News

ಮನೆಯೊಳಗೆ ಕಾಣಿಸಿಕೊಳ್ಳುವ ಇರುವೆಗಳ ಸಾಲು ಶುಭಫಲದ ಸೂಚಕವೋ, ಅಶುಭವೋ?

20 July, 2021 10:38 PM IST By:

ನೀವು ಮನೆಯಲ್ಲೇ ಇರಿ, ರಸ್ತೆ ಮೇಲೆ ನಡೆದು ಹೋಗುತ್ತಿರಿ, ಕೃಷಿ ಭೂಮಿಯಲ್ಲಿ ಶ್ರಮಿಸುತ್ತಿರಿ ಇಲ್ಲವೇ ಕಚೇರಿಯಲ್ಲಿ ಕೆಲಸ ಮಾಡುತ್ತಲೇ ಇರಿ ಅಲ್ಲಿ ನಿಮಗೆ ಇರುವೆಗಳು ಕಂಡೇ ಕಾಣುತ್ತವೆ. ಏಕೆಂದರೆ ಇರುವೆಗಳು ಇಲ್ಲದ ಸ್ಥಳವೇ ಇಲ್ಲ. ನಾವು ವಾಸ ಮಾಡುವ ಮನೆಯನ್ನೇ ತೆಗೆದುಕೊಳ್ಳುವುದಾದರೆ, ಮನೆಯ ಯಾವುದೇ ಭಾಗ ಅಂದರೆ, ಅಡುಗೆ ಕೋಣೆ, ಮಲಗುವ ಕೋಣೆ, ದೇವರ ಮನೆ, ನಡುಮನೆ, ಕಡೆಗೆ ಬಚ್ಚಲು ಮನೆಯಲ್ಲೂ ಸಾಲು ಸಾಲು ಇರುವೆಗಳು ಕಾಣಸಿಗುತ್ತವೆ. ಇನ್ನು ದಿನಸಿ ವಸ್ತುಗಳು, ಧಾನ್ಯಗಳನ್ನು ಸಂಗ್ರಹಿಸಿಡುವ ಕೊಠಡಿಗಳಲ್ಲಂತೂ ಇರುವೆಗಳು ಇರಲೇಬೇಕು.

ನಾವು ನಿತ್ಯ ನೋಡುವ, ಆಗಾಗ ಸಕ್ಕರೆ, ಹಿಟ್ಟು ಉಣಬಡಿಸುವ ಈ ಇರುವೆಗಳಿಗೂ ನಮ್ಮ ಜೀವನದಲ್ಲಿ ನಡೆಯುವ ಘಟನೆಗಳು, ಆಗು ಹೋಗುಗಳಿಗೂ ನಿಕಟವಾದ ನಂಟಿದೆ ಎನ್ನುತ್ತದೆ ಜ್ಯೋತಿಷ್ಯ ಶಾಸ್ತ್ರ. ಈ ಇರುವೆಗಳ ಚಲನವಲನ, ಅವು ಮನೆಯೊಳಗೆ ಬರುವ ದಿಕ್ಕು, ಹೊರಗೆ ಹೋಗುವ ಮತ್ತು ಚಲಿಸುವ ದಿಕ್ಕು ನಮ್ಮ ಜೀವನದ ದಿಕ್ಕನ್ನು ಸೂಚಿಸುತ್ತದೆ ಎಂದು ಜ್ಯೋತಿಷಿಗಳು ಹೇಳುತ್ತಾರೆ. ಹಾಗೇ ಇರುವೆಗಳ ಬಣ್ಣ, ಅಂದರೆ ಕಪ್ಪು ಇರುವೆ, ಕೆಂಪು ಇರುವೆಗಳು ಸಹ ಶುಭ-ಅಶುಭದ ಸಂಕೇತಗಳಾಗಿವೆ ಎನ್ನಲಾಗುತ್ತದೆ.

