News

ಪಂಜರ ಮೀನು ಕೃಷಿಯ ಮೂಲಕ 10 ಸಾವಿರ ಉದ್ಯೋಗ ಸೃಷ್ಟಿ ಗುರಿ-ಕೋಟ ಶ್ರಿನಿವಾಸ ಪೂಜಾರಿ

30 August, 2020 2:23 PM IST By:

ಪಂಜರ ಮೀನು ಕೃಷಿಯ ಮೂಲಕ ರಾಜ್ಯದಲ್ಲಿ 10 ಸಾವಿರ ಜನರಿಗೆ ಸ್ವಾವಲಂಬಿ ಉದ್ಯೋಗ ಕಲ್ಪಿಸುವುದು ಸರ್ಕಾರದ ಗುರಿಯಾಗಿದೆ ಎಂದು ಮೀನುಗಾರಿಕಾ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.

ಅವರು ಪ್ರಧಾನಮಂತ್ರಿ ಮತ್ಸ್ಯ ಸಂಪದ ಯೋಜನೆಯಡಿ ಪಂಜರ ಮೀನು ಕೃಷಿ ಕೈಗೊಳ್ಳುವ ಬಗ್ಗೆ ಮೀನುಗಾರಿಕಾ ಇಲಾಖೆಯ ಆಶ್ರಯದಲ್ಲಿ ಮಂಗಳೂರಿನ ಜಿಲ್ಲಾ ಪಂಚಾಯತ್‌ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಾಗಾರದ ಅಧ್ಯಕ್ಷತೆ ವಹಿಸಿ ಮಾತನಾಡಿದ್ದಾರೆ.

ಮೀನುಗಾರರ ಆದಾಯ ದ್ವಿಗುಣ ಗೊಳಿಸುವುದು ರಾಜ್ಯ ಸರಕಾರದ ಪ್ರಮುಖ ಗುರಿಯಾಗಿದೆ. ಸಿಹಿ ನೀರಿನ ಸಿಗಡಿ ಕೃಷಿಗೆ ಮೀನುಗಾರಿಕೆ ಇಲಾಖೆಯಿಂದ ಆದ್ಯತೆ ನೀಡಲಾಗುವುದು. ಮೀನಾಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರಕ್ಕೆ ಈಗಾಗಲೇ ಪ್ರಸ್ತಾವನೆ ಸಲ್ಲಿಸಲಾಗಿದೆ. ಕೇಂದ್ರ ಸರ್ಕಾರದಿಂದ ಹೆಚ್ಚಿನ ಹಣ ಬಿಡುಗಡೆಯಾಗುವ ನಿರೀಕ್ಷೆಯಿದೆ ಎಂದು ಹೇಳಿದ್ದಾರೆ.

ಪಂಜರ ಮೀನು ಕೃಷಿ ಪೂರ್ವಭಾವಿ ಸಿದ್ದತೆಗೆಂದು ಕಿಸಾನ್ ಕಾರ್ಡ್ ಮೂಲಕ ಬ್ಯಾಂಕಿನಿಂದ 3 ಲಕ್ಷ ರೂಪಾಯಿಯವರೆಗೆ ಸಾಲ ಒದಗಿಸಾಗುವುದು. ಆರ್ಥಿಕ ಸಹಾಯದ ನಿಟ್ಟಿನಲ್ಲಿ ಲೀಡ್ ಬ್ಯಾಂಕ್ ಮುಖ್ಯಸ್ಥರ ಜೊತೆ ಚರ್ಚಿಸಿದ್ದೇವೆ ಎಂದು ಹೇಳಿದ್ದಾರೆ.

ಸೆ. 1ರಿಂದ ಮೀನುಗಾರಿಕೆ:
ರಾಜ್ಯ ಕರಾವಳಿಯಲ್ಲಿ ಸಾಮಾನ್ಯ ವಾಗಿ ಆಗಸ್ಟ್ 1ರಂದು ಆರಂಭವಾಗುವ ಮೀನುಗಾರಿಕೆ ಕೊರೊನಾದಿಂದಾಗಿ ಈ ಬಾರಿ ಒಂದು ತಿಂಗಳ ತಡವಾಗಿ ಆರಂಭವಾಗಲಿದೆ ಇದೇ  ಸೆ. 1ರಂದು ಆರಂಭವಾಗುತ್ತಿದೆ. ಆರೋಗ್ಯ ಮತ್ತು ಕೊರೊನಾ ನಿಯಮಾವಳಿಗಳ ಪಾಲನೆಗೆ ಆದ್ಯತೆ ನೀಡಲಾಗುವುದು ಎಂದರು.

ಪಂಜರದ ಮೀನು ಕೃಷಿ ಮೂಲಕ ಸ್ವಂತ ಉದ್ಯೋಗ ಸೃಷ್ಟಿಸುವ ಗುರಿ ಇದಾಗಿದೆ. ಶೃದ್ಧೆಯಿಂದ ಕೆಲಸ ಮಾಡುವ ಮೂಲಕ ಹಲವರು ಬದುಕು ಕಟ್ಟಿಕೊಂಡಿದ್ದಾರೆ. ಒಳನಾಡಿನ ಮೀನು ಕೃಷಿಯನ್ನು ಉತ್ತೇಜಿಸುವ ಮೂಲಕ ಭಾರತದಲ್ಲಿ ಕರ್ನಾಟಕ ರಾಜ್ಯ ಪ್ರಥಮ ಸ್ಥಾನಕ್ಕೆ ಬರಬೇಕೆಂಬುದು ಇಲಾಖೆಯ ಗುರಿಯಾಗಿದೆ ಎಂದರು.