ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆಯ ಲಾಭ ಪಡೆದುಕೊಳ್ಳುವಂತೆ ಬೀದರ ಲೋಕಸಭಾ ಸದಸ್ಯ ಭಗವಂತ ಖೂಬಾ ಅವರು ರೈತರಿಗೆ ಮನವಿ ಮಾಡಿದ್ದಾರೆ.
ಸೋಮವಾರ ಐವಾನ್-ಇ-ಶಾಹಿ ಅತಿಥಿಗೃಹದಲ್ಲಿ ಕಲಬುರಗಿ ಜಿಲ್ಲೆಯ ಬ್ಯಾಂಕ್ ಮ್ಯಾನೇಜರ್ ಹಾಗೂ ಕೃಷಿ ಇಲಾಖೆ ಅಧಿಕಾರಿಗಳ ಜೊತೆ ಪ್ರಧಾನ ಮಂತ್ರಿ ಫಸಲ್ ಭೀಮಾ ಯೋಜನೆ ಕುರಿತು ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ರೈತರಿಗೆ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯ ಬಗ್ಗೆ ಮಾಹಿತಿ ನೀಡಿ, ಅದರ ಪ್ರಯೋಜನಗಳನ್ನು ತಿಳಿಸಬೇಕು. ಈ ಯೋಜನೆ ಲಾಭ ಪಡೆಯುವಂತಾಗಲು ನೋಂದಣಿಯಾಗದ ರೈತರ ಗುರುತಿಸಿ, ನೋಂದಣಿ ಮಾಡಿಸಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೀದರ ಲೋಕಸಭಾ ವ್ಯಾಪ್ತಿಯ ಕಲಬುರಗಿ ಜಿಲ್ಲೆಯ ಆಳಂದ ಮತ್ತು ಚಿಂಚೋಳಿ ತಾಲ್ಲೂಕುಗಳಲ್ಲಿ ಕಳೆದ ವರ್ಷ ಅತೀ ಕಡಿಮೆ ಫಸಲ್ ಭೀಮಾ ಯೋಜನೆಯಲ್ಲಿ ರೈತರ ನೋಂದಣಿ ಮಾಡಲಾಗಿದೆ ಎಂದು ವಿಷಾದ ವ್ಯಕ್ತಪಡಿಸಿದ ಅವರು, ತಾಲ್ಲೂಕಿನ ಮ್ಯಾನೇಜರಗಳು ಹೆಚ್ಚು ಶ್ರಮವಹಿಸಿ ರೈತರ ನೋಂದಣಿ ಮಾಡಿಸಬೇಕು ಎಂದು ತಿಳಿಸಿದರು.
ಜಿಲ್ಲೆ ಮತ್ತು ತಾಲ್ಲೂಕಿನ ಎಲ್ಲಾ ಬ್ಯಾಂಕ್‌ಗಳ ಮುಂದೆ ರೈತರಿಗೆ ಫಸಲ ಬೀಮಾ ಯೋಜನೆ ನೋಂದಣಿ ಮಾಡಲಾಗುವುದು ಎಂಬ ಫಲಕಗಳನ್ನು ಹಾಕಬೇಕು. ಹಳ್ಳಿಗಳಲ್ಲಿ ಯೋಜನೆಯ ಮೇಳ ಆಯೋಜಿಸಬೇಕು, ಪ್ರತಿ ತಾಲ್ಲೂಕಿನಲ್ಲಿ 2 ವಾಹನಗಳ ಮೂಲಕ ಪ್ರಚಾರ ಮಾಡಬೇಕು ಇನ್ನಿತರ ಜಾಗೃತಿ ಕಾರ್ಯಕ್ರಮಗಳ ಮೂಲಕ ಯೋಜನೆಯ ಉದ್ದೇಶ, ಲಾಭವನ್ನು ಜನರಿಗೆ ತಿಳಿಸಬೇಕು ಎಂದು ಹೇಳಿದರು.
ಪ್ರತಿ ಮನೆ ಬಾಗಿಲಿಗೆ ಕರ ಪತ್ರಗಳನ್ನು ನೀಡುವ ಮೂಲಕ ಮಾಹಿತಿ ನೀಡಿ ಅಧಿಕ ರೈತರು ಈ ಯೋಜನೆಯ ಲಾಭ ಪಡೆಯುವಂತೆ ಬ್ಯಾಂಕ್‌ಗಳ ಸಿಬ್ಬಂದಿಗಳು ಕಾರ್ಯ ನಿರ್ವಹಿಸಬೇಕು. ಪ್ರತಿ ಬ್ಯಾಂಕ್‌ನ ಶಾಖೆಯಲ್ಲಿ ಗ್ರಾಹಕರಾಗಿರುವ ರೈತರ ದೂರವಾಣಿ ಸಂಖ್ಯೆಗೆ ಕರೆ ಮಾಡಿ ಪ್ರಧಾನ ಮಂತ್ರಿ ಫಸಲ ಭೀಮಾ ಯೋಜನೆ ಬಗ್ಗೆ ಮಾಹಿತಿ ನೀಡಿ ಅವರುಗಳು ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳುವಂತೆ ಸೂಕ್ತ ಮಾಹಿತಿಯನ್ನು ನೀಡಬೇಕು ಎಂದರು.
ಸಭೆಯಲ್ಲಿ ಕೃಷಿ ಇಲಾಖೆ ಜಂಟಿ ಕೃಷಿ ನಿರ್ದೇಶಕ ರಿತೇಂದ್ರನಾಥ ಸೂಗೂರು, ಲೀಡ್ ಬ್ಯಾಂಕನ ಮ್ಯಾನೇಜರ್ ಇಂತೆಸಾರ್ ಹುಸೇನ್, ಡಿಸಿಸಿ ಬ್ಯಾಂಕ್ ಜನರಲ್ ಮ್ಯಾನೇಜರ್ ಮುತ್ತು ರಾಜ ಹಾಗೂ ತಾಲ್ಲೂಕಿನ ವಿವಿಧ ಬ್ಯಾಂಕ್ ಮ್ಯಾನೇಜರ್‌ಗಳು ಉಪಸ್ಥಿತರಿದ್ದರು.