News

ವಿಶ್ವಕ್ಕೆ ಅನ್ನ ನೀಡುವ ರೈತರು ಗೌರವದಿಂದ ಬದುಕಿದರೆ ನಮ್ಮ ಜೀವನ ಸಾರ್ಥಕ- ಸಿ.ಎಂ. ಬಿ.ಎಸ್.ಯಡಿಯೂರಪ್ಪ

10 July, 2021 8:11 PM IST By:

ವಿಶ್ವದ ಮಾನವಕುಲಕ್ಕೆ ಅನ್ನ ನೀಡುವ ರೈತರು ನೆಮ್ಮದಿ ಮತ್ತು ಗೌರವದಿಂದ ಬದುಕು ಸಾಗಿಸಿದಾಗ ಮಾತ್ರ ನಮ್ಮ ಜೀವನ ಸಾರ್ಥಕ ಎಂದು ರಾಜ್ಯದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಅಭಿಪ್ರಾಯಪಟ್ಟರು.

ಅವರು ಸಹಕಾರ ಇಲಾಖೆ ಮತ್ತು ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ನಿಯಮಿತದಿಂದ ಶನಿವಾರ ಕಲಬುರಗಿ ನಗರದ ಡಾ. ಎಸ್.ಎಂ.ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ್ದ “ರೈತರಿಗೆ ಬಡ್ಡಿ ರಹಿತ ಸಾಲ” ಪತ್ರ ವಿತರಣಾ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಮಂಜೂರಾತಿ ಪತ್ರ ನೀಡಿ ಮಾತನಾಡಿದರು.

ಗ್ರಾಮೀಣ ಆರ್ಥಿಕತೆಯನ್ನು ಸದೃಢಗೊಳಿಸಲು ಸಹಕಾರಿ ಬ್ಯಾಂಕುಗಳು ಸಹಕಾರಿಯಾಗಿವೆ. ಕಲಬುರಗಿ ಮತ್ತು ಯಾದಗಿರಿ ಜಿಲ್ಲೆಯ ಒಟ್ಟು 1,437 ಗ್ರಾಮಗಳಲ್ಲಿ ಬರುವ 10,000 ರೈತರಿಗೆ ಕೃಷಿ ಪೂರಕ ಚಟುವಟಿಕೆಗಳು ಹಾಗೂ ಮುಂಗಾರು ಹಂಗಾಮಿಗಾಗಿ ಕಡಿಮೆ ಬಡ್ಡಿ ದರದಲ್ಲಿ 50 ಕೋಟಿ ರೂ.ಗಳ ಕೃಷಿ ಅಲ್ಪಾವಧಿ ಬೆಳೆ ಸಾಲವನ್ನು ರೈತರಿಗೆ ವಿತರಿಸುವ ಮೂಲಕ ರೈತರ ಕಾಯಕಕ್ಕೆ ಬೆಂಬಲ ನೀಡಲಾಗುತ್ತಿದೆ ಎಂದ ಅವರು ರಾಜಕುಮಾರ ಪಾಟೀಲ ತೇಲ್ಕೂರ ಅವರ ನೇತೃತ್ವದಲ್ಲಿ ಬ್ಯಾಂಕ್ ಉತ್ತಮ ಪ್ರಗತಿಯತ್ತ ಸಾಗುತ್ತಿದ್ದು, ಕೃಷಿ, ಆರೋಗ್ಯ ಮತ್ತು ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಲಾಗುತ್ತ್ತಿದೆ ಎಂದರು.

