ಪ್ರತಿಯೊಬ್ಬರೂ ಸಹ ಸ್ವಂತ ಮನೆ ಇರಬೇಕೆಂದು ಬಯಸುತ್ತಾರೆ. ಆದರೆ ಒಟ್ಟಿಗೆ ಹಣ ಗಳಿಸಿ ಮನೆ ಕಟ್ಟದೆ ಎಷ್ಟೋ ಜನರ ಕನಸು ಕನಸಾಗಿಯೇ ಉಳಿದುಕೊಳ್ಳುತ್ತದೆ. ಇಂತಹವರ ಕನನು ನನಸು ಮಾಡುವುದಕ್ಕಾಗಿಯೇ ಕೇಂದ್ರ ಸರ್ಕಾರವು ಪ್ರಧಾನಮಂತ್ರಿ ಆವಾಸ್ ಯೋಜನೆ (Pradhan Mantri Awas Yojana - PMAY) ಯನ್ನು ಜಾರಿಗೆ ತಂದಿದೆ.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2020-21ನೇ ಸಾಲಿನಲ್ಲಿ ರಾಜ್ಯ ಪ್ರತಿ ಗ್ರಾಮ ಪಂಚಾಯತಿಗೆ 20 ಮನೆ ನಿರ್ಮಾಣ ಗುರಿ ನಿಗದಿಪಡಿಸಲಾಗಿದ್ದರಿಂದ ಈ ಯೋಜನೆಗೆ ಮರು ಜೀವ ದೊರಕಲಿದೆ. 2022ರ ವೇಳೆಗೆ 20 ಲಕ್ಷ ಮನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ.
ಕೇಂದ್ರ ಸರ್ಕಾರವು ಪಿಎಂ ಆವಾಸ್ ಯೋಜನೆಯಡಿ ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸ್ಕೀಮ್ (ಸಿಎಲ್‌ಎಸ್ಎಸ್) ಅನ್ನು 2021 ಮಾರ್ಚ್ 31 ರವರೆಗೆ ವಿಸ್ತರಿಸಿದೆ. ನಗರ ಮತ್ತು ಗ್ರಾಮೀಣ ಜನರಿಗೆ ಅನುಕೂಲವಾಗಲೆಂದು ಪಿ.ಎ.ವೈ.ನಗರ ಮತ್ತು ಪಿ.ಎ.ವೈ ಗ್ರಾಮೀಣ ಎಂಬ ಎರಡು ವಿಭಾಗಗಳಾಗಿ ವಿಂಗಡಿಸಲಾಗಿದೆ. ಈ ಯೋಜನೆಯ ಲಾಭವನ್ನು ವಾರ್ಷಿಕ ಆದಾಯ 6 ಲಕ್ಷದಿಂದ 18 ಲಕ್ಷದವರೆಗಿನವರಿಗೆ ಸಿಗುತ್ತದೆ. ಈ ಯೋಜನೆಯಡಿ ಸಾಲ ಪಡೆಯಲು ಅವರು ಮೊದಲ ಬಾರಿಗೆ ಮನೆ ಖರೀದಿಸುತ್ತಿರಬೇಕು.. ಈ ಗೃಹ ಸಾಲದ ಮೇಲಿನ ಬಡ್ಡಿ ಬಡ್ಡಿ ಮೇಲೆ ಸಬ್ಸಿಡಿ ಗರಿಷ್ಠ 2.67 ಲಕ್ಷ ರುಪಾಯಿಯವರೆಗೆ ಸಿಗುತ್ತದೆ.
ಫಲಾನುಭವಿಗಳಾಗಲು ಅರ್ಹತೆ
ಫಲಾನುಭವಿಯ ಅರ್ಹತೆ ಫಲಾನುಭವಿ ಕುಟುಂಬವು ಸ್ವಂತದ ಪಕ್ಕಾ ಮನೆಯನ್ನು ಹೊಂದಿರಬಾರದು ಹಾಗೂ ಈ ಮುನ್ನ ಕೇಂದ್ರ ಸರಕಾರದ ಗೃಹ ಯೋಜನೆಯಡಿ ಯಾವುದೇ ಲಾಭವನ್ನು ಕುಟುಂಬ ಪಡೆದಿರಬಾರದು ಎಂಬ ಕಟ್ಟುನಿಟ್ಟಾದ ನಿಯಮವನ್ನು ಸರಕಾರ ವಿಧಿಸಿದೆ. ಪತಿ, ಪತ್ನಿ, ಮದುವೆಯಾಗದ ಗಂಡು ಅಥವಾ ಹೆಣ್ಣು ಮಕ್ಕಳನ್ನು ಕುಟುಂಬವೆಂದು ಪರಿಗಣಿಸಲಾಗುತ್ತದೆ. ಯೋಜನೆಯಲ್ಲಿ ಅಕ್ರಮವಾಗದಂತೆ ತಪ್ಪಿಸಲು ಕುಟುಂಬದ ಎಲ್ಲ ಸದಸ್ಯರು ತಮ್ಮ ಆಧಾರ ಸಂಖ್ಯೆಯನ್ನು ನೀಡುವುದನ್ನು ಕಡ್ಡಾಯಗೊಳಿಸಲಾಗಿದೆ.
