ಮಲೆನಾಡಿನಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ತರೀಕೆರೆ ತಾಲೂಕು ಲಕ್ಕವಳ್ಳಿ ಬಳಿ ಇರುವ ಭದ್ರಾ ಜಲಾಶಯಕ್ಕೆ ಹರಿದು ಬರುವ ನೀರಿನ ಪ್ರಮಾಣ ಹೆಚ್ಚಾಗಿದೆ. ಇದರಿಂದ ಈ ಜಲಾಶಯದಿಂದ ನೀರಾವರಿ ಸೌಲಭ್ಯ ಪಡೆದಿರುವ ಜಿಲ್ಲೆಗಳ ರೈತರ ಮೊಗದಲ್ಲಿ ಸಂತಸ ಮೂಡಿದೆ.
ಮಧ್ಯ ಕರ್ನಾಟಕ ಭಾಗದ ಜಿಲ್ಲೆಗಳ ಜನರ ಜೀವನಾಡಿಯಾಗಿರುವ ಭದ್ರಾ ನದಿ, ಚಿಕ್ಕಮಗಳೂರು ಜಿಲ್ಲೆಯ ಕುದುರೆಮುಖ ಅಭಯಾರಣ್ಯದ ಗಂಗಡಿಕಲ್ಲು ಬಳಿಯ ಗಂಗಾ ಮೂಲದಲ್ಲಿ ಹುಟ್ಟುತ್ತದೆ. ಉಗಮ ಸ್ಥಾನದಿಂದ ಪೂರ್ವಾಭಿಮುಖವಾಗಿ ಹರಿಯುವ ಕಾರಣ ಈ ನದಿ ಹುಟ್ಟುವ ಚಿಕ್ಕಮಗಳೂರು ಜಿಲ್ಲೆಯ ಜನತೆ ಇದರ ನೀರಿನಿಂದ ಅಷ್ಟೇನೂ ಪ್ರಯೋಜನ ಪಡೆಯುತ್ತಿಲ್ಲ. ಶಿವಮೊಗ್ಗ ಜಿಲ್ಲೆಯ ಭದ್ರಾವತಿ ತಾಲೂಕಿನ ಗಡಿ ಭಾಗದಲ್ಲಿರುವ, ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಕ್ಕವಳ್ಳಿ ಬಳಿ ಭದ್ರಾನದಿಗೆ ಅಡ್ಡಲಾಗಿ ಆಣೆಕಟ್ಟನ್ನು ಕಟ್ಟಲಾಗಿದೆ. ಚಿಕ್ಕಮಗಳೂರಿನ ಕೆಲ ಭಾಗ, ಶಿವಮೊಗ್ಗ, ದಾವಣಗೆರೆ, ಚಿತ್ರದುರ್ಗ, ಬಳ್ಳಾರಿ, ಸೇರಿದಂತೆ ಮಧ್ಯ ಕರ್ನಾಟಕದ ಹಲವು ಜಿಲ್ಲೆಗಳ ರೈತರು, ಜನರು ಈ ಜಲಾಶಯದ ಫಲಾನುಭವಿಗಳಾಗಿದ್ದಾರೆ.
186 ಅಡಿ ಎತ್ತರವಿರುವ ಭದ್ರಾ ಜಲಾಶಯದ ನೀರು ಸಂಗ್ರಹ ಸಾಮರ್ಥ್ಯ ಯಾವುದೇ ದೊಡ್ಡ ಜಲಾಶಯಕ್ಕೂ ಕಡಿಮೆ ಇಲ್ಲ. ಹಿನ್ನೂರು ಪ್ರದೇಶ ಅತ್ಯಂತ ವಿಶಾಲವಾಗಿರುವ ಕಾರಣ ಜಲಾಶಯದಲ್ಲಿ ಬರೋಬ್ಬರಿ 71.535 ಟಿಎಂಸಿ ನೀರು ಸಂಗ್ರಹವಾಗುತ್ತದೆ. ಸುಮಾರು 4.20 ಲಕ್ಷ ಎಕರೆ ಪ್ರದೇಶಕ್ಕೆ ನೀರುಣಿಸುವ ಭದ್ರಾ ಆಣೆಕಟ್ಟೆ ನಿರ್ಮಾಣವಾಗಿ 58 ವರ್ಷಗಳು ಕಳೆದಿದ್ದು, 39 ಬಾರಿ ಭರ್ತಿಯಾಗಿದೆ. ಈಗ ಮಲೆನಾಡಿನಲ್ಲಿ ಉತ್ತಮ ಮಳೆಯಾಗುತ್ತಿರುವ ಕಾರಣ ಈ ಬಾರಿಯೂ ಆಣೆಕಟ್ಟು ತುಂಬುವ ಎಲ್ಲ ಲಕ್ಷಣಗಳಿವೆ. ಹೀಗಾಗಿ ಭದ್ರಾ ಅಚ್ಚುಕಟ್ಟು ಪ್ರದೇಶದ ರೈತರ ಸಂತೋಷಕ್ಕೆ ಪಾರವೇ ಇಲ್ಲದಂತಾಗಿದೆ.
