News

ಅತಿಯಾದ ಮಳೆಯ ನಡುವೆ ಶೇಂಗಾ, ಮೆಕ್ಕೆಜೋಳ ಬೆಳಗಳ ರಕ್ಷಣೆ ಹೇಗೆ?

19 July, 2021 5:00 PM IST By:

ಕಳೆದ ಕೆಲವು ದಿನಗಳಿಂದ ಮಳೆ ಬಿಟ್ಟೂ ಬಿಡದೆ ಸುರಿಯುತ್ತಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಜನರಿಗೆ ಸಾಕ್ಷಾತ್ ಮಲೆನಾಡಿನ ಅನುಭವ ಆಗುತ್ತಿದೆ. ಅಷ್ಟೊಂದು ಪ್ರಮಾಣದ ಮಳೆಯಾಗುತ್ತಿದೆ.  ರಾಜ್ಯದ ಬೆಂಗಳೂರು ಗ್ರಾಮಾಂತರ, ರಾಮನಗರ, ತುಮಕೂರು, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಚಿಕ್ಕಮಗಳೂರು, ಬಳ್ಳಾರಿ, ಮೈಸೂರು, ಮಂಡ್ಯ, ಹಾಸನ, ಉಡುಪಿ, ಕಾರವಾರ, ಹಾವೇರಿ, ಹುಬ್ಬಳ್ಳಿ-ಧಾರವಾಡ, ಕಲಬುರಗಿ, ಬೀದರ್ ಸೇರಿ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಒಂದು ವಾರದಿಂದ ಈಚೆಗೆ ದಿನವಿಡೀ ಮಳೆಯಾಗುತ್ತಿದೆ.

ನಿರಂತರ ಮಳೆಯಿಂದ ರೈತರೇನೋ ಖುಷಿಯಾಗಿದ್ದಾರೆ. ಆದರೆ, ಅತಿಯಾದ ಮಳೆಯಿಂದ ಬೆಳೆ ಹಾನಿಯಾಗುತ್ತಿರುವ ಬಗ್ಗೆಯೂ ರೈತರು ಆತಂಕಕ್ಕೊಳಗಾಗಿದ್ದಾರೆ. ಈ ನಡುವೆ ರಾಜ್ಯಾದ್ಯಂತ ಮಳೆಯ ಆರ್ಭಟ ಇನ್ನೂ ಕೆಲವು ದಿನಗಳ ಕಾಲ ಹೀಗೇ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಇಲಾಖೆಯ ಈ ಹೇಳಿಕೆಯಿಂದ ರೈತರ ಆತಂಕ ಮತ್ತಷ್ಟು ಹೆಚ್ಚಿದೆ.

ಆತಂಕ ಬೇಡ; ಕ್ರಮ ಕೈಗೊಳ್ಳಿ

ಕೃಷಿ ತಜ್ಞರು ಹೇಳುವಂತೆ ಮಳೆ ಬಗ್ಗೆ ರೈತರು ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ. ಏಕೆಂದರೆ ಪ್ರತಿ ವರ್ಷ ಮುಂಗಾರು ಹಂಗಾಮಿನ ಅವಧಿಯಲ್ಲಿ ಬೀಜ ಬಿತ್ತನೆ ಮಾಡಿದ ಬಳಿಕ ಮಳೆ ಆಗುವುದು ಸಹಜ. ಹಾಗಂತಾ ಯಾರೂ ಬೆಳೆ ಬೆಳೆಯುವುದನ್ನು ನಿಲ್ಲಿಸುವುದಿಲ್ಲ. ಕಾರಣವಿಷ್ಟೇ, ಮೆಳೆ ಹೆಚ್ಚಾದರೆ ಅದರಿಂದ ಬೆಳೆಗಳ ಮೇಲಾಗುವ ಪರಿಣಾಮಗಳನ್ನು ತಡೆಯಲು ಸಾಕಷ್ಟು ಕ್ರಮಗಳಿವೆ. ಅವುಗಳ ಬಗ್ಗೆ ರೈತರಿಗೂ ಅರಿವಿದೆ. ಆದರೂ ಸಮರ್ಪಕ ಕ್ರಮಗಳ ಅನುಸರಿಸುವಿಕೆ ಕುರಿತು ಕೃಷಿಕ ಸಮುದಾಯಕ್ಕೆ ಮಾಹಿತಿ ನೀಡುವ ಅಗತ್ಯವಿದೆ ಎನ್ನುತ್ತಾರೆ ನಿವೃತ್ತ ಜಂಟಿ ಕೃಷಿ ನಿರ್ದೇಶಕರಾಗಿರುವ ಡಾ.ಆರ್.ಜಿ.ಗೊಲ್ಲರ್.

