ಕೇಂದ್ರ ಸರ್ಕಾರವು ರೈತರಿಗೆ ಸಿಹಿ ಸುದ್ದಿ ನೀಡಿದೆ. ಯೂರಿಯಾ ಕಳ್ಳದಂಧೆ ನಿಯಂತ್ರಿಸಲು ಬೇವಿನ ಎಣ್ಣೆ ಸವರುವ ವಿಧಾನ ಅನುಸರಿಸುತ್ತಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ಹೆಜ್ಜೆಯಿಟ್ಟಿದೆ. ರಸಗೊಬ್ಬರದ ಚೀಲದ ಬದಲಾಗಿ ಈಗ 240 ರೂಪಾಯಿಗೆ ಅರ್ಧ ಲೀಟರ್ ನ್ಯಾನೋ ಯೂರಿಯಾ ಮಾರುಕಟ್ಟೆಗೆ ತರುತ್ತಿದೆ.
ಸಹಕಾರಿ ವಲಯದ ರಸಗೊಬ್ಬರ ಕಂಪನಿ ಇಫ್ಕೋ ಅಭಿವೃದ್ಧಿಪಡಿಸಿದ ನ್ಯಾನೋ-ಯೂರಿಯಾ ರಸಗೊಬ್ಬರವು ಜೂನ್ 15ಕ್ಕೆ ರೈತರ ಬಳಕೆಗೆ ಸಿಗುವುದು ಬಹುತೇಕ ಖಚಿತವಾಗಿದೆ. ಈ ಗೊಬ್ಬರ ಬಳಕೆಯಿಂದ ಅರ್ಧದಷ್ಟು ವೆಚ್ಚ ಕಡಿಮೆಯಾಗುವ ಅಂದಾಜಿದೆ.
ನ್ಯಾನೋ ರಸಗೊಬ್ಬರವು ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿಯನ್ನುಂಟು ಮಾಡಲಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದ ಗೌಡ ಹೇಳಿದರು.
ಅವರು ನ್ಯಾನೋ ಯೂರಿಯಾ ಉಪಯೋಗದ ಬಗ್ಗೆ ಇಫ್ಕೋ ಸಂಸ್ಥೆ ಏರ್ಪಡಿಸಿದ್ದ ವೆಬಿನಾರ್ ನಲ್ಲಿ ಪಾಲ್ಗೊಂಡು ಮಾತನಾಡಿ, 240 ರೂಪಾಯಿ ಬೆಲೆಯಲ್ಲಿ ಅರ್ಧ ಲೀಟರ್ ನ್ಯಾನೋ ಯೂರಿಯಾ 45 ಕೆಜಿ ಯೂರಿಯಾಗಿ ಸಮನಾಗಿದ್ದು, ಆತ್ಮ ನಿರ್ಭರ್ ಭಾರತ ಯೋಜನೆಯಡಿ ರೂಪುಗೊಂಡ ನ್ಯಾನೋ ಯೂರಿಯಾ ಜೂನ್ 15 ರಿಂದ ಅನ್ನದಾತರಿಗೆ ಮಾರುಕಟ್ಟೆಯಲ್ಲಿ ದೊರೆಯಲಿದೆ ಎಂದರು. ಇದು ಪರಿಸರ ಸ್ನೇಹಿಯಾಗಿದ್ದು, ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದು ತಿಳಿಸಿದ್ದಾರೆ.
ರೈತರ ಆದಾಯ ದುಪ್ಪಟ್ಟುಗೊಳಿಸಬೇಕೆಂಬ ಕೇಂದ್ರ ಸರ್ಕಾರದ ನೀತಿಗೆ ಪೂರಕವಾಗಿ ಇಫ್ಕೋ ಅಭಿವೃದ್ಧಿಪಡಿಸಿದ ನ್ಯಾನೋ ಯೂರಿಯಾ ಕೃಷಿ ಕ್ಷೇತ್ರದಲ್ಲಿ ಹೊಸ ಕ್ರಾಂತಿ ಮಾಡಲಿದೆ. ರಾಜ್ಯದಲ್ಲಿ ವಾರ್ಷಿಕ ಯೂರಿಯಾ ಬಳಕೆ ಪ್ರಮಾಣ ಶೇ. 40 ರಷ್ಟು ತಗ್ಗುವ ನಿರೀಕ್ಷೆಯಿದೆ.
