ಸಿಹಿಯಾದ ಜೇನುತುಪ್ಪಾ ಯಾರಿಗೆ ಇಷ್ಟವಿಲ್ಲ ಹೇಳಿ. ಪ್ರತಿಯೊಬ್ಬರೂ ಜೇನು ತುಪ್ಪ ಸವಿಯಲು ಇಷ್ಟಪಡುತ್ತಾರೆ. ಒಂದೆರಡು ಹನಿಯಾದರೂ ನೆಕ್ಕುತ್ತಾ ತಿನ್ನುತ್ತಿದ್ದರೆ ಅದರ ಮಜವೇ ಬೇರೆ. ಕೊರೋನಾ ಬಂದ ಮೇಲೆ ಇತ್ತೀಚೆಗೆ ಮಾರುಕಟ್ಟೆಯಲ್ಲಿ ಜೇನುತುಪ್ಪ ಹೆಚ್ಚು ಮಾರಾಟವಾಗುತ್ತಿದೆ. ಏಕೆಂದರೆ ಬಹಳಷ್ಟು ಕೆಟ್ಟ ಸೋಂಕುಗಳು ಮನುಷ್ಯನಿಗೆ ತಾಗದಂತೆ ರೋಗ ನಿರೋಧಕ ವ್ಯವಸ್ಥೆಯನ್ನು ಬಲಪಡಿಸುವ ಶಕ್ತಿ ಜೇನು ತುಪ್ಪದಲ್ಲಿದೆ. .
ಜೇನು ತುಪ್ಪ ನಿಸರ್ಗದಲ್ಲಿ ಹಲವಾರು ಹೂವಿನ ದ್ರವಗಳ ಮಿಶ್ರಣದಿಂದ ಉತ್ಪತ್ತಿಯಾಗುವ ಒಂದು ನೈಸರ್ಗಿಕ ಆಹಾರ ಪದಾರ್ಥ. ಹಿಂದಿನ ಕಾಲದಿಂದಲೂ ಜೇನು ತುಪ್ಪಕ್ಕೆ ಆರೋಗ್ಯ ಪದ್ಧತಿಯಲ್ಲಿ ಕೂಡ ಅದರದೇ ಆದ ಮಹತ್ವವಿದೆ. ಮನುಷ್ಯರ ಆರೋಗ್ಯ ವೃದ್ಧಿಯಲ್ಲಿ ಸಹಾಯ ಮಾಡುವ ಒಳ್ಳೆಯ ಗುಣ ಲಕ್ಷಣ ಜೇನು ತುಪ್ಪದಲ್ಲಿದೆ. ಆದರೆ ನೀವು ಖರೀದಿಸುವ ಜೇನು ತುಪ್ಪ ಅಸಲಿಯೋ ನಕಲಿಯೋ ಎಂಬುದು ಗೊತ್ತಾಗಲ್ಲ.
ಜೇನುತುಪ್ಪದಲ್ಲಿ ಯಾವುದೇ ಕಲಬೆರಕೆ ಇರೋದಿಲ್ಲ ಎಂದು ಖರೀದಿಸಿದ್ರೆ ನೀವು ಯಾಮಾರೋದು ಖಚಿತ. ಪರೀಕ್ಷೆಯಲ್ಲಿಯೂ ಪತ್ತೆ ಹಚ್ಚಲಾಗದಷ್ಟು ಜೇನುತುಪ್ಪದಲ್ಲಿ ಭಾರಿ ಕಲಬೆರಕೆ ದಂಧೆ ನಡೆಯುತ್ತಿದೆ. ಜೇನಿನಲ್ಲಿ ಜೇನುತುಪ್ಪಕ್ಕಿಂತ ಸಕ್ಕರೆ ಪಾಕವೇ ಹೆಚ್ಚು ಎಂಬುದಾಗಿ ವಿಜ್ಞಾನ ಮತ್ತು ಪರಿಸರ ಕೇಂದ್ರ(ಸಿಎಸ್‌ಇ) ನಡೆಸಿದಂತ ಅಧ್ಯಯನದಲ್ಲಿ ಬಯಲಾಗಿದೆ. ಮಾರುಕಟ್ಟೆಯಲ್ಲಿ ಸಿಗುವ ಎಲ್ಲಾ ಜೇನು ಉತ್ತಮವೆಂದೇ ನೀವು ಖರೀದಿಸಲು ಹೋದರೆ ಮೋಸ ಹೋಗುವ ಸಾಧ್ಯತೆಯಿದೆ. ಕಲಬೆರಕೆ ಜೇನುತುಪ್ಪ ಪರೀಕ್ಷಿಸುವುದು ಹೇಗೆ ಅಂದುಕೊಂಡಿದ್ದೀರಾ. ಇಲ್ಲಿದೆ ಸರಳ ಮಾಹಿತಿ.
