News

ದುಬಾರಿ ಬೆಲೆಯ ಕಳೆನಾಶಕ ಬಿಟ್ಹಾಕಿ; ಮನೆಯಲ್ಲೇ ದ್ರಾವಣ ತಯಾರಿಸಿ ಕಳೆ ಹೊಡೆದೋಡಿಸಿ

28 September, 2021 4:45 PM IST By:

ರೈತರು ಹೊಲದಲ್ಲಿ ಬಿತ್ತಿದ ಬೀಜಗಳು ಸರಿಯಾಗಿ ಮೊಳಕೆಯೊಡೆದು ಹುಟ್ಟಿ, ಬೆಳೆಯುತ್ತವೋ ಇಲ್ಲವೋ ಎಂದು ಖಚಿತವಾಗಿ ಹೇಳಲಾಗದು. ಆದರೆ ಬಿತ್ತದೆ, ನೂರುಣಿಸಿದೆ, ಗೊಬ್ಬರ ಹಾಕದೆ ಬೆಳೆಯುವ ಬೆಳೆ ಎಂದರೆ ಅದು ಕಳೆ ಮಾತ್ರ. ‘ನಮ್ಮ ಹೊಲದಲ್ಲಿ ಕಳೆಯ ಕಾಟ ಇಲ್ಲ’ ಎಂದು ಹೇಳುವ ಒಬ್ಬೇ ಒಬ್ಬ ರೈತ ಕೂಡ ನಿಮಗೆ ಸಿಗಲಾರರು. ಏಕೆಂದರೆ ಕಳೆ ಎಂಬುದು ಜಗತ್ ವ್ಯಾಪಿ ಮತ್ತು ವಿಶ್ವ ರೂಪಿ. ಇಂತಹ ಕಳೆಯನ್ನು ನಾಶ ಮಾಡಲು ಇರುವ, ಮನೆಯಲ್ಲೇ ತಯಾರಿಸಬಹುದಾದ ‘ಮನೆ ಮದ್ದು’ ಕುರಿತ ಮಾಹಿತಿಯನ್ನು ‘ಕೃಷಿ ಜಾಗರಣ’ ನಿಮ್ಮ ಮುಂದಿರಿಸುತ್ತಿದೆ.

ಬೇಡವೆAದರೂ ಹುಲುಸಾಗಿ ಬೆಳೆದು ನಿಲ್ಲುವ ಈ ಕಳೆಯ ವಿಶ್ವ ರೂಪ ಕಂಡು ಕಂಗಾಲಾಗದೆ ಇರುವ ರೈತರೇ ಇಲ್ಲ. ಕೆಲವೊಮ್ಮೆ ಬಿತ್ತಿದ ಬೆಳೆಗಿಂತಲೂ ಅದರ ನಡುವೆ ಹುಟ್ಟಿರುವ ಕಳೆಯೇ ಹುಲುಸಾಗಿ, ಸೊಂಪಾಗಿ ಬೆಳೆದು ನಿಂತಿರುತ್ತದೆ. ಹಾಗೇ ಬೆಳೆಗೆ ಎಷ್ಟೇ ರೋಗ ಬಂದರೂ ಕಳೆಗೆ ಮಾತ್ರ ಯಾವ ರೋಗದ ಬಾಧೆಯೂ ಇರವುದಿಲ್ಲ. ಹೀಗಿರುವ ಕಳೆಯನ್ನು ನಾಶ ಮಾಡುವುದೆಂದರೆ ರೈತರಿಗೆ ಕಬ್ಬಿಣದ ಕಡಲೆ ಇದ್ದಂತೆ. ಬೆಳೆದ ಕಳೆಯನ್ನು ಕೂಲಿ ಆಳುಗಳ ಮೂಲಕ ತೆಗೆಸಿದರೆ ಅಥವಾ ಟ್ರಾಕ್ಟರ್ ಮೂಲಕ ನೆಲಸಮ ಮಾಡಿದರೆ, ಮುಂದಿನ ಒಂದು ವಾರದ ಹೊತ್ತಿಗೆ ಮತ್ತೆ ಕಳೆ ಚಿಗುರೊಡೆದು ಹಸುರಾಗಿ ನಸುನಗುತ್ತಿರುತ್ತದೆ.

