ನಮಸ್ಕಾರ ಕೃಷಿ ಜಾಗರಣ ಅಗ್ರಿ ನ್ಯೂಸ್‌ಗೆ ಸ್ವಾಗತ. ಇಂದಿನ ಪ್ರಮುಖ ಸುದ್ದಿಗಳು ಈ ರೀತಿ ಇವೆ.
- ಕಾರ್ಖಾನೆಗಳಲ್ಲಿ ಕೆಲಸದ ಅವಧಿ 9 ಗಂಟೆಯಿಂದ 12ಕ್ಕೆ
- ಮೂರು ಇ- ಹರಾಜಿನಲ್ಲಿ 18.05 ಲಕ್ಷ ಮಿಲಿಯನ್ ಟನ್ ಗೋಧಿ ಮಾರಾಟ
- 512 ಕೆ.ಜಿ ಈರುಳ್ಳಿ ಮಾರಾಟ ಮಾಡಿದ ರೈತನಿಗೆ ಸಿಕ್ಕಿದ್ದು ಕೇವಲ ಎರಡು ರೂಪಾಯಿ!
- ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 9,018 ಮಕ್ಕಳು ನಾಪತ್ತೆ!
- ಸೈಬರ್ ಕ್ರೈಂ ತಡೆಗೆ ಆಧಾರ್ ಕಾರ್ಡ್‌ಗೆ ಸಿಮ್ ಕಾರ್ಡ್ ಜೋಡಣೆ: ಆರಗ ಜ್ಞಾನೇಂದ್ರ
- ಮಾರ್ಚ್ 1ರಿಂದ ಸರ್ಕಾರಿ ಅಧಿಕಾರಿ, ನೌಕರರ ಅನಿರ್ಧಿಷ್ಟಾವಧಿ ಮುಷ್ಕರ
ಸುದ್ದಿಗಳ ವಿವರ ಈ ರೀತಿ ಇದೆ.
----------------
1. ರಾಜ್ಯ ಸರ್ಕಾರವು ಆರ್ಥಿಕ ಚಟುವಟಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಕಾರ್ಖಾನೆಗಳಲ್ಲಿ ಕೆಲಸದ ಅವಧಿಯನ್ನು 9ಗಂಟೆಯಿಂದ 12ಕ್ಕೆ ಹೆಚ್ಚಳ ಮಾಡಿದೆ.
ಕೆಲಸದ ಅವಧಿಯನ್ನು ಈಗ ಇರುವ 9 ಗಂಟೆಗಳಿಂದ 12 ಗಂಟೆಗಳವರೆಗೆ ಹೆಚ್ಚಿಸುವ ಹಾಗೂ ಮಹಿಳೆಯರಿಗೆ ರಾತ್ರಿ ಪಾಳಿಯಲ್ಲೂ ಕೆಲಸ ಮಾಡುವುದಕ್ಕೆ ಅವಕಾಶ ಕಲ್ಪಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಈ ನಿಟ್ಟಿನಲ್ಲಿ ಸರ್ಕಾರವು ವಿಧಾನಸಭೆಯಲ್ಲಿ ಕಾರ್ಖಾನೆಗಳ (ಕರ್ನಾಟಕ ತಿದ್ದುಪಡಿ)ಮಸೂದೆ–2023ಕ್ಕೆ ಈಚೆಗೆ ಅಂಗೀಕಾರ ನೀಡಿದೆ.
ಕೆಲಸದ ಅವಧಿಯನ್ನು ಹೆಚ್ಚಿಸುವುದಕ್ಕೆ ಕೆಲಸಗಾರರಿಂದ ಲಿಖಿತ ಒಪ್ಪಿಗೆಯನ್ನು ಪಡೆದುಕೊಳ್ಳಬೇಕು.
ಆಗ ಮಾತ್ರ ಕೆಲಸದ ಅವಧಿಯನ್ನು 12 ಗಂಟೆಗಳಿಗೆ ವಿಸ್ತರಿಸಬಹುದಾಗಿದೆ.
ಅಲ್ಲದೇ ಹೆಚ್ಚುವರಿ ಕೆಲಸಕ್ಕೆ ಹೆಚ್ಚುವರಿ ಹಣವನ್ನೂ ಪಾವತಿಸಬೇಕು ಎಂದು ಉಲ್ಲೇಖಿಸಲಾಗಿದೆ.