ಹೆಚ್ಚಿದ ಒಳ ಹರಿವು
ಕಳೇದ ನಾಲ್ಕು ದಿನಗಳಿಂದ ಚಿಕ್ಕಮಗಳೂರು, ಕುದುರೆಮುಖ ಭಾಗದಲ್ಲಿ ವರ್ಷಧಾರೆ ಉತ್ತಮವಾಗಿದೆ. ಹಿಗಾಗಿ ಭದ್ರಾ ಜಲಾಶಯಕ್ಕೆ ನೀರಿನ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ. ಜೂನ್ 14ರಂದು 5678 ಕ್ಯೂಸೆಕ್ ಇದ್ದ ನೀರಿನ ಒಳ ಹರಿವು ಜೂನ್ 16ರ ಮುಂಜಾನೆ 6 ಗಂಟೆ ವೇಳೆಗೆ 10,958 ಕ್ಯೂಸೆಕ್‌ಗೆ ಏರಿಕೆಯಾಗಿತ್ತು. ಇನ್ನು ಜೂನ್ 17ರ ಗುರುವಾರ ಬೆಳಗಿನಜಾವ 6 ಗಂಟೆಗೆ ಬಂದ ವರದಿಯ ಪ್ರಕಾರ ಜಲಾಶಯಕ್ಕೆ 12,558 ಕ್ಯೂಸೆಕ್ ನೀರು ಹರಿದು ಬರುತ್ತಿದೆ. ಪ್ರಸ್ತುತ ಜಲಾಶಯದ ನೀರಿನ ಮಟ್ಟ 144 ಅಡಿಗಳಿದ್ದು, 68 ಕ್ಯೂಸೆಕ್ ನೀರನ್ನು ಮಾತ್ರ ಹರಿಬಿಡಲಾಗುತ್ತಿದೆ. ಮಳೆ ಹಿಗೇ ಮುಂದುವರಿದರೆ ಈ ಬಾರಿಯೂ ಡ್ಯಾಮ್ ಭರ್ತಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಎಂಜಿನಿಯರುಗಳು ತಿಳಿಸಿದ್ದಾರೆ.
ಈ ಬಾರಿ ಉತ್ತಮ ಮಳೆ
ಕಳೆದ ವರ್ಷಕ್ಕೆ ಹೋಲಿಸಿದರೆ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ಉತ್ತಮವಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಜಲಾಶಯದ ನೀರಿನ ಮಟ್ಟ 134.7 ಅಡಿ ಇತ್ತು. ಈ ಬಾರಿ 144 ಅಡಿಗೆ ಏರಿಕೆಯಾಗಿದೆ. ನೀರು ಎತ್ತರ ಹೋದಷ್ಟೂ ಹಿನ್ನೀರಿನ ಪ್ರದೇಶ ವಿಸ್ತಾರವಾಗುತ್ತಾ ಸಾಗುವುದರಿಂದ ನೀರಿನ ಮಟ್ಟದ ಏರಿಕೆ ಕೊಂಚ ನಿಧಾನವಾಗುತ್ತದೆ. ಆದರೆ, ಇನ್ನೂ ದೊಡ್ಡ ಮಳೆಗಳು ಬಾಕಿ ಇರುವುದರಿಂದ ಜಲಾಶಯ ಭರ್ತಿಯಾಗುವುದು ಖಚಿತ ಎನ್ನಲಾಗಿದೆ. ಮಳೆಗಾಲ ಉತ್ತುಂಗದಲ್ಲಿರುವ ಸಂದರ್ಭದಲ್ಲಿ ಮಲೆನಾಡಿನಲ್ಲಿ ನಿರಂತರವಾಗಿ ವರ್ಷಧಾರೆಯಾಗುತ್ತದೆ. ಇಂತಹ ಸಂದರ್ಭದಲ್ಲಿ ಜಲಾಶಯಕ್ಕೆ 60 ಸಾವಿರ ಕ್ಯೂಸೆಕ್‌ಗಿಂತಲೂ ಅಧಿಕ ಪ್ರಮಾಣದಲ್ಲಿ ನೀರು ಬಂದಿರುವ ಉದಾಹರಣೆಗಳಿವೆ. ಹೀಗಾದಾಗ ಕೇವಲ ಒಂದು ವಾರದಲ್ಲಿ ಜಲಾಶಯ ಭರ್ತಿಯಾಗಿದೆ.