ರಾಸಾಯನಿಕ ಹಾನಿಕಾರಿಕ

ಕಳೆಯಲ್ಲಿ ಎರಡು ವಿಧಗಳಿವೆ. ಒಂದು ಹುಲ್ಲಿನ ಜಾತಿ ಮತ್ತೊಂದು ಗಿಡದ ಜಾತಿ. ಈ ಎರಡೂ ಕಳೆಗಳು ಪ್ರಮುಖ ಬೆಳೆಗಳ ಬೆಳವಣಿಗೆ ಕುಂಠಿತ ಗೊಳಿಸುತ್ತವೆ. ಇಂತಹ ಹಟಮಾರಿ ಕಳೆಗಳನ್ನು ನಾಶ ಮಾಡಲು ರೈತರು ಇತ್ತೀಚೆಗೆ ರಾಸಾಯನಿಕ ಕಳೆ ನಾಶಕಗಳ ಮೊರೆ ಹೋಗಿದ್ದದಾರೆ. ಆದರೆ ಈ ರಾಸಾಯನಿಕ ದ್ರಾವಣಗಳ ಹೆಚ್ಚು ಬಳಕೆಯಿಂದ ಭೂಮಿ ಬಂಜರಾಗುತ್ತಿರುವುದು ರೈತರ ನೆಮ್ಮದಿ ಕೆಡಿಸಿದೆ. ಬೆಳೆ ಮೇಲೆ ಕಳೆಗಳು ಮಾಡುತ್ತಿರುವ ಹಾನಿಗಿಂತಲೂ ಹತ್ತು ಪಟ್ಟು ಹೆಚ್ಚು ಹಾನಿಯನ್ನು ಈ ಕಳೆ ನಾಶಕಗಳು ಮಾಡುತ್ತಿವೆ. ಹಾನಿಕಾರಕ ಕಳೆ ನಾಶಕಗಳ ಬಳಕೆಯಿಂದ ಬೆಳೆ ಹಾಗೂ ಭೂಮಿ ಅಥವಾ ಮಣ್ಣಿನ ಮೇಲಾಗುವ ದುಷ್ಪರಿಣಾಮಗಳ ಅರಿವು ನಿಧಾನವಾಗಿ ರೈತರ ಗಮನಕ್ಕೆ ಬರುತ್ತಿದೆ. ಹೀಗಾಗಿ ಹಾನಿಕಾರಕ ರಾಸಾಯನಿಕ ಕಳೆ ನಾಶಕಗಳನ್ನು ಬಿಟ್ಟು ಬೆಳೆ ಹಾಗೂ ಭೂಮಿಗೆ ಮಾರಕವಲ್ಲದ ‘ಸಾಯಿಲ್ ಸ್ನೇಹಿ’ ಕಳೆ ನಾಶಕಕ್ಕಾಗಿ ರೈತರು ಎದುರು ನೋಡುತ್ತಿದ್ದಾರೆ.

ಮನೆಯಲ್ಲೇ ತಯಾರಿಸಿ ಕಳೆ ನಾಶಕ

ಮಾರುಕಟ್ಟೆಯಲ್ಲಿ ಈಗ ಸಿಗುತ್ತಿರುವ ರಾಸಾಯನಿಕ ಕಳೆ ನಾಶಕಗಳು ಬಲು ದುಬಾರಿ. ಒಂದು ಎಕರೆ ತೋಟದಲ್ಲಿನ ಕಳೆ ನಾಶ ಮಾಡಲು ರೈತರು ಸಾವಿರಾರು ರೂಪಾಯಿ ವೆಚ್ಚ ಮಾಡಬೇಕು. ಜೊತೆಗೆ ಮಣ್ಣು, ಬೆಳೆ ಹಾನಿಯನ್ನೂ ಅನುಭವಿಸಬೇಕು. ಹೀಗಾಗಿ ರೈತರು ಮನೆಯಲ್ಲೇ ಸುಲಭವಾಗಿ ಮತ್ತು ಅತ್ಯಂತ ಕಡಿಮೆ ವೆಚ್ಚದಲ್ಲಿ ತಯಾರಿಸಿಕೊಳ್ಳಬಹುದಾಗಿರುವ ‘ಸಾವಯವ ಕಳೆ ನಾಶಕ’ ದ್ರಾವಣದ ಬಗ್ಗೆ ಇಲ್ಲಿ ಮಾಹಿತಿ ನೀಡಲಿದ್ದೇವೆ.

ಅಗತ್ಯವಿರುವ ಸಾಮಗ್ರಿಗಳು

  • ನಾಟಿ ಅಥವಾ ದೇಸಿ ಹಸುವಿನ 10 ಲೀಟರ್ ಮೂತ್ರ
  • 2 ಕೆ.ಜಿ.ಯಷ್ಟು ಬಿಳಿ ಎಕ್ಕೆ ಗಿಡದ ಎಲೆಗಳು
  • 2 ಕೆ.ಜಿ ಹರಳು ಉಪ್ಪು (ದಪ್ಪ ಉಪ್ಪು)
  • ಅರ್ಧ ಕೆ.ಜಿ.ಯಷ್ಟು ಸುಣ್ಣದ ಕಲ್ಲು
  • ದೊಡ್ಡ ಗಾತ್ರದ ಎರಡು ನಿಂಬೆಹಣ್ಣು
  • 20 ಲೀಟರ್ ನೀರು ಸಂಗ್ರಹ ಸಾಮರ್ಥ್ಯದ ಬ್ಯಾರೆಲ್ (ಡ್ರಮ್)

ತಯಾರಿಸುವುದು ಹೇಗೆ?

