News

ಜನವರಿ 16 ರಿಂದ ರಾಷ್ಟ್ರವ್ಯಾಪಿ ಲಸಿಕೆ ಅಭಿಯಾನ ಪ್ರಾರಂಭ

10 January, 2021 8:40 PM IST By:
corona

ಜನವರಿ 16ರಿಂದ ಆದ್ಯತೆ ಮೇರೆಗೆ 3 ಕೋಟಿ ಆರೋಗ್ಯ ಸೇವೆ ಮತ್ತು ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ಹಾಕುವ ಮೂಲಕ ಲಸಿಕೆ ಅಭಿಯಾನ ಆರಂಭಿಸಲಾಗುವುದು ಎಂದು ಕೇಂದ್ರ ಸರ್ಕಾರ ಪ್ರಕಟಿಸಿದೆ.

ಕೋವಿಡ್‌ ಪರಿಸ್ಥಿತಿ ಮತ್ತು ಲಸಿಕೆ ಅಭಿಯಾನದ ಸಿದ್ಧತೆ ಪರಿಶೀಲನೆಗಾಗಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಶನಿವಾರ ನಡೆದ ಉನ್ನತಮಟ್ಟದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ‘ಇದು ಜಗತ್ತಿನ ಅತಿ ದೊಡ್ಡ ಲಸಿಕಾ ಅಭಿಯಾನವಾಗಿದೆ’ ಎಂದು ಪ್ರಧಾನಿ ಬಣ್ಣಿಸಿದ್ದಾರೆ.

‘ಮುಂದಿನ ವಾರದಿಂದ ಲೊಹರಿ, ಮಕರಸಂಕ್ರಾಂತಿ, ಪೊಂಗಲ್‌, ಮಾಘ ಬಿಹು ಮುಂತಾಗಿ ಹಬ್ಬಗಳ ಸಾಲು ಆರಂಭವಾಗಲಿದೆ. ಇದನ್ನೂ ಪರಿಗಣಿಸಿ, ಜ.16ರಿಂದ ಲಸಿಕಾ ಅಭಿಯಾನ ಆರಂಭಿ ಸಲು ತೀರ್ಮಾನಿಸಲಾಗಿದೆ.

‘ಅಭಿಯಾನದಲ್ಲಿ ಮುಂಚೂಣಿಯ ಸುಮಾರು 3 ಕೋಟಿ ಆರೋಗ್ಯ ಕಾರ್ಯಕರ್ತರಿಗೆ ಆದ್ಯತೆ ನೀಡಲಾಗುವುದು. ಇವರ ಬಳಿಕ, 50 ವರ್ಷ ಮೇಲ್ಪಟ್ಟವರು ಹಾಗೂ ಬೇರೆ ಕಾಯಿಲೆಯಿಂದ ಬಳಲುತ್ತಿರುವ 50 ವರ್ಷದೊಳಗಿನವರಿಗೆ ಆದ್ಯತೆಯ ಮೇರೆಗೆ ಲಸಿಕೆ ನೀಡಲಾಗುವುದು. ಇಂಥವರ ಸಂಖ್ಯೆ ಸುಮಾರು 27 ಕೋಟಿಯಷ್ಟಿದೆ’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ದೇಶದಲ್ಲಿ ಸದ್ಯ, 2,24,190 ಸಕ್ರಿಯ ಕೋವಿಡ್ ಪ್ರಕರಣಗಳಿದ್ದು, 1.04 ಕೋಟಿ ಜನರಿಗೆ ಸೋಂಕು ತಗುಲಿದೆ. ಕೋವಿಡ್‌ನಿಂದ ಇದುವರೆಗೆ 1.5 ಲಕ್ಷ ಮಂದಿ ಸಾವನ್ನಪ್ಪಿದ್ದಾರೆ ಎಂದು ಆರೋಗ್ಯ ಸಚಿವಾಲಯದ ಇತ್ತೀಚಿನ ವರದಿ ತಿಳಿಸಿದೆ.