News

ರೈತರಿಗೆ ಗುಡ್ ನ್ಯೂಸ್- ಹೈನುಗಾರಿಕೆ (Dairy) ಮೀನುಗಾರಿಕೆಗೆ 2 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿದರದಲ್ಲಿ ಸಾಲ

03 August, 2020 11:03 AM IST By:

ಹೈನುಗಾರಿಕೆ ಮತ್ತು ಮೀನುಗಾರಿಕೆಯಲ್ಲಿ ಆಸಕ್ತಿಯಿರುವ ರೈತಬಾಂಧವರಿಗೆ ಸಹಕಾರ ಇಲಾಖೆ ಗುಡ್ ನ್ಯೂಸ್ ನೀಡಿದೆ. ಕೃಷಿಗೆ ಪೂರಕವಾಗಿ ಹೈನುಗಾರಿಕೆ ಅಥವಾ ಮೀನುಗಾರಿಕೆ (Fisheries) ಕೈಗೊಳ್ಳುವ ರೈತರಿಗೆ ಅನುಕೂಲವಾಗಲೆಂದು ಶೂನ್ಯ ಬಡ್ಡಿ ದರದಲ್ಲಿ  ಸಾಲ ಕೊಡುವ ಯೋಜನೆ ಆರಂಭಿಸಲಾಗಿದ್ದು, ಇದು ದೇಶದಲ್ಲಿಯೇ ಪ್ರಥಮವಾಗಿದೆ.

ಕೊರೋನಾ ಸಂಕಷ್ಟದಿಂದ ಉದ್ಯೋಗ ಕಳೆದುಕೊಂಡು ಗ್ರಾಮಾಂತರ ಪ್ರದೇಶಗಳಿಗೆ ಮರಳಿರುವವರಿಗೆ  ಹಾಗೂ ಹೈನುಗಾರಿಕೆ ಮತ್ತು ಮೀನುಗಾರಿಕೆಯಲ್ಲಿ ತೊಡಗುವ ಆಸಕ್ತರಿಗೆ 2 ಲಕ್ಷ ರೂಪಾಯಿಯವರೆಗೆ ಶೂನ್ಯ ಬಡ್ಡಿ (interest) ದರದಲ್ಲಿ ಸಾಲ ಕೊಡುವ ಹೊಸ ಯೋಜನೆಗೆ ಸಹಕಾರ ಇಲಾಖೆ ಚಾಲನೆ ನೀಡಿದೆ.

ಇದಕ್ಕಿಂತ ಮೊದಲು ಕೃಷಿ ಉದ್ದೇಶಕ್ಕಾಗಿ ಬೆಳೆ ಸಾಲ (Agri loan) ಮಾತ್ರ ಶೂನ್ಯ ಬಡ್ಡಿದರದಲ್ಲಿ ರೈತರ ಕೃಷಿ ಜಮೀನು ಆಧರಿಸಿ 3 ಲಕ್ಷ ರೂ. ವರೆಗೆ ನೀಡಲಾಗುತ್ತಿತ್ತು. ಆದರೆ ಈಗ ಕೃಷಿಗೆ ಪೂರಕವಾಗಿರುವ ಹೈನುಗಾರಿಕೆಯನ್ನು ಕೈಗೊಳ್ಳಲು ಮತ್ತು ಈಗಾಗಲೇ ಹೈನುಗಾರಿಕೆಯಲ್ಲಿ  ತೊಡಗಿರುವವರು ಅದನ್ನು ಅಭಿವೃದ್ಧಿಪಡಿಸಿಕೊಳ್ಳಲು ಅನುಕೂಲವಾಗುವಂತೆ ದುಡಿಯುವ ಬಂಡವಾಳವಾಗಿ 2 ಲಕ್ಷ ರೂ.ವರೆಗೆ ಸಾಲ ನೀಡಲು ನಿರ್ಧರಿಸಿದೆ.

ಸಾಲ 3 ಲಕ್ಷ ಮೀರಿರಬಾರದು:

ಕೃಷಿ ಚಟುವಟಿಕೆಗಳಿಗೆ ರೈತರು ಪಡೆದ ಬೆಳೆ ಸಾಲವೂ ಸೇರಿ 3 ಲಕ್ಷ ರೂ. ಮೀರದಂತೆ ನೋಡಿಕೊಳ್ಳಲು ಸೂಚಿಸಲಾಗಿದೆ. ಅಂದರೆ, ರೈತರು ಬೆಳೆಸಾಲವಾಗಿ ಒಂದು ಲಕ್ಷ ರೂ. ಸಾಲ ಪಡೆದಿದ್ದರೆ ಹೈನುಗಾರಿಕೆ ಅಥವಾ ಮೀನುಗಾರಿಕೆ ಕೈಗೊಳ್ಳಲು ಶೂನ್ಯ ಬಡ್ಡಿದರದಲ್ಲಿ 2 ಲಕ್ಷ ರೂ. ಸಾಲ ಪಡೆಯಬಹುದು.