----------------
2. ಕೇಂದ್ರ ಸರ್ಕಾರವು 30ಲಕ್ಷ ಮಿಲಿಯನ್ ಟನ್ ಗೋಧಿಯನ್ನು ಮಾರಾಟ ಮಾಡುವ ಮೂಲಕ ಮಾರುಕಟ್ಟೆಯಲ್ಲಿ ಗೋಧಿ ಪೂರೈಕೆಯನ್ನು
ಹೆಚ್ಚಿಸಲು ನಿರ್ಧರಿಸಿದ ನಂತರ ಭಾರತೀಯ ಆಹಾರ ನಿಗಮವು ಮುಕ್ತ ಮಾರುಕಟ್ಟೆಯಲ್ಲಿ 18.05 ಲಕ್ಷ ಮಿಲಿಯನ್‌ಟನ್ ಗೋಧಿಯನ್ನು ಮಾರಾಟ ಮಾಡಿದೆ.
ಗೋಧಿ ಬೆಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಈ ಕ್ರಮ ಕೈಗೊಂಡಿದೆ.
ಮಾರುಕಟ್ಟೆಯಲ್ಲಿ ಲಭ್ಯವಿರುವ ಯಶಸ್ವಿ ಬಿಡ್ಡರ್‌ಗಳಿಂದ ಸುಮಾರು 11 ಲಕ್ಷ ಮಿಲಿಯನ್‌ಟನ್ ಗೋಧಿಯನ್ನು ಈಗಾಗಲೇ ಮಾರಾಟ ಮಾಡಲಾಗಿದೆ.
----------------
3.ಈ ವರ್ಷ ಈರುಳ್ಳಿ ಬೆಳೆದ ರೈತರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ. ಇದೀಗ ಮಹಾರಾಷ್ಟ್ರದ ಸೊಲ್ಲಾಪುರ ಜಿಲ್ಲೆಯ ಈರುಳ್ಳಿ ಉತ್ಪಾದಕರೊಬ್ಬರ ಬಗ್ಗೆ ಸಾಕಷ್ಟು ಚರ್ಚೆಯಾಗುತ್ತಿದೆ.
ಕಾರಣ ಮಾತ್ರ ಧಾರುಣವಾಗಿದೆ.
ರೈತರೊಬ್ಬರು ಬರೋಬ್ಬರಿ 512 ಕೆ.ಜಿ ಈರುಳ್ಳಿಗೆ ಎರಡು ರೂಪಾಯಿ ಚೆಕ್ ಪಡೆದಿದ್ದಾರೆ. ಐದು ಕ್ವಿಂಟಾಲ್‌ಗೂ ಹೆಚ್ಚು ತೂಕದ 10 ಮೂಟೆ ಈರುಳ್ಳಿಯನ್ನು ರೈತ ರಾಜೇಂದ್ರ ಚವ್ಹಾಣ ಸೊಲ್ಲಾಪುರದ ಈರುಳ್ಳಿ ವ್ಯಾಪಾರಿಯೊಬ್ಬರಿಗೆ ಮಾರಾಟಕ್ಕೆ ಕಳುಹಿಸಿದ್ದರು.
ಆದರೆ, ಐದು ಕ್ವಿಂಟಾಲ್ ಈರುಳ್ಳಿಯ ಲೋಡಿಂಗ್, ಸಾಗಣೆ ಹಾಗೂ ಇತರೆ ಕೆಲಸಗಳಿಗೆ ಬೇಕಾಗುವ ಹಣ ಕಡಿತಗೊಳಿಸಿ ಕೇವಲ 2.49 ರೂಪಾಯಿ ಕೈಗೆ ಬಂದಿದೆ.
ಇದು ನನಗೆ ಹಾಗೂ ಈ ರಾಜ್ಯದ ಇತರ ಈರುಳ್ಳಿ ಉತ್ಪಾದಕರಿಗೆ ಮಾಡಿದ ಅವಮಾನ ಎಂದು ರೈತ ರಾಜೇಂದ್ರ ಚವ್ಹಾಣ ಕಣ್ಣೀರಾಗಿದ್ದಾರೆ.