ಮನೆಯ ಯಾವುದೋ ಒಂದು ಮೂಲೆಯಿಂದ ಇರುವೆಗಳು ಹೊರಗೆ ಬರುವುದು ನಮ್ಮ-ನಿಮ್ಮ ಜೀವನದ ಮೇಲೆ ಪರಿಣಾಮ ಬೀರಬಹುದು. ಕೆಂಪು ಇರುವೆ ಅಥವಾ ಕಪ್ಪು ಇರುವೆಗಳ ನಡವಳಿಕೆಯು ವಿವಿಧ ಚಿಹ್ನೆಗಳನ್ನು ಸೂಚಿಸುತ್ತದೆ. ಆದ್ದರಿಂದ ಮನೆಯಲ್ಲಿ ಇರುವೆಗಳು ಕಂಡರೆ ಅವುಗಳ ಚಲನವಲನವನ್ನು ಗಮನಿಸಲು ಮರೆಯದಿರಿ. ಹಾಗೆಯೇ ಮನೆಯಲ್ಲಿ ಇರುವೆಗಳು ಮೇಲಕ್ಕೆ ಅಥವಾ ಕೆಳಕ್ಕೆ ಹೋಗುತ್ತಿವುದು ಹಾಗೂ ಅವುಗಳು ಏನನ್ನಾದರೂ ತಿನನ್ನುತ್ತಿರುವುದು ಮನೆಯಲ್ಲಿ ನಡೆಯಬಹುದಾದ ಅನೇಕ ಘಟನೆಗಳ ಬಗ್ಗೆ ಸೂಚನೆ ನೀಡುತ್ತದೆ.

ಕೆಂಪು ಮತ್ತು ಕಪ್ಪು ಇರುವೆಗಳು

ಕಪ್ಪು ಇರುವೆಗಳು ಮನೆಯೊಳಗೆ ಬರುತ್ತಿದ್ದರೆ, ಅದು ಸಂತೋಷ ಮತ್ತು ಸಮೃದ್ಧಿಯ ಸಂಕೇತ ಎನ್ನಲಾಗುತ್ತದೆ. ಇದರಿಂದ ಮನೆಯಲ್ಲಿ ಸಂತೋಷ ನೆಲೆಸುತ್ತದೆ. ಹಾಗೇ ಕೆಂಪು ಇರುವೆಗಳನ್ನು ದುರದೃಷ್ಟದ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಅಂದರೆ ಭವಿಷ್ಯದ ತೊಂದರೆಗಳು, ವಿವಾದಗಳು, ಹಣವನ್ನು ಖರ್ಚು ಮಾಡುವುದನ್ನು ಈ ಇರುವೆಗಳು ಸೂಚಿಸುತ್ತವೆ.

ಕಪ್ಪು ಇರುವೆಗಳಿಗೆ ಆಹಾರ ನೀಡುವುದು ಉತ್ತಮ ಎಂಬ ಕಾರಣದಿಂದ ಕೆಲವೊಮ್ಮೆ ಸಕ್ಕರೆ, ಹಿಟ್ಟು ಇತ್ಯಾದಿಗಳನ್ನು ಹಾಕುತ್ತಾರೆ. ಅಕ್ಕಿ ತುಂಬಿದ ಪಾತ್ರೆ ಅಥವಾ ಡಬ್ಬದಿಂದ ಇರುವೆಗಳು ಹೊರಬರುತ್ತಿದ್ದರೆ ಅದು ಕೆಲವೇ ದಿನಗಳಲ್ಲಿ ಮನೆಯಲ್ಲಿ ಹಣಕಾಸು ವೃದ್ಧಿಯಾಗಲಿದೆ ಎಂಬ ಸೂಚನೆಯಾಗಿದೆ. ಕಪ್ಪು ಇರುವೆಗಳ ಆಗಮನವನ್ನು ಭೌತಿಕ ಸಂತೋಷಗಳೊAದಿಗೆ ಶುಭವೆಂದು ಪರಿಗಣಿಸಲಾಗುತ್ತದೆ.

ಮತ್ತೊಂದೆಡೆ, ಕೆಂಪು ಇರುವೆಗಳು ಮೊಟ್ಟೆಗಳನ್ನು ಬಾಯಲ್ಲಿ ಕಚ್ಚಿಕೊಂಡು ಮನೆಯಿಂದ ಹೊರ ಹೋಗುವುದನ್ನು ಉತ್ತಮ ಚಿಹ್ನೆ ಎಂದು ಪರಿಗಣಿಸಲಾಗುತ್ತದೆ. ಇಂತಹ ಇರುವೆಗಳು ಮನೆಯಲ್ಲಿ ಹಸಿವಿನಿಂದ ಇದ್ದರೆ ಅದು ದುರದೃಷ್ಟಕರ. ಕಾರಣ, ಇಂತಹ ಇರುವೆಗಳಿಗೆ ತಿನ್ನಲು ಆಹಾರ ನೀಡಬೇಕು ಎಂದು ಜ್ಯೋತಿಷ್ಯ ಶಾಸ್ತ್ರ ಹೇಳುತ್ತದೆ.