1.60 ಲಕ್ಷ ರೂ.ವರೆಗೆ ಸಾಲ ಪಡೆಯುವ ರೈತರು ಜಮೀನು ಅಥವಾ ಇನ್ನಾವುದೇ ಆಸ್ತಿ ಖಾತರಿ ನೀಡುವ ಅಗತ್ಯವಿಲ್ಲ. ರೈತರ ಆಧಾರ್‌ ಕಾರ್ಡ್‌ ಅವರ ಉಳಿತಾಯ ಖಾತೆಗೆ ಲಿಂಕ್‌ ಮಾಡಿ ಸಾಲ ಕೊಡಲು ನಿರ್ದೇಶನ ನೀಡಲಾಗಿದೆ. ಅದಕ್ಕಿಂತ ಹೆಚ್ಚಿನ ಸಾಲ ಪಡೆಯುವವರಿಗೆ ರೈತ, ಪತ್ತಿನ ಸಹಕಾರ ಸಂಘ ಮತ್ತು ಹಾಲು ಒಕ್ಕೂಟ- ಮೂವರೂ ಜಂಟಿ ಖಾತರಿ ನೀಡಿ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

ನಿಯಮ ಅನ್ವಯ:

ರೈತರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮತ್ತು ಡಿಸಿಸಿ ಬ್ಯಾಂಕ್‌ಗಳ ಮೂಲಕ ಸಾಲ ಪಡೆಯಲು ಅವಕಾಶ ಕಲ್ಪಿಸಲಾಗಿದೆ. ಸಹಕಾರ ಸಂಘಗಳು ರೈತರು ಅಥವಾ ಹೈನುಗಾರಿಕೆಯಲ್ಲಿ ತೊಡಗಿಸಿಕೊಳ್ಳುವವರಿಗೆ ಕೇಂದ್ರ ಸರಕಾರದ ನಿಯಮದಂತೆ ಶೇ. 7ರ ಬಡ್ಡಿ ದರದಲ್ಲಿ ಸಾಲ ನೀಡಬಹುದು. ಇದನ್ನು ನಿಗದಿತ ಅವಧಿಯಲ್ಲಿ ಮರುಪಾವತಿಸುವವರಿಗೆ ಕೇಂದ್ರ ಸರಕಾರದ ಶೇ.3ರ ಬಡ್ಡಿ ಸಹಾಯಧನ ಮತ್ತು ರಾಜ್ಯ ಸರಕಾರದ ಶೇ. 4 ಬಡ್ಡಿ ಸಹಾಯ ಧನವನ್ನು ಮರು ಪಾವತಿಸುವುದರಿಂದ ರೈತರಿಗೆ ಶೂನ್ಯ ಬಡ್ಡಿದರದಲ್ಲಿಯೇ ಸಾಲ ನೀಡಿದಂತಾಗುತ್ತದೆ.

ಮೀನುಗಾರಿಕೆಗೂ ಶೂನ್ಯ ಬಡ್ಡಿ  ಸಾಲ:


ರಾಜ್ಯದಲ್ಲಿ  ಮೀನುಗಾರಿಕೆ ಕೈಗೊಳ್ಳಲು 2 ಲಕ್ಷ ರೂ. ವರೆಗೆ ಶೂನ್ಯ ಬಡ್ಡಿದರದಲ್ಲಿ  ಸಾಲ ನೀಡಲು ಸಹಕಾರ ಇಲಾಖೆ ಆದೇಶ ಹೊರಡಿಸಿದೆ. ರಾಜ್ಯದಲ್ಲಿ ಸುಮಾರು 6 ಸಾವಿರ ಮಂದಿ ಮೀನುಗಾರ ಸಹಕಾರ ಸಂಘಗಳ ಸದಸ್ಯರಾಗಿದ್ದು, ಸಾಲಕ್ಕಾಗಿ ಈ ವರ್ಷ ಸುಮಾರು 50 ಕೋಟಿ ರೂ. ಮೀಸಲಿಡಲಾಗಿದೆ. ಬಲೆ, ನಾಡದೋಣಿ ಖರೀದಿ, ಮಾರುಕಟ್ಟೆಗೆ ಪೂರಕ ವಸ್ತುಗಳ ಖರೀದಿಗೆ ಅನುಕೂಲ ಕಲ್ಪಿಸಲು ಸರಕಾರ ನಿರ್ಧರಿಸಿದೆ.