  • ಮೊದಲಿಗೆ ಬಿಳಿ ಎಕ್ಕೆ ಗಿಡದ ಎಲೆಯನ್ನು ಚೆನ್ನಾಗಿ ಅರೆದುಕೊಳ್ಳಬೇಕು
  • ಎಕ್ಕೆ ಎಲೆಗಳು ನುಣ್ಣಗೆ ಪೇಸ್ಟ್ ರೀತಿ ಆದ ನಂತರ ಅದನ್ನು 10 ಲೀಟರ್ ಗೋಮೂತ್ರಕ್ಕೆ ಬೆರೆಸಬೇಕು
  • ನಂತರ ಅರ್ಧ ಕೆಜಿ ಸುಣ್ಣದ ಕಲ್ಲು, 2 ಕೆ.ಜಿ ಹರಳು ಉಪ್ಪು ಬೇರೆಸಿ
  • ಉದ್ದನೆಯ ಕೋಲು ತೆಗೆದುಕೊಂಡು ಡ್ರಮ್‌ನಲ್ಲಿ ಇರುವ ದ್ರಾವಣವನ್ನು ಎಡದಿಂದ ಬಲಕ್ಕೆ (ಗಡಿಯಾರದ ಮುಳ್ಳುಗಳು ಚಲಿಸುವ ದಿಕ್ಕಿನಲ್ಲಿ) ತಿರುಗಿಸಿ ಸರಿಯಾಗಿ ಬೆರೆಯುವಂತೆ ಮಾಡಿ
  • ನಂತರ ಬ್ಯಾರೆಲ್ ಮುಚ್ಚುಳವನ್ನು ಬಿಗಿಯಾಗಿ ಮುಚ್ಚಿ ಒಂದು ವಾರ ಕೊಳೆಯಲು ಬಿಡಿ
  • ವಾರದ ಬಳಿಕ ತಯಾರಾದ ಕಳೆ ನಾಶಕ ಮಿಶ್ರಣಕ್ಕೆ ಎರಡು ದೊಡ್ಡ ನಿಂಬೆ ಹಣ್ಣುಗಳ ರಸ ಹಿಂಡಿ ಚೆನ್ನಾಗಿ ಬೆರೆಸಿ
  • ಹೀಗೆ ತಯಾರಾದ ಒಂದು ಲೀಟರ್ ಮಿಶ್ರಣವನ್ನು 9 ಲೀಟರ್ ನೀರಿಗೆ ಬೆರೆಸಿ ಕಳೆ ಮೇಲೆ ಸಿಂಪಡಿಸಿದರೆ ಕಳೆ ನಾಶವಾಗುತ್ತದೆ

ಸಿಂಪಡಣೆ ವಿಧಾನ ಮತ್ತು ಪ್ರಯೋಜನ

  • ಕಳೆಯು ಒಂದು ಅಡಿಗಿಂತಲೂ ಚಿಕ್ಕದಿರುವಾಗ ಈ ದ್ರಾವಣ ಸಿಂಪಡಿಸಿದರೆ ಉತ್ತಮ ಫಲಿತಾಂಶ ಸಿಗುತ್ತದೆ
  • ಈ ಸಾವಯವ ಕಳೆ ನಾಶಕ ಸಿಂಪಡಿಸುವಾಗ ಮುಖ್ಯ ಬೆಳೆಗೆ ತಾಗದಂತೆ ಎಚ್ಚರ ವಹಿಸಿ
  • ಮಳೆ ಬರುವಾಗ ಸಿಂಪಡಣೆ ಮಾಡಿದರೆ ನಿಮ್ಮ ಶ್ರಮ ವ್ಯರ್ಥವಾಗುತ್ತದೆ
  • ಒಮ್ಮೆ ಕಳೆ ನಾಶಕ ಸಿಂಪಡಿಸಿದರೆ ಕಳೆ ನಾಶವಾಗಲು ಒಂದು ವಾರ ಸಮಯ ತಗುಲುತ್ತದೆ
  • ರಾಸಾಯನಿಕ ಕಳೆ ನಾಶಕದಂತೆ ಈ ದ್ರಾವಣ ಭೂಮಿಗೆ ಹಾನಿ ಮಾಡುವುದಿಲ್ಲ
  • ಈ ದ್ರಾವಣ ಉಪಯೋಗಿಸಿದರೆ ಭೂಮಿ ಅಥವಾ ಮಣ್ಣು ಮೃದುವಾಗುತ್ತದೆ
  • ನಾಶವಾದ ಕಳೆ, ಪ್ರಮುಖ ಬೆಳೆಗೆ ಗೊಬ್ಬರವಾಗಿ ಮಾರ್ಪಡುತ್ತದೆ
  • ಭೂಮಿಯೊಳಗೆ ಜೀವಾಣುಗಳ ಸಂಖ್ಯೆ ವೃದ್ಧಿಯಾಗಿ ಬೆಳೆಗೆ ಪೋಷಣೆ ಸಿಗುತ್ತದೆ

ಮಾಹಿತಿ: ವಿಲಾಸ್ ಕಬ್ಬೂರ್, ಕೃಷಿ ವಿದ್ಯಾರ್ಥಿ