ಮಳೆಯ ಆರ್ಭಟದ ವೇಳೆ ರೈತರು ಯಾವ ಕ್ರಮಗಳನ್ನು ಅನುಸರಿಸಬೇಕು? ಯಾವ ಬೆಳೆಗೆ ಯಾವ ರೀತಿಯ ಪೆವೋಷಣೆ ಅಗತ್ಯ? ಪೋಷಕಾಂಶಗಳ ಬಳಕೆ ಹೇಗೆ ಮಾಡಬೇಕು ಎಂಬ ಮಾಹಿತಿಯನ್ನು ಡಾ.ಆರ್.ಜಿ.ಗೊಲ್ಲರ್ ಅವರು ‘ಕೃಷಿ ಜಾಗರಣ’ ಜೊತೆ ಹಂಚಿಕೊAಡಿದ್ದಾರೆ.

ಶೇಂಗಾ ಬೆಳೆ ನಿರ್ವಹಣೆ

* ಕೃಷಿ ಜಮೀನಿನಲ್ಲಿ ನಿಂತಿರುವ ಮಳೆ ನೀರು ಹೊರ ಹಾಕಬೇಕು.

* ಮುಂಗಾರು ಆರಂಭಕ್ಕೆ ಮೊದಲು ಬಿತ್ತನೆ ಮಾಡಿದ ಬೆಳೆಗೆ ಹೆಕ್ಸಾಕೊನಾಜೋಲ್ (1 ಮಿ.ಲೀ/ಲೀ) ಅಥವಾ ಕಾರ್ಬೆಂಡೆಜಿಂ (2 ಗ್ರಾಂ/ಲೀ) ಶಿಲೀಂಧ್ರ ನಾಶಕದೊಡನೆ ಪೋಷಕಾಂಶಗಳ ಮಿಶ್ರಣವನ್ನು ಬೆರೆಸಿ ಸಿಂಪಡಿಸಬೇಕು. ಹೀಗೆ ಮಾಡುವುದರಿಂದ ಮಳೆಯಿಂದ ಉಂಟಾಗುವ ರೋಗ ಬಾಧೆ ಉಲ್ಬಣ ತಡೆಯಬಹುದು.

* ಬಳಸಬೇಕಿರುವ ಪೋಷಕಾಂಶಗಳು: 19:19:19, 13:0:45 (ಅಥವಾ 0:52:34), ಲಘು ಪೋಷಕಾಂಶಗಳ ಮಿಶ್ರಣ.

* ಬೆಳೆಯ ಬೆಳವಣಿಗೆ ಹೆಚ್ಚಿದ್ದರೆ ಸಾರಜನಕಯುಕ್ತ ಗೊಬ್ಬರ ಬಳಕೆ ಪ್ರಮಾಣ ಕಡಿಮೆ ಮಾಡಬೇಕು

* ಭೂಮಿ ಹದವಾಗಿದ್ದರೆ ಕಳೆಗಳ ನಿರ್ವಹಣೆಗೆ ಕಿರುಗುಂಟೆ ಅಥವಾ ಕೈ ನೇಗಿಲಿನಿಂದ ಎಡೆ ಹೊಡೆಯುವುದು ಸೂಕ್ತ.

* ಬಿತ್ತನೆಯಾಗಿ 25-35 ದಿನಗಳ ಹಂತದಲ್ಲಿರುವ ಪ್ರತಿ ಎಕರೆ ಬೆಳೆಯ ಸಾಲುಗಳ ಪಕ್ಕದಲ್ಲಿ 100-200 ಕೆಜಿ ಜಿಪ್ಸಂ, 5 ಕೆ.ಜಿ ಜಿಂಕ್ ಸಲ್ಫೇಟ್, 1 ಕೆ.ಜಿ ಬೋರಾನ್ ಕೊಡಬೇಕು.

* ಅತಿಯಾದ ಮಳೆಯಿಂದ ದಿಂಡು ಏರಿಸಲು ಸಾಧ್ಯವಿಲ್ಲದಿದ್ದರೆ ಎತ್ತರವಾಗಿ ಬೆಳೆದ ಬೆಳೆಯಲ್ಲಿ ಕಾಯಿ ಸಂಖ್ಯೆ ಕಡಿಮೆಯಾಗುತ್ತದೆ. ಇದನ್ನು ತಡೆಯಲು, ಹಗುರವಾದ ಕಟ್ಟಿಗೆ ರೋಲರ್ ಅನ್ನು ಬೆಳೆಯ ಮೇಲೆ ಉರುಳಿಸಬೇಕು. ಇದರಿಂದ ಊಡುಗಳು ಮಣ್ಣಿನ ಸಂಪರ್ಕ ಪಡೆದು ಕಾಯಿ ಸಂಖ್ಯೆ ಹೆಚ್ಚುವುದು.

