿಸಲು, ಅಂತಿಮ ದಿನಾಂಕವು ಈಗ ಜನವರಿ 31, 2022 ಆಗಿದೆ. ಬಾಕಿ ದಿನಾಂಕಗಳ ವಿಸ್ತರಣೆಯು ತೆರಿಗೆ ಅನುಸರಣಾ ವಿಷಯದಲ್ಲಿ ತೆರಿಗೆದಾರರಿಗೆ ಸ್ವಲ್ಪ ಪರಿಹಾರವನ್ನು ಒದಗಿಸುವ ಸಾಧ್ಯತೆಯಿದೆ.
1.41 ಲಕ್ಷ ಕೋಟಿ ರೂಪಾಯಿ ಜಿಎಸ್ಟಿ ಸಂಗ್ರಹ
ಏಪ್ರೀಲ್ನಲ್ಲಿ ದಾಖಲೆಯ 1.41 ಲಕ್ಷ ಕೋಟಿ ರೂಪಾಯಿ ಜಿಎಸ್.ಟಿ ಸಂಗ್ರಹವಾಗಿದೆ. ಮಾರ್ಚ್ ಗೆ ಹೋಲಿಸಿದರೆ ಇದು ಶೇ. 14 ರಷ್ಟು ಹೆಚ್ಚಾಗಿದೆ. ಏಪ್ರೀಲ್ ನಲ್ಲಿ ಸ್ಥಳೀಯ ವಹಿವಾಟು ಮೂಲಕವೇ ಹೆಚ್ಚು ತೆರಿಗೆ ಹರಿದು ಬಂದಿದೆ. ಇದು ಕೂಡ ಕಳೆದ ತಿಂಗಳಿಗೆ ಹೋಲಿಸಿದರೆ ಶೇ. 21 ರಷ್ಟು ಹೆಚ್ಚು ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಕಳೆದ ಏಳು ತಿಂಗಳುಗಳಿಂದ ಪ್ರತೀ ತಿಂಗಳು 1 ಲಕ್ಷ ಕೋಟಿ ರೂಪಾಯಿಗಿಂತ ಹೆಚ್ಚು ಜಿಎಸ್.ಟಿ ಸಂಗ್ರಹವಾಗುತ್ತಿದೆ. ಈ ಮೂಲಕ ದೇಶದ ಆರ್ಥಿಕತೆ ಹಳಿಗೆ ಬರುತ್ತಿರುವುದು ನಿಚ್ಚಳವಾಗಿದೆ ಎಂದು ವಿತ್ತ ಸಚಿವಾಲಯ ಹೇಳಿದೆ.