ಈರುಳ್ಳಿ ಉತ್ಪಾದಿಸುವ ರೈತರ ಬೆಳೆಗೆ ಉತ್ತಮ ಬೆಲೆ ನೀಡಬೇಕು ಹಾಗೂ ಹಾನಿಗೊಳಗಾದ ರೈತರಿಗೆ ಪರಿಹಾರ ನೀಡಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ.
----------------
4. ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ 9,018 ಮಕ್ಕಳ ನಾಪತ್ತೆ ಮತ್ತು ಅಪಹರಣ ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ಈಚೆಗೆ ವಿಧಾನ ಪರಿಷತ್‌ನಲ್ಲಿ ಪ್ರಶ್ನೋತ್ತರ ವೇಳೆಯಲ್ಲಿ ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಈ ಮಾಹಿತಿ ನೀಡಿದ್ದಾರೆ.
ಅಲ್ಲದೇ ಈ ಹಿಂದೆ ನಾಪತ್ತೆ ಮತ್ತು ಅಪಹರಣ ಪ್ರಕರಣ ವರದಿಯೇ ಆಗುತ್ತಿರಲಿಲ್ಲ ಎಂದಿದ್ದಾರೆ.
----------------
5. ಆಧಾರ್ ಕಾರ್ಡ್‌ಅನ್ನು ಸಿಮ್ ಕಾರ್ಡ್‌ಗೆ ಜೋಡಣೆ ಮಾಡುವ ಮೂಲಕ ಅಪರಾಧ ಪ್ರಕರಣಗಳನ್ನು ತಪ್ಪಿಸಲು ಸರ್ಕಾರ ಮುಂದಾಗಿದೆ.
ಈ ಸಂಬಂಧ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಯೊಂದನ್ನು ಸಲ್ಲಿಸಿದೆ.
ಸಿಮ್ ಕಾರ್ಡ್‌ಗಳ ಜೊತೆ ಆಧಾರ್ ಕಾರ್ಡ್ ಜೋಡಿಸುವಂತೆ ಕೇಂದ್ರ ಸರ್ಕಾರಕ್ಕೆ ಕೋರಿಕೆ ಸಲ್ಲಿಸಿರುವುದಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಸೈಬರ್ ವಂಚನೆಗೆ ಒಳಗಾದವರು 112 ಸಂಖ್ಯೆಗೆ ಘಟನೆ ನಡೆದ ಎರಡು ಗಂಟೆ ಒಳಗೆ ದೂರವಾಣಿ ಕರೆ ಮಾಡಿದರೆ ಬ್ಯಾಂಕ್
ಖಾತೆಯನ್ನು ಸ್ಥಗಿತಗೊಳಿಸಿ ಹಣ ವರ್ಗಾವಣೆಯಾಗದಂತೆ ಯತ್ನಿಸಲಾಗುವುದು ಎಂದಿದ್ದಾರೆ.
----------------
6. ನ್ಯಾಯಾಯುತ ಬೇಡಿಕೆಗಳಾದ ವೇತನ-ಭತ್ಯೆ ಪರಿಷ್ಕರಣೆ ಹಾಗೂ ಹಳೆ ಪಿಂಚಣಿ ಯೋಜನೆ ಜಾರಿಗೊಳಿಸುವುದು ಸೇರಿದಂತೆ ವಿವಿಧ
ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮಾರ್ಚ್ 1ರಿಂದ ಅನಿರ್ಧಿಷ್ಟಾವಧಿ ಮುಷ್ಕರ ನಡೆಸುವುದಾಗಿ ಬಿ.ಬಿ.ಎಂ.ಪಿ.ಅಧಿಕಾರಿ ಮತ್ತು ನೌಕರರ ಕ್ಷೇಮಾಭಿವೃದ್ದಿ
ಸಂಘದ ಅಧ್ಯಕ್ಷ ಎ.ಅಮೃತ್ ರಾಜ್ ತಿಳಿಸಿದ್ದಾರೆ. ಮಾರ್ಚ್ 1ರಂದು ಕೆಲಸಕ್ಕೆ ಗೈರು ಹಾಜರಾಗುವ ಮೂಲಕ ಬೃಹತ್ ಬೆಂಗಳೂರು
ಮಹಾನಗರ ಪಾಲಿಕೆ ಕೆಲಸ ಕಾರ್ಯಗಳನ್ನು ಸ್ಥಗಿತ ಮಾಡಲಾಗುವುದು ಎಂದಿದ್ದಾರೆ.
----------------