News

ದೇಶಾದ್ಯಂತ ಕೊರೋನಾ ಕ್ಷಣ ಕ್ಷಣದ ಮಾಹಿತಿಬೇಕೇ ಇಲ್ಲಿ. ಕ್ಲಿಕ್ ಮಾಡಿಃ

25 April, 2020 4:18 PM IST By:

ಮಹಾರಾಷ್ಟ್ರ, ಗುಜರಾತ, ದೆಹಲಿ, ರಾಜಸ್ಥಾನ, ಮಧ್ಯಪ್ರದೇಶ ಟಾಪ್ ಐದು ಸ್ಥಾನಗಳಲ್ಲಿವೆ

ಇನ್ನೂ ಮುಂದೆ ಲಾಕ್ಡೌನ್ ಸಡಿಲಿಗೊಳಿಸಿದರೆ ಆತಂಕ ತಪ್ಪಿದ್ದಲ್ಲ, ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮ ಅವಶ್ಯಕ

ಕೇವಲ ವಯೋವೃದ್ಧರಿಗಷ್ಟೇ ಅಲ್ಲ, ಹಸುಗುಸುವಿನಿಂದ ಹಿಡಿದು, ಯುವಕ, ಯುವತಿಯರಿಗೂ ಕೊರೋನಾ ಸೋಂಕು

ಕರ್ನಾಟಕದಲ್ಲಿ 474 ಕೊರೋನಾ ಪ್ರಕರಣಃ ಕಳೆದ 24 ಗಂಟೆಗಳಲ್ಲಿ 29 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ

ದೇಶದಲ್ಲಿ ಕೋರೋನಾ ಸೋಂಕು ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಲೆ ಇದೆ. ಲಾಕ್ ಡೌನ್ ವಿಧಿಸಿ ತಿಂಗಳಾದರೂ ಕೊರೋನಾ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಆತಂಕ ಹೆಚ್ಚುತ್ತಲೇ ಇದೇ. ವಿಶೇಷವಾಗಿ ಆರ್ಥಿಕ ರಾಜಧಾನಿ ಮುಂಬೈಯಿನಲ್ಲಂತೂ ನಿಯಂತ್ರಣಕ್ಕೆ ಬರುತ್ತಿಲ್ಲ. ವಿಶೇಷವಾಗಿ ಧಾರಾವಿಯಲ್ಲಿ ಭಯಹುಟ್ಟಿಸುತ್ತಿದೆ.

 ನಿಯಂತ್ರಣಕ್ಕೆ ಬಾರದ ಕೊರೋನಾಃ ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 1,752 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, 37 ಮಂದಿ ಮೃತಪಟ್ಟಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಶುಕ್ರವಾರ ಸಂಜೆ ತಿಳಿಸಿದೆ.

ಇದರೊಂದಿಗೆ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 23,452ಕ್ಕೆ ಏರಿಕೆಯಾಗಿದೆ. ಈ ಪೈಕಿ 724 ಮಂದಿ ಮೃತಪಟ್ಟಿದ್ದು, 4,813 ಮಂದಿ ಗುಣಮುಖರಾಗಿದ್ದಾರೆ. ವಿವಿಧ ರಾಜ್ಯಗಳಲ್ಲಿ 17,915 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಮಹಾರಾಷ್ಟ್ರದಲ್ಲಿ ಒಟ್ಟು 6,430 ಕೊರೊನಾ ಸೋಂಕು ಪ್ರಕರಣಗಳು ವರದಿಯಾಗಿವೆ. ಸೋಂಕಿನಿಂದ ಈಗಾಗಲೇ 283 ಮಂದಿ ಸಾವಿಗೀಡಾಗಿದ್ದಾರೆ. ದೇಶದಲ್ಲಿ ಅತಿ ಹೆಚ್ಚು ಸೋಂಕು ಪ್ರಕರಣಗಳು ಹಾಗೂ ಸಾವು  ಮಹಾರಾಷ್ಟ್ರದಲ್ಲಿ ದಾಖಲಾಗಿದೆ.

ಗುಜರಾತ್‌ನಲ್ಲಿ ಸೋಂಕು ಪ್ರಕರಣಗಳು 2,624 ಮುಟ್ಟಿದ್ದು, 112 ಮಂದಿ ಮೃತಪಟ್ಟಿದ್ದಾರೆ. ಈ ಮೂಲಕ ಮಹಾರಾಷ್ಟ್ರದ ನಂತರ ಗುಜರಾತ್‌ ಕೊರೊನಾ ಹಾಟ್‌ಸ್ಪಾಟ್‌ ಆಗಿ ಪರಿಣಮಿಸಿದೆ. ದೆಹಲಿಯಲ್ಲಿ ಒಟ್ಟು 2,376 ಪ್ರಕರಣಗಳ ಪೈಕಿ 50 ಮಂದಿ ಮೃತಪಟ್ಟಿದ್ದಾರೆ. ತಮಿಳುನಾಡಿನಲ್ಲಿ 1,683 ಪ್ರಕರಣಗಳು, 20 ಮಂದಿ ಸಾವು; ರಾಜಸ್ಥಾನದಲ್ಲಿ 1,964 ಪ್ರಕರಣಗಳು, 27 ಮಂದಿ ಸಾವಿಗೀಡಾಗಿದ್ದಾರೆ.

