ಬಳ್ಳಾರಿಯಲ್ಲಿ ಅಂತ್ಯಸಂಸ್ಕಾರ ವೇಳೆ ಕೋವಿಡ್ 19 ಸೋಂಕಿತರ ಶವಗಳನ್ನು ಗುಂಡಿಗೆ ಎಸೆದ ಪ್ರಕರಣ ವಿವಾದ ಸೃಷ್ಟಿಸಿರುವ ಬೆನ್ನಲ್ಲೆ ದಾವಣಗೇರೆ ಜಿಲ್ಲೆಯ ಚನ್ನಗಿರಿ ತಾಲೂಕಿನಲ್ಲಿ ಕೋವಿಡ್ -19 ಸೋಂಕಿನಿಂದ ಮೃತಪಟ್ಟ ಮಹಿಳೆಯ ಅಂತ್ಯ ಸಂಸ್ಕಾರ ನಡೆಸಲು ಶವವನ್ನು ಜೆಸಿಬಿ ಯಂತ್ರದಲ್ಲಿ ಹೊತ್ತೊಯ್ದ ವಿಡಿಯೋ ಈಗ ವೈರಲ್ ಆಗಿದೆ.
ಜಿಲ್ಲೆಯ ಚನ್ನಗಿರಿಯಲ್ಲಿ ಕೋವಿಡ್-19 ಸೋಂಕಿನಿಂದ ಮೃತಪಟ್ಟಿದ್ದ ವಯೋವೃದ್ದೆಯ ಶವವನ್ನು ಜೆಸಿಬಿಯಲ್ಲಿ ಹೊತ್ತೊಯ್ದು ಅಂತ್ಯಕ್ರಿಯೆ ನಡೆಸಲಾಗಿದೆ ಎನ್ನಲಾಗಿದೆ.
56 ವರ್ಷದ ಮಹಿಳೆ ಜೂ. 17ರಂದು ಉಸಿರಾಟದ ತೊಂದರೆಯಿಂದ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಾಗಿದ್ದರು. ಮೃತಪಟ್ಟ ನಂತರ ಅಂದೇ ಕೋವಿಡ್-19 ಸೋಂಕು ದೃಢಪಟ್ಟಿತ್ತು. ಮಹಿಳೆ ಶವವನ್ನು ಶ್ರದ್ಧಾಂಜಲಿ ವಾಹನದಲ್ಲಿ ರುದ್ರಭೂಮಿಗೆ ತರಲಾಗಿದೆ. ಜೆಸಿಬಿ ಯಂತ್ರದ ಬಕೆಟನಲ್ಲಿ ಶವವನ್ನು ಇಟ್ಟು ಶವಸಂಸ್ಕಾರ ಮಾಡುವ ಗುಂಡಿಗೆ ತಳ್ಳಿರುವ ಬಗ್ಗೆ ದೃಶ್ಯಗಳು ವಿಡಿಯೋದಲ್ಲಿವೆ. ಶವ ಸಂಸ್ಕಾರ ಮಾಡುವ ಮೂವರು ಸಿಬ್ಬಂದಿ ಪಿಪಿಇ ಕಿಟ್ ಧರಿಸಿದ್ದರೂ ಶವವನ್ನು ಮುಟ್ಟಿಲ್ಲ. ಇದು ರಾಜ್ಯಾದ್ಯಂತ ವ್ಯಾಪಕವಾಗಿ ಟೀಕೆಗೆ ಗುರಿಯಾಗಿದೆ.
ವೃದ್ದೆಯ ಅಂತ್ಯಸಂಸ್ಕಾರ ವೇಳೆ ಲೋಪವಾಗಿದ್ದರೆ ಸಂಬಂಧಿಸಿದವರ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಜಿ. ಬೀಳಗಿ ತಿಳಿಸಿದ್ದಾರೆ.