ಕಲಬೆರಕೆ ಜೇನುತುಪ್ಪ ಪರೀಕ್ಷೆ ಹೇಗೆ?
ಹೆಬ್ಬೆರಳಿನ ಮೇಲೆ ಒಂದು ಹನಿ ಜೇನುತುಪ್ಪ ಹಾಕಿ. ಇದು ಅಲ್ಲಿಯೇ ಅಂಟಿಕೊಂಡರೆ ಆ ಜೇನುತುಪ್ಪ ಶುದ್ಧ ಎಂದು ಅರ್ಥ. ಅಚೆ ಈಚೆ ಹರಡಿಕೊಂಡರೆ ಕಲಬೆರಕೆಯಾಗಿದೆ ಎಂದು ಅರ್ಥ.
ಜೇನನ್ನು ಪರೀಕ್ಷೆ ಮಾಡುವುದು ಹೇಗೆ ಎಂದರೆ ಒಂದು ಗ್ಲಾಸ್ ನೀರನ್ನು ತೆಗೆದುಕೊಂಡು ಅದಕ್ಕೆ ಒಂದು ಚಮಚ ಜೇನು ಹಾಕಿದಾಗ ಜೇನು ನೀರಿನೊಂದಿಗೆ ಮಿಶ್ರವಾಗುತ್ತದೆ. ಉತ್ತಮ ಗುಣಮಟ್ಟದ ಜೇನು ತಳಭಾಗದಲ್ಲಿ ಹೋಗಿ ನಿಲ್ಲುತ್ತದೆ. ಇದು ಸಾಮಾನ್ಯವಾಗಿ ಪರೀಕ್ಷೆ ಮಾಡುವ ಒಂದು ವಿಧಾನವಾಗಿದೆ.
ಒಣದಾಗಿರುವ ಒಂದು ಬೆಂಕಿ ಕಡ್ಡಿಯ ತುದಿಯನ್ನು ಜೇನುತುಪ್ಪದಲ್ಲಿ ಅದ್ದಿ, ಬೆಂಕಿಪೊಟ್ಟಣಕ್ಕೆ ಗೀರಿ. ಇದು ಬೆಂಕಿ ಹತ್ತಿಕೊಂಡರೆ ಆ ಜೇನುತುಪ್ಪ ಶುದ್ಧ ಎಂದು ಅರ್ಥ. ಕಲಬೆರಕೆಯಾಗಿರುವ ಜೇನುತುಪ್ಪದಲ್ಲಿ ತೇವಾಂಶವಿರುವುದರಿಂದ ಅದರಲ್ಲಿ ಬೆಂಕಿ ಹತ್ತಿಕೊಳ್ಳುವುದಿಲ್ಲ.
ಜೇನುತುಪ್ಪಕ್ಕೆ ಸ್ವಲ್ಪ ನೀರು ಮತ್ತು ಎರಡು ಹನಿಗಳಷ್ಟು ವಿನಿಗರ್ ಹಾಕಿ ತಿರುವಿ. ಎರಡು ನಿಮಿಷಗಳ ನಂತರ ಈ ಮಿಶ್ರಣದಲ್ಲಿ ನೊರೆ ಕಂಡು ಬಂದರೆ ಆ ಜೇನುತುಪ್ಪ ಕಲಬೆರಕೆಯಾಗಿದೆ ಎಂದು ಅರ್ಥ.