ಕಲಬುರಗಿ-ಯಾದಗಿರಿ ಉಭಯ ಜಿಲ್ಲೆಗಳ ರೈತರ ಹಾಗೂ ಗ್ರಾಹಕರ ಸೇವೆಗಾಗಿ ಹಲವು ಆರ್ಥಿಕ ಸೌಲಭ್ಯಗಳನ್ನು ನೀಡುವ ಮೂಲಕ ಆರ್ಥಿಕ ಸ್ವಾವಲಂಬನೆಗೆ ಒತ್ತು ನೀಡಲಾಗುತ್ತಿದೆ. ಕೋವಿಡ್-19ರ ಸಂಕಷ್ಟದ ಅವಧಿಯಲ್ಲಿ ಸಹಕಾರ ಸಂಘಗಳು ಇನ್ನೂ ಹೆಚ್ಚಿನ ಸೇವೆಗಳನ್ನು ತಮ್ಮ ಸದಸ್ಯರುಗಳಿಗೆ ನೀಡಲು ಮುಂದಾಗಿರುವುದಕ್ಕೆ ಸಿ.ಎಂ  ಮೆಚ್ಚುಗೆ ವ್ಯಕ್ತಪಡಿಸಿದರು.

ಡಿ.ಸಿ.ಸಿ. ಬ್ಯಾಂಕಿನಲ್ಲಿ ಸರ್ಕಾರದ ಸಹಭಾಗಿತ್ವವನ್ನು ಪ್ರೋತ್ಸಾಹಿಸಲು ಹಾಗೂ ಷೇರು ಬಂಡವಾಳ ಹೆಚ್ಚಿಸುವ ಉದ್ದೇಶದಿಂದ 21 ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕುಗಳಿಗೆ 10 ಲಕ್ಷ ರೂ.ಗಳ ಗರಿಷ್ಠ ಮಿತಿಗೊಳಪಟ್ಟು ಶೇ.25ರಷ್ಟು ಷೇರು ಬಂಡವಾಳ ನೀಡಲು 2021-22ರ ಆಯವ್ಯಯದಲ್ಲಿ ಘೋಷಿಸಲಾಗಿದೆ. ರಾಜ್ಯದಲ್ಲಿ 5,500 ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಅವುಗಳನ್ನು 198 ಕೋಟಿ ರೂಪಾಯಿಗಳ ವೆಚ್ಚದಲ್ಲಿ ಗಣಕೀಕರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದರು.

ಕಳೆದ ವರ್ಷದಲ್ಲಿ ಸಹಕಾರ ಸಂಘಗಳು ಕೃಷಿ ಕ್ಷೇತ್ರದಲ್ಲಿ 25.67 ಲಕ್ಷ ರೈತರಿಗೆ 16,641 ಕೋಟಿ ರೂ.ಗಳ ಅಲ್ಪಾವಧಿ ಕೃಷಿ ಸಾಲ, 52 ಲಕ್ಷ ರೈತÀರಿಗೆ 1,260.21 ಕೋಟಿ ರೂ.ಗಳ ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಣೆ ಮಾಡಿದ್ದು, ಗುರಿಗೆ ಎದುರಾಗಿ ಶೇ.114ರಷ್ಟು ಸಾಧನೆ ಮಾಡಲಾಗಿದೆ. ಇದರಲ್ಲಿ 57 ಲಕ್ಷ ರೈತರಿಗೆ 105.64 ಕೋಟಿ ರೂ.ಗಳ ಸಾಲವನ್ನು ಹೈನುಗಾರಿಕೆ ಚಟುವಟಿಕೆಗೆ ನೀಡಿದೆ ಎಂದು ವಿವರಿಸಿದರು.