ಇರುವೆಗಳ ಆಗಮನದ ದಿಕ್ಕು ಕೂಡ ಬಹಳಷ್ಟು ಮುಖ್ಯವಾಗುತ್ತದೆ. ಮನೆಯಲ್ಲಿ ಉತ್ತರ ದಿಕ್ಕಿನಿಂದ ಕಪ್ಪು ಇರುವೆಗಳು ಬಂದರೆ, ಅವು ಶುಭ ಫಲದ ಸಂಕೇತ ಹೊತ್ತು ತಂದಿವೆ ಎಂದರ್ಥ. ಇರುವೆ ದಕ್ಷಿಣ ದಿಕ್ಕಿನಿಂದ ಬರುತ್ತಿದ್ದರೂ ಸಹ ಮನೆಯಲ್ಲಿ ಶುಭವಾಗುತ್ತದೆ. ಪೂರ್ವ ದಿಕ್ಕಿನಿಂದ ಇರುವೆಗಳ ಆಗಮನವಾಗುತ್ತಿದ್ದರೆ ಮನೆಯವರಿಗೆ ಸಕಾರಾತ್ಮಕ ಸಂದೇಶ ಬರಬಹುದು. ಮತ್ತೊಂದೆಡೆ, ಇರುವೆಗಳು ಪಶ್ಚಿಮ ದಿಕ್ಕಿನಿಂದ ಬಂದಾಗ, ಬಾಹ್ಯ ಪ್ರಯಾಣದ ಸಂದರ್ಭ ಒದಗಿ ಬರುತ್ತದೆ ಎಂದು ನಂಬಲಾಗುತ್ತದೆ.

ಇದು ನಂಬಿಕೆಯ ವಿಷಯ

ಇರುವೆಗಳಿಂದ ಒಳಿತು ಅಥವಾ ಕೆಡುಕಾಗುತ್ತದೆ ಎಂಬುದು ಜ್ಯೋತಿಷ್ಯ ಶಾಸ್ತ್ರದಲ್ಲಿ ಮಾಡಲಾಗಿರುವ ಉಲ್ಲೇಖ. ಜ್ಯೋತಿಷ್ಯವನ್ನು ನಂಬುವವರು ಇವೆಲ್ಲವನ್ನೂ ನಂಬಿತ್ತಾರೆ. ಬೇರೆಯವರೂ ಇದನ್ನು ನಂಬಬೇಕೆAಬ ನಿಯಮವೇನೂ ಇಲ್ಲ. ಇರುವೆಗಳು ಬರುವುದರಿಂದ ನಿಜವಾಗಿಯೂ ಶುಭವೇ, ಅಶುಭವೇ ಎನ್ನುವ ಬಗ್ಗೆ ಜ್ಯೋತಿಷ್ಯ ಹೊರತು ಬೇರೆಲ್ಲೂ ಸರಿಯಾದ ಮಾಹಿತಿ ಇಲ್ಲ. ಆದರೆ ಇದರಿಂದ ಒಳಿತಾಗುತ್ತದೆ ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಲಾಗಿದೆ. ಹೀಗಾಗಿ, ಇರುವೆಗಳು ಮನೆಯೊಳಗೆ ಸಾಲು ಸಾಲಾಗಿ ಓಡಿ ಹೋಗುವಾಗ ಅವುಗಳಿಗೆ ತಿನ್ನಲು ಸ್ವಲ್ಪ ಸಕ್ಕರೆ ನೀಡಿದರೆ ಎಲ್ಲರಿಗೂ ಒಳಿತಾಗುತ್ತದೆ. ಏಕೆಂದರೆ, ಹಸಿದವರಿಗೆ ಅನ್ನ ನೀಡುವುದು ಶುಭ ಫಲದ ಸೂಚನೆ!