ಮನೆ ವಿಸ್ತೀರ್ಣ ಎಷ್ಟಿರಬೇಕು?
ಪಿಎಂಎವೈನಡಿ ವಿವಿಧ ವರ್ಗಗಳಿಗೆ ವಿಭಿನ್ನ ಮನೆ ವಿಸ್ತೀರ್ಣ ಪ್ರಮಾಣಗಳನ್ನು ನಿಗದಿಪಡಿಸಲಾಗಿದೆ. ಎಂಐಜಿ-1 ವರ್ಗಕ್ಕೆ 90 ಚದರ ಮೀಟರ್ (968.752 ಚದರ ಅಡಿ) ಹಾಗೂ ಎಂಐಜಿ-2 ವರ್ಗಕ್ಕೆ 110 ಚದರ ಮೀಟರ್ (1184.03 ಚದರ ಅಡಿ) ನಿಗದಿಪಡಿಸಲಾಗಿದೆ.
ಆದಾಯಕ್ಕೆ ಅನುಗುಣವಾಗಿ ನಾಲ್ಕು ಕೆಟಗೇರಿ
ವಾರ್ಷಿಕವಾಗಿ 3 ರಿಂದ 6 ಲಕ್ಷ ರೂ.ಆದಾಯ ಹೊಂದಿದವರು ಆರ್ಥಿಕವಾಗಿ ಹಿಂದುಳಿದ ವರ್ಗಕ್ಕೆ ಮತ್ತು ಲೋ ಇನ್ಕಮ್ ಗ್ರುಪ್ (LIG), 6 ರಿಂದ 12 ಲಕ್ಷ ವಾರ್ಷಿಕ ಆದಾಯ ಹೊಂದಿದವರು ಮಿಡಲ್ ಇನ್ಕಮ್ ಗ್ರೂಪ್ (MIG) ಹಾಗೂ 12 ರಿಂದ 18 ಲಕ್ಷ ರೂ ವಾರ್ಷಿಕ ಆದಾಯ ಹೊಂದಿದವರು ಮಿಡಲ್ ಇನ್ಕಮ್ ಗ್ರೂಪ್ 2 (MIG2),ಅದಕ್ಕಿಂತ ಹೆಚ್ಚು ವಾರ್ಷಿಕ ಆದಾಯ ಹೊಂದಿದವರು ಹೈ ಇನ್ಕಮ್ ಗ್ರೂಪ್ (HIG) ಎಂಬ ನಾಲ್ಕು ವಿವಿಧ ಕೆಟಗರಿಗಳನ್ನು ನಿರ್ಮಿಸಲಾಗಿದೆ.
ಯಾವ ಕೆಟಗಿರಿಗೆ ಎಷ್ಟು ಸಬ್ಸಿಡಿ ಸಿಗುತ್ತದೆ?
ನಿಮ್ಮ ಆದಾಯವು ವಾರ್ಷಿಕ 6 ಲಕ್ಷ ರೂ.ಗಳಾಗಿದ್ದರೆ, ನಿಮಗೆ 6 ಲಕ್ಷ ರೂ.ಗಳ ಸಾಲದ ಮೇಲೆ 6.5 ಪ್ರತಿಶತದಷ್ಟು ಕ್ರೆಡಿಟ್ ಲಿಂಕ್ಡ್ ಸಬ್ಸಿಡಿ ಸಿಗುತ್ತದೆ. ಸಾಲವು ಗರಿಷ್ಠ 20 ವರ್ಷಗಳವರೆಗೆ ಇರಬೇಕು.
12 ಲಕ್ಷ ರೂ.ವರೆಗೆ ಗಳಿಸುವವರಿಗೆ 9 ಲಕ್ಷ ರೂ.ವರೆಗಿನ ಸಾಲದ ಮೇಲೆ ಶೇ 4 ರಷ್ಟು ಬಡ್ಡಿ ಸಬ್ಸಿಡಿ ರೂಪದಲ್ಲಿ ಸಿಗುತ್ತದೆ. ಸಾಲವು ಗರಿಷ್ಠ 20 ವರ್ಷಗಳವರೆಗೆ ಇರಬೇಕು.