ಪ್ರಸಕ್ತ ಸಾಲಿನಲ್ಲಿ ಕೋವಿಡ್ ಸಂಕಷ್ಟದಲ್ಲಿರುವ ರೈತರಿಗೆ ಹೆಚ್ಚಿನ ಸಾಲ-ಸೌಲಭ್ಯ ನೀಡುವ ಉದ್ದೇಶವನ್ನು ಹೊಂದಿದ್ದು, 30.26 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ರೂ. 19,370 ಕೋಟಿ ಅಲ್ಪಾವಧಿ ಬೆಳೆ ಸಾಲ ಮತ್ತು 60 ಲಕ್ಷ ರೈತರಿಗೆ ಶೇ.3ರ ಬಡ್ಡಿ ದರದಲ್ಲಿ 1,440 ಕೋಟಿ ಮಧ್ಯಮಾವಧಿ, ದೀರ್ಘಾವಧಿ ಸಾಲ ವಿತರಣೆ ಮಾಡುವ ಗುರಿ ಹೊಂದಲಾಗಿದೆ ಎಂದು ತಿಳಿಸಿದರು.

ಇತ್ತೀಚಿಗೆ ಮಳೆಯಿಂದ ರಾಜ್ಯದಲ್ಲಿ ಜಲಾಶಯಗಳು, ಕೆರೆ-ಕಟ್ಟೆಗಳು ತುಂಬಿವೆ. ನಿರೀಕ್ಷೆಗೂ ಮೀರಿ ಮಳೆಯಾಗುತ್ತಿದ್ದು, ಈ ಬಾರಿ ಕಳೆದ ವರ್ಷಕ್ಕಿಂತ ಉತ್ತಮ ಬೆಳೆ ಬರುವ ನಿರೀಕ್ಷೆಯಿದೆ ಎಂದ ಸಿ.ಎಂ, ಜನಸಾಮಾನ್ಯರ ಸಹಾಯಕ್ಕಾಗಿ ಮತ್ತು ಅವರನ್ನು ಆರ್ಥಿಕವಾಗಿ ಸ್ವಾವಲಂಬಿಗಳನ್ನಾಗಿಸುವ ಉನ್ನತ ಉದ್ದೇಶದಿಂದ ಸಹಕಾರ ಬ್ಯಾಂಕ್‌ಗಳು ಕಾರ್ಯನಿರ್ವಹಿಸುತ್ತಿರುವುದು ಶ್ಲಾಘನೀಯ ಎಂದರು.

ಕಾರ್ಯಕ್ರಮದಲ್ಲಿ ಡಿಸಿಎಂ ಗೋವಿಂದ ಕಾರಜೋಳ, ಗಣಿ ಮತ್ತು ಭೂ ವಿಜ್ಞಾನ ಮತ್ತು ಕಲಬುರಗಿ ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ್ ನಿರಾಣಿ, ಸಹಕಾರ ಸಚಿವ ಎಸ್.ಟಿ. ಸೋಮಶೇರ್, ನಗರಾಭಿವೃದ್ಧಿ ಸಚಿವ ಭೈರತಿ ಬಸವರಾಜ, ಸಂಸದ ಡಾ. ಉಮೇಶ್ ಜಾಧವ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ, ಸೇಡಂ ಶಾಸಕ ಹಾಗೂ ಕಲಬುರಗಿ-ಯಾದಗಿರಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ ತೇಲ್ಕೂರ, ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಹಾಗೂ ಕಲಬುರಗಿ ದಕ್ಷಿಣ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ, ಶಾಸಕರುಗಳಾದ ಸುಭಾಷ ಆರ್. ಗುತ್ತೇದಾರ, ಬಸವರಾಜ ಮತ್ತಿಮೂಡ, ಡಾ. ಅವಿನಾಶ ಜಾಧವ, ವಿಧಾನ ಪರಿಷತ್ ಶಾಸಕರುಗಳಾದ ಸುನೀಲ್ ವಲ್ಲ್ಯಾಪುರೆ, ಶಶೀಲ ಜಿ. ನಮೋಶಿ, ಬಿ.ಜಿ.ಪಾಟೀಲ, ಡಾ.ತಳವಾರ ಸಾಯಿಬಣ್ಣಾ, ಕರ್ನಾಟಕ ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷೆ  ಶಶಿಕಲಾ ವಿ. ಟೆಂಗಳಿ, ಕರ್ನಾಟಕ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಯಮಿತದ ಅಧ್ಯಕ್ಷ ಚಂದು ಪಾಟೀಲ,  ಭೀಮರಾಯನಗುಡಿ ಅಚ್ಟುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರ ಕೃಷ್ಣ ಮೇಲ್ದಂಡೆ ಯೋಜನೆ (ಕಾಡಾ) ಅಧ್ಯಕ್ಷ ಶರಣಪ್ಪ ತಳವಾರ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ದಯಾಘನ್ ಧಾರವಾಡಕರ್, ಕಲಬುರಗಿ ಅಚ್ಚುಕಟ್ಟು ಪ್ರಾದೇಶಾಭಿವೃದ್ಧಿ ಪ್ರಾಧಿಕಾರ ನೀರಾವರಿ ಯೋಜನೆಗಳ ವಲಯದ ಅಧ್ಯಕ್ಷ ಹರ್ಷವರ್ಧನ್ ಗುಂಡಪ್ಪ ಗುಳಗೆ, ತೊಗರಿ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಲಿಂಗಾರೆಡ್ಡಿ ಬಾಸರೆಡ್ಡಿ, ಕಲಬುರಗಿ ಎ.ಪಿ.ಎಂ.ಸಿ ಅಧ್ಯಕ್ಷ ಗುರುಬಸಪ್ಪ ಕಣಕಿ, ಡಿ.ಸಿ.ಸಿ ಬ್ಯಾಂಕಿನ ಉಪಾಧ್ಯಕ್ಷ ಸುರೇಶ ಆರ್. ಸಜ್ಜನ್, ಮಾಜಿ ಶಾಸಕರಾದ ಮಾಲೀಕಯ್ಯ ಗುತ್ತೇದಾರ, ದೊಡ್ಡಪ್ಪಗೌಡ ಪಾಟೀಲ ನರಿಬೋಳ್, ಕಲಬುರಗಿ ವಿಭಾಗದ ಪ್ರಾದೇಶಿಕ ಆಯುಕ್ತರು ಹಾಗೂ ಕೆ.ಕೆ.ಆರ್.ಡಿ.ಬಿ. ಮಂಡಳಿಯ ಕಾರ್ಯದರ್ಶಿ  ಡಾ. ಎನ್.ವಿ. ಪ್ರಸಾದ, ಈಶಾನ್ಯ ವಲಯದ ಐ.ಜಿ.ಪಿ. ಮನೀಷ್ ಖರ್ಬಿಕರ್, ಜಿಲ್ಲಾಧಿಕಾರಿ ವಿ.ವಿ. ಜ್ಯೋತ್ಸ್ನಾ, ಕಲಬುರಗಿ ನಗರ ಪೊಲೀಸ್ ಆಯುಕ್ತ ಡಾ. ವೈ.ಎಸ್. ರವಿಕುಮಾರ್, ಜೆಸ್ಕಾಂ ಎಂ.ಡಿ. ರಾಹುಲ್ ಪಾಂಡ್ವೆ, ಜಿಲ್ಲಾ ಪಂಚಾಯತ್ ಸಿ.ಇ.ಓ ಡಾ. ದಿಲೀಷ ಶಶಿ, ಕಲಬುರಗಿ ಜಿಲ್ಲಾ ಪೊಲೀಸ್ ಅಧೀಕ್ಷಕಿ ಡಾ. ಸಿಮಿ ಮರಿಯಮ್ ಜಾರ್ಜ್, ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ ಲೋಖಂಡೆ, ಡಿ.ಸಿ.ಸಿ ಬ್ಯಾಂಕಿನ ಸಿ.ಇ.ಓ ಚಿದಾನಂದ, ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಸೇರಿದಂತೆ ಮತ್ತಿತರ ಜನಪ್ರತಿನಿಧಿಗಳು, ಅಧಿಕಾರಿಗಳು ಇದ್ದರು.