ಬಿಡುವು ನೀಡದ ಮಳೆರಾಯ
ಮಲೆನಾಡಿನಲ್ಲಿ ಮೂರು ದಿನಗಳಿಂದಲೂ ವರುಣ ಬಿಟ್ಟೂ ಬಿಡದೆ ಸುರಿಯುತ್ತಿದ್ದು, ಬುಧವಾರ ಕೊಂಚವೂ ಕೂಡ ಬಿಡುವು ನೀಡದಂತೆ ಮಳೆ ಸುರಿದಿದೆ. ಇನ್ನು ಗುರುವಾರ ನಸುಕಿನಿಂದಲೇ ಶಿವಮೊಗ್ಗ ಜಿಲ್ಲೆಯಾದ್ಯಂತ ವರುಣ ದೇವ ತನ್ನ ಆರ್ಭಟ ಮುಂದುವರಿಸಿದ್ದು, ಜನರು ಮನೆ ಬಿಟ್ಟು ಹೊರಗೆ ಬರುವುದೂ ಕಷ್ಟವಾಗಿದೆ. ಶೃಂಗೇರಿ, ಕಳಸ, ಹೊಸನಗರ ಮತ್ತು ತೀರ್ಥಹಳ್ಳಿ ಭಾಗದಲ್ಲಂತೂ ಮಳೆ ಆರ್ಭಟ ಜೋರಾಗೇ ಇದೆ. ಇತ್ತ ಸಾಗರದ ಶರಾವತಿ ಕಣಿವೆ ಪ್ರದೇಶದಲ್ಲೂ ಮಳೆ ಪ್ರಮಾಣ ಹೆಚ್ಚಾಗಿದ್ದು, ಲಿಂಗನಮಕ್ಕಿ ಜಲಾಶಯದ ಒಳಹರಿವಿನಲ್ಲಿ ಏರಿಕೆಯಾಗಿದೆ.
ಚಿಕ್ಕಮಗಳೂರಿನಲ್ಲಂತೂ ವರುಣದ ಆರ್ಭಟಕ್ಕೆ ತಡೆಯಯೇ ಇಲ್ಲದಂತಾಗಿದೆ. ಎರಡು ಪ್ರಮುಖ ನದಿಗಳಾದ ತುಂಗಾ ಹಾಗೂ ಭದ್ರಾ ಜಲಾನಯನ ಪ್ರದೇಶದಲ್ಲಿ ಮಳೆ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಈಗಾಗಲೇ ಭರ್ತಿಯಾಗಿರುವ ಗಾಜನೂರಿನ ತುಂಗಾ ಜಲಾಶಯಕ್ಕೂ ನಿರಂತರವಾಗಿ ಭಾರೀ ಪರಮಾಣದ ನೀರು ಹರಿದು ಬರುತ್ತಿರುವುದರಿಂದ ಕ್ರಸ್ಟ್ ಗೇಟ್‌ಗಳನ್ನು ತೆರೆದು ನದಿಗೆ ನೀರು ಬಿಡುಗಡೆ ಮಾಡಲಾಗುತ್ತಿದೆ.
ಸ್ವಯಂಪ್ರೇರಿತ ಲಾಕ್‌ಡೌನ್
ನಿರಂತರ ವರ್ಷಧಾರೆಯಿಂದಾಗಿ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಸ್ವಯಂಪ್ರೇರಿತ ಲಾಕ್‌ಡೌನ್ ಸ್ಥಿತಿ ನಿರ್ಮಾಣವಾಗಿದೆ. ಮಳೆ ಜೋರಾಗೇ ಸುರಿಯುತ್ತಿರುವ ಕಾರಣ ಜರ‍್ಯಾರೂ ತಮ್ಮ ಮನೆಗಳಿಂದ ಹೊರಗೆ ಬರುವ ಸಾಹಸ ಮಾಡುತ್ತಿಲ್ಲ. ಬಹುತೇಕ ಊರುಗಳಲ್ಲಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ.