ಟಿ20, ಟೆಸ್ಟ್ ಸರಣಿಗಳಲ್ಲಿ ಇಂಗ್ಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಭಾರತ ಏಕದಿನ ಸರಣಿಯಲ್ಲೂ ಬಿರುಸಿನ ಬ್ಯಾಟಿಂಗ್ ಹಾಗೂ ಉತ್ತಮ ಬೌಲಿಂಗ್ ನೆರವಿನಿಂದ ಐತಿಹಾಸಿಕ ಗೆಲುವನ್ನು ದಕ್ಕಿಸಿಕೊಂಡಿದೆ.
ಮೂರನೇ ಏಕದಿನ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಭಾರತ 48.2 ಓವರ್ ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು 329 ರನ್ ಗಳಿಸಿ ಎದುರಾಳಿ ತಂಡಕ್ಕೆ ಗೆಲ್ಲಲು 330 ರನ್ ಗಳ ಗುರಿ ನೀಡಿತು.
ಕಳಪೆ ಬೌಲಿಂಗ್, ಕ್ಯಾಚ್ ಗಳನ್ನು ಕೈಚೆಲ್ಲಿದ ಹೊರತಾಗಿಯೂ ಭಾರತಕ್ಕೆ ಕಡೆಗೂ ವಿಜಯದ ಮಾಲೆ ಒಲಿಯಿತು.ಸ್ಯಾಮ್ ಕರ್ರನ್ ಕಡೆಯವರೆಗೂ ನಡೆಸಿದ ಹೋರಾಟ ವ್ಯರ್ಥವಾಯಿತು. ಅಂತಿಮವಾಗಿ ಇಂಗ್ಲೆಂಡ್ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 322 ರನ್ ಗಳಿಸಿ ಸೋಲೊಪ್ಪಿಕೊಂಡಿತು. ಇದರೊಂದಿಗೆ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಇಂಗ್ಲೆಂಡ್ ವಿರುದ್ದ ಕೊಹ್ಲಿ ಪಡೆ ಗೆದ್ದು ಬೀಗಿದೆ.
329ರನ್ ಗಳ ಸವಾಲಿನ ಬೆನ್ನಹತ್ತಿದ ಇಂಗ್ಲೆಂಡ್ 68 ರನ್ ಗಳಿಸುವಷ್ಟರಲ್ಲೇ ಮೂರು ವಿಕೆಟ್ ಕಳೆದುಕೊಂಡು ಒತ್ತಡಕ್ಕೆ ಸಿಲುಕಿತು. ಇಂಗ್ಲೆಂಡ್ ತಂಡದ ಪರ ಅಗತ್ಯವಿದ್ದ ದೊಡ್ಡ ಮೊತ್ತದ ಜತೆಯಾಟ ಕಟ್ಟಲು ಸಾಧ್ಯವಾಗಲಿಲ್ಲ.
ಸ್ಯಾಮ್ ಕರನ್ 83 ಎಸೆತಗಳಲ್ಲಿ 9 ಬೌಂಡರಿ ಮೂರು ಸಿಕ್ಸರ್ ಗಳ ನೆರವಿನಿಂದ ಅಜೇಯ 95 ರನ್ ಬಾರಿಸಿದರು.ಆದರೆ ಕರ್ರನ್ ಹೋರಾಟ ಇಂಗ್ಲೆಂಡ್ ಗೆ ಜಯ ತಂದುಕೊಡಲಿಲ್ಲ. ಏಕೆಂದರೆ ಪ್ರವಾಸಿ ತಂಡಕ್ಕೆ ಅದೃಷ್ಟವೂ ಕೈಕೊಟ್ಟಿತು. ದಾವಿಡ್ ಧವನ್ 50, ಬೆನ್ ಸ್ಟೋಕ್ 35, ಲಿಯಾಮ್ ಲಿವಿಂಗ್ ಸ್ಟೋನ್ 36, ಮೊಯಿನ್ ಅಲಿ 29 ರನ್ ಗಳಿಸಿದರು.
ಭಾರತದ ಪರ ಶಾರ್ದೂಲ್ ಠಾಕೂರ್ ನಾಲ್ಕು ಹಾಗೂ ಭುವನೇಶ್ವರ್ ಕುಮಾರ್ ಮೂರು ವಿಕೆಟ್ ಪಡೆದರು. ಇದಕ್ಕೂ ಮುನ್ನ ಮೊದಲು ಬ್ಯಾಟ್ ಮಾಡಿದ ಭಾರತ, 48.2 ಓವರ್ ಗಳಲ್ಲಿ 329 ರನ್ ಗಳಿಗೆ ಸರ್ವಪತನ ಕಂಡಿತು.
ರೋಹಿತ್ ಶರ್ಮಾ ಹಾಗೂ ಶಿಖರ್ ಧವನ್ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿ ಮೊದಲ ವಿಕೆಟ್ ಗೆ 103 ರನ್ ಸೇರಿಸಿದರು. ರೋಹಿತ್ 37 ಹಾಗೂ ಧವನ್ 67 ರನ್ ಗಳಿಸಿ ಔಟಾದರು. ಕೊಹ್ಲಿ 7 ರನ್ ಗಳಿಸಿ ಮೊಯಿನ್ ಗೆ ವಿಕೆಟ್ ಒಪ್ಪಿಸಿದರು. ವಿಕೆಟ್ ಕೀಪರ್ ರಿಷಬ್ ಪಂತ್ ಬಿರುಸಿನ ಆಟವಾಡಿ,62 ಎಸೆತಗಳಲ್ಲಿ 5 ಬೌಂಡರಿ ಹಾಗೂ 4 ಸಿಕ್ಸರ್ ಬಾರಿಸಿ 78 ರನ್ ಗಳಿಸಿದರು.
ಮತ್ತೊಂದೆಡೆ ಹಾರ್ದಿಕ್ ಪಾಂಡ್ಯ 44 ಎಸೆತಗಳಲ್ಲಿ ಐದು ಬೌಂಡರಿ ನಾಲ್ಕು ಸಿಕ್ಸರ್ ಸಿಡಿಸಿ 64 ರನ್ ಗಳಿಸಿದರು. ಶಾರ್ದೂಲ್ ಠಾಕೂರ್ 30 ಹಾಗೂ ಕೃನಾಲ್ ಪಾಂಡ್ಯ 25 ರನ್ ಗಳಿಸಿ ಔಟಾದರು. ಮಾರ್ಕ್ ವುಡ್ ಮೂರು ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿದರು. ಇಂಗ್ಲೆಂಡ್ ವಿರುದ್ದ ಮೂರು ಮಾದರಿಯ ಕ್ರಿಕೆಟ್ ನಲ್ಲಿ ಭಾರತ ಜಯಭೇರಿ ಬಾರಿಸಿ ಅದ್ವಿತೀಯ ಸಾಧನೆ ಮಾಡಿದೆ.