18 ಲಕ್ಷ ರೂ.ವರೆಗೆ ಗಳಿಸುವವರಿಗೆ 12 ಲಕ್ಷ ರೂ.ವರೆಗಿನ ಸಾಲದ ಮೇಲೆ ಶೇ 3 ರಷ್ಟು ಬಡ್ಡಿ ಸಬ್ಸಿಡಿ ರೂಪದಲ್ಲಿ ದೊರೆಯುತ್ತದೆ. ಸಾಲವು ಗರಿಷ್ಠ 20 ವರ್ಷಗಳವರೆಗೆ ಇರಬೇಕು.
ಅರ್ಜಿ ಸಲ್ಲಿಸುವುದು ಹೇಗೆ ?
ಪ್ರಧಾನ್ ಮಂತ್ರಿ ಆವಾಸ್ ಯೋಜನೆಯ ಅಧಿಕೃತ ವೆಬ್‌ಸೈಟ್ https://pmaymis.gov.in/ ಲಾಗ್ ಇನ್ ಆಗಬೇಕು. ನೀವು LIG, MIG ಅಥವಾ EWS ವರ್ಗಕ್ಕೆ ಒಳಪಟ್ಟರೆ, ಇತರ 3 ಘಟಕಗಳ ಮೇಲೆ ಕ್ಲಿಕ್ ಮಾಡಬೇಕು.
ಮೊದಲು ಆಧಾರ್ ಸಂಖ್ಯೆಯನ್ನು ನಮೂದಿಸಿ. ಆಧಾರ್‌ನಲ್ಲಿ ಬರೆದ ನಿಮ್ಮ ಹೆಸರನ್ನು ನಮೂದಿಸಬೇಕು. ನಂತರ, ತೆರೆಯುವ ಪುಟದಲ್ಲಿ ಹೆಸರು, ವಿಳಾಸ, ಕುಟುಂಬ ಸದಸ್ಯರ ಮಾಹಿತಿಯಂತಹ ಸಂಪೂರ್ಣ ವೈಯಕ್ತಿಕ ವಿವರಗಳನ್ನು ತುಂಬಬೇಕು.
ಇದರ ಜೊತೆಗೆ ನೀಡಲಾಗಿದ್ದ ಪೆಟ್ಟಿಗೆಯ ಮೇಲೆ ಕ್ಲಿಕ್ ಮಾಡಿ, ಅದರ ಮೇಲೆ ನೀವು ಈ ಮಾಹಿತಿಯ ನಿಖರತೆಯನ್ನು ಪ್ರಮಾಣೀಕರಿಸುತ್ತೀರಿ ಎಂದು ಬರೆಯಲಾಗಿರುತ್ತದೆ. ಒಮ್ಮೆ ನೀವು ಎಲ್ಲಾ ಅರ್ಜಿಯ ಮಾಹಿತಿಯನ್ನು ಭರ್ತಿ ಮಾಡಿ ಸಲ್ಲಿಸಿದ ನಂತರ, ನೀವು ಇಲ್ಲಿ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಬೇಕಾಗುತ್ತದೆ. ಇದರ ನಂತರ ನೀವು ಈ ಫಾರ್ಮ್ ಅನ್ನು ಸಲ್ಲಿಸಬೇಕು.
ಯಾವ ಸಂಸ್ಥೆಗಳಿಂದ ಸಬ್ಸಿಡಿ ಸಾಲ ಪಡೆಯಬಹುದು?
ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು, ಗೃಹ ಹಣಕಾಸು ಸಂಸ್ಥೆಗಳು, ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು, ರಾಜ್ಯದ ಸಹಕಾರಿ ಬ್ಯಾಂಕುಗಳು, ನಗರ ಸಹಕಾರಿ ಬ್ಯಾಂಕುಗಳು, ಸಣ್ಣ ಹಣಕಾಸು ಬ್ಯಾಂಕುಗಳು, ಬ್ಯಾಂಕಿಂಗೇತರ ಹಣಕಾಸು ಸಂಸ್ಥೆಗಳು ಮುಂತಾದ ಸಂಸ್ಥೆಗಳಿಂದ ಪಿಎಂಎವೈನಡಿ ಸಬ್ಸಿಡಿ ಸಾಲ ಪಡೆಯಬಹುದು.