ಕರ್ನಾಟಕದಲ್ಲಿ ಒಟ್ಟು 474 ಪ್ರಕರಣಗಳು ದಾಖಲಾಗಿದ್ದು, 18 ಮಂದಿ ಮೃತಪಟ್ಟಿದ್ದಾರೆ. ಮಧ್ಯಪ್ರದೇಶದಲ್ಲಿ 1,852 ಸೋಂಕು ಪ್ರಕರಣಗಳ ಪೈಕಿ 83 ಮಂದಿ ಮೃತಪಟ್ಟಿದ್ದಾರೆ. ಆಂಧ್ರ ಪ್ರದೇಶದಲ್ಲಿ 955 ಪ್ರಕರಣ, 29 ಮಂದಿ ಸಾವು ಹಾಗೂ ತೆಲಂಗಾಣದಲ್ಲಿ 984 ಪ್ರಕರಣಗಳು, 26 ಜನ ಸಾವಿಗೀಡಾಗಿದ್ದಾರೆ. ಉತ್ತರ ಪ್ರದೇಶದಲ್ಲಿ ಸೋಂಕು ಪ್ರಕರಣ 1,604 ತಲುಪಿದ್ದು, 24 ಮಂದಿ ಮೃತಪಟ್ಟಿದ್ದಾರೆ.

ಕರ್ನಾಟಕದಲ್ಲಿ 474 ಕೊರೋನಾ ಪ್ರಕರಣಃ

ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ಏಪ್ರಿಲ್‌ 24ರ ಸಂಜೆ 5 ಗಂಟೆಗೆ ಬಿಡುಗಡೆ ಮಾಡಿರುವ ಪ್ರಕಟಣೆಯಲ್ಲಿ ರಾಜ್ಯದಲ್ಲಿ ಒಟ್ಟು 474 ಕೊರೊನಾ ಪ್ರಕರಣಗಳು ದಾಖಲಾಗಿವೆ.

ಕಳೆದ 24 ಗಂಟೆಗಳಲ್ಲಿ 29 ಹೊಸ ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಿಂದಾಗಿ ರಾಜ್ಯದಲ್ಲಿ ಆತಂಕ ಇನ್ನೂ ಹೆಚ್ಚಾಗಿದೆ.

ಇಲ್ಲಿಯವರೆಗೂ ಕೊರೊನಾ ಸೋಂಕಿನಿಂದ ರಾಜ್ಯದಲ್ಲಿ 18 ಜನರು ಮೃತಪಟ್ಟಿದ್ದು, 152 ಜನ ಕೊರೊನಾ ಸೋಂಕಿನಿಂದ ಬಿಡುಗಡೆಯಾಗಿದ್ದಾರೆ.

ಕೋವಿಡ್-19 ಪೀಡಿತ ಒಟ್ಟು 304 ವ್ಯಕ್ತಿಗಳಲ್ಲಿ, 299 ರೋಗಿಗಳು ಗೊತ್ತುಪಡಿಸಿದ ಆಸ್ಪತ್ರೆಗಳಲ್ಲಿನ ಪ್ರತ್ಯೇಕ ವಾರ್ಡ್‌ಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರ ಆರೋಗ್ಯವು ಸ್ಥಿರವಾಗಿದೆ. ಇನ್ನುಳಿದ ಐದು ಜನರನ್ನು ತೀವ್ರ ನಿಗಾ ಘಟಕದಲ್ಲಿ ಇಡಲಾಗಿದೆ ಎಂದು ಸರ್ಕಾರ ತಿಳಿಸಿದೆ.

ರಾಜ್ಯದಲ್ಲಿ ಪತ್ತೆ ಮಾಡಲಾಗಿರುವ 445 ಪ್ರಕರಣಗಳಲ್ಲಿ 9 ಪ್ರಕರಣಗಳು ಕೇರಳದವರಾಗಿರುತ್ತಾರೆ. ಅವರು ಕರ್ನಾಟಕದ ವಿಮಾನ ನಿಲ್ದಾಣಗಳ ಮೂಲಕ ಕೇರಳಕ್ಕೆ ಪ್ರಯಾಣ ಸುತ್ತಿರುವಾಗ ಪತ್ತೆ ಮಾಡಿ, ಅವರಿಗೆ ಕರ್ನಾಟಕದಲ್ಲೇ ಚಿಕಿತ್ಸೆ ನೀಡಲಾಗುತ್ತಿದೆ.

ದೇಶಾದ್ಯಂತ ಕೊರೋನಾ ಕ್ಷಣ ಕ್ಷಣದ ಮಾಹಿತಿಬೇಕೇ ಇಲ್ಲಿ. ಕ್ಲಿಕ್ ಮಾಡಿಃ https://www.covid19india.org/ ಯಾವ ರಾಜ್ಯದಲ್ಲಿ ಎಷ್ಟು ಪ್ರಕರಣಗಳಿವೆ, ಮೃತಪಟ್ಟವರ ಸಂಖ್ಯೆ ಸೇರಿದಂತೆ ಪ್ರತಿನಿತ್ಯ ಕೊರೋನಾ ಪ್ರಕರಣಗಳು ಇಲ್ಲಿ ನೋಡಬಹುದು.