* ಬೆಳೆಯಲ್ಲಿ ಲದ್ದಿ ಹುಳುಗಳ ಹತೋಟಿಗೆ ನುಮೋರಿಯ (ಮೆಟಾರೈಜಿಯಂ) ರಿಲೈ ಜೈವಿಕ ಶಿಲೀಂಧ್ರ ನಾಶಕ ಬಳಸಬೇಕು.

ಮೆಕ್ಕೆಜೋಳ ಬೆಳೆ ಪೋಷಣೆ

* ಮುಂಚಿತವಾಗಿ ಬಿತ್ತನೆ ಮಾಡಿದ ಬೆಳೆಗೆ, 1 ಮಿ.ಲೀ ಹೆಕ್ಸಾಕೊನಾಜೋಲ್ ಅನ್ನು ಶಿಲೀಂಧ್ರ ನಾಶಕದೊಡನೆ ಬೆರೆಸಿ ಸಿಂಪರಿಸುವುದರಿಂದ ರೋಗ ಬಾಧೆ ಉಲ್ಬಣ ತಡೆಯಬಹುದು.

* ಬೆಳೆ ನಡುವೆ ನಿಂತಿರುವ ಮಳೆ ನೀರನ್ನು ಹೊರಗೆ ಹಾಕಬೇಕು. ಜೊತೆಗೆ ಪೋಷಕಾಂಶಗಳ ಮಿಶ್ರಣವನ್ನು ಬೆಳೆಗಳಿಗೆ ಸಿಂಪಡಿಸಬೇಕು.

* ಬಳಸಬೇಕಾದ ಪೋಷಕಾಂಶಗಳು: 19:19:19, 13:0:45 (ಅಥವಾ 0:52:34), ಲಘು ಪೋಷಕಾಂಶಗಳ ಮಿಶ್ರಣ

* ಕಳೆಗಳು ಬೆಳೆಗಳ ಬೆಳವಣಿಗೆಯನ್ನು ಕುಂಠಿತಗಳಿಸುವುದರಿAದ ನೇಗಿಲಿನಿಂದ ಎಡೆ ಹೊಡೆಯುವ ಮೂಲಕ ಕಳೆಗಳ ಬೆಳವಣಿಗೆ ತಗ್ಗಿಸಬಹುದು.

* ಎಲ್ಲ ಪೋಷಕಾಂಶಗಳನ್ನು ಮಣ್ಣಿನ ಮೂಲಕ ಮತ್ತು ಎಲೆಯ ಮೂಲಕ ಕೊಟ್ಟಿದ್ದಲ್ಲಿ ನ್ಯಾನೋ ಯೂರಿಯಾ (2 ಗ್ರಾಂ / ಲೀ) ದ್ರಾವಣ ಸಿಂಪಡಿಸಬಹುದು.

* ಬೆಳೆ ಸಣ್ಣದಿದ್ದಲ್ಲಿ 20 ಕೆ.ಜಿ ಯೂರಿಯಾ, 10 ಕೆ.ಜಿ ಎಂಓಪಿ ಕೊಟ್ಟು ಮಣ್ಣಿನಲ್ಲಿ ಮುಚ್ಚಬೇಕು. ಜೊತೆಗೆ ಪೋಷಕಾಂಶಗಳ ಸಿಂಪರಣೆ ಅತ್ಯಗತ್ಯ.

* ಯೂರಿಯಾ ಗೊಬ್ಬರವನ್ನು ಬೆಳೆಗಳ ಮೇಲೆ ಉಗ್ಗಬಾರದು.

* ಚಂಡಮಾರುತಗಳ ಹಿನ್ನೆಲೆಯಲ್ಲಿ ಅತಿಯಾದ ಮಳೆ ಹಿಂದೆಯೇ ಶುಷ್ಕ ವಾತಾವರಣ ಬರುವ ಸಾಧ್ಯತೆ ಇರುವುದರಿಂದ ಮೂಟೆಗಟ್ಟಲೆ ಯೂರಿಯಾ ಬಳಕೆ ಬೇಡ.

* ಬೆಳೆಯು ಮೂರು ಅಡಿ ಎತ್ತರ ಇರುವಾಗ ಲದ್ದಿ ಹುಳು ಹತೋಟಿಗೆ ನುಮೋರಿಯ (ಮೆಟಾರೈಜಿಯಂ) ರಿಲೈ ಜೈವಿಕ ಶಿಲೀಂಧ್ರ ನಾಶಕ ಬಳಸಿ.

* ಕವಚ ಕೊಳೆ ರೋಗ ಬಾಧೆ ತಡೆಯಲು ಹೆಕ್ಸಾಕೊನಾಜೋಲ್ (1 ಮಿ.ಲೀ/ಲೀ) ಸಿಂಪಡಣೆ ಮಾಡಿ.