ಅರ್ಧ ಲೀಟರ್ ನ ಈ ಒಂದು ಬಾಟಲ್ ದ್ರವರೂಪಪದ ಯೂರಿಯಾ ಒಂದು ಚೀಲ ಯೂರಿಯಾ ಗೊಬ್ಬರದಷ್ಟೇ ಸಮನಾಗಿ ಟಾನಿಕ್ ರೂಪದಲ್ಲಿ ಕೆಲಸ ಮಾಡಲಿದೆ. ಬೆಳೆಗಳ ಉತ್ತಮ ಬೆಳವಣಿಗೆ ಹಾಗೂ ಉತ್ಪಾದಕತೆ ಹೆಚ್ಚಿಸಲೆಂದು ಕರ್ನಾಟಕದಲ್ಲಿ ವಾರ್ಷಿಕ 14 ಲಕ್ಷ ಮೆಟ್ರಿಕ್ ಟನ್ ಯೂರಿಯಾ ಬಳಕೆಯಾಗುತ್ತಿದ್ದು, ನ್ಯಾನೋ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ದ್ರಾವಣ ರೂಪದ ಯೂರಿಯಾ ರಸಗೊಬ್ಬರವು 5 ಲಕ್ಷ ಮೆಟ್ರಿಕ್ ಟನ್ ಬಳಕೆ ತಗ್ಗಿಸಲಿದೆ ಎಂದರು.
1 ಚೀಲ (50) ಕೆಜಿ ಯೂರಿಯಾಗೆ ಅರ್ಧ ಲೀಟರ್ ನ್ಯಾನೋ ಗೊಬ್ಬರ ಸಮನಾಗಿದ್ದು, ಬೆಳೆ ನಾಟಿಯಾಗಿ 30 ದಿನಗಳಾದ ಬಳಿಕೆ 1 ಲೀಟರ್ ನೀರಿನಲ್ಲಿ 4 ಮಿಲಿ ಲೀಟರ್ ನ್ಯಾನೋ ಗೊಬ್ಬರ ದ್ರಾವಣ ಸಿಂಪಡಿಸಬೇಕು. 15 ದಿನಗಳ ನಂತರ ಮತ್ತೊಮ್ಮೆ ಸಿಂಪಡಿಸಿದರೆ ಸಾಕು, ಅಗತ್ಯವಿರುವ ಪೋಷಕಾಂಶಗಳು ದೊರೆತು ನಿರೀಕ್ಷಿತ ಇಳುವರಿ ರೈತರ ಕೈಗೆ ದಕ್ಕಲಿದೆ. ಕೊಂಡೊಯ್ಯುವುದು ಸುಲಭ, ಖರ್ಚು ಕಡಿಮೆ, ಬಹುಪಯೋಗಿ ಹಾಗೂ ಅಧಿಕ ಆದಾಯವನ್ನು ನ್ಯಾನೋ ಗೊಬ್ಬರ ತಂದುಕೊಡಲಿದೆ ಎಂದರು.
ಇಫ್ಕೋ ನಿರ್ದೇಶಕ (ಮಾರುಕಟ್ಟೆ) ಯೋಗೇಂದ್ರ ಕುಮಾರ ಮಾತನಾಡಿ, ಆರಂಭಿಕವಾಗಿ 28 ಕೋಟಿ ಬಾಟಲಿ (500 ಎಂಎಲ್) ನ್ಯಾನೋ ಯೂರಿಯಾ ಉತ್ಪಾದಿಸಲಾಗುತ್ತಿದೆ. ಇದರ ಬೆಲೆ ಬಾಟಲಿಗೆ 240 ರೂಪಾಯಿ ಇದೆ. ಯಾವುದೇ ಕಾಗದಪತ್ರವಿಲ್ಲದೆ ಯಾವ ರೈತರು ಬೇಕಾದರೂ ಖರೀದಿಸಬಹುದು ಎಂದು ತಿಳಿಸಿದ್ದಾರೆ.
ಬಹುಪಯೋಗಿ ನ್ಯಾನೋ ಗೊಬ್ಬರವು ಕೃಷಿ ಕ್ಷೇತ್ರದಲ್ಲಿ ಗೇಮ್ ಚೇಂಜರ್ ಆಗುವ ನಿರೀಕ್ಷೆಯಿದೆ. ಉತ್ಪಾದನಾ ವೆಚ್ಚ ಕಡಿತದಿಂದ ರೈತರಿಗೆ ಅನುಕೂಲವಾಗಲಿದೆ. ಶೇ. 95 ರಷ್ಟು ರಸಗೊಬ್ಬರ ಆಮದು ಪ್ರಮಾಣ ತಗ್ಗಿ, ಕೇಂದ್ರದ ಬೊಕ್ಕಸಕ್ಕೂ ಉಳಿತಾಯವಾಗಲಿದೆ.