ರಾಜ್ಯ ಕರಾವಳಿ ಭಾಗದಲ್ಲಿ ನೈರುತ್ಯ ಮುಂಗಾರು ಚುರುಕಾಗಿದ್ದು, ಭಾನುವಾರ (ಮೇ 14,)ಮತ್ತು ಸೋಮವಾರ (ಮೇ 15) ದಂದು ಗುಡುಗು, ಸಿಡಿಲು ಸಹಿತ ಭಾರೀ ಮಳೆ ಸುರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಭಾಗದ ಉತ್ತರ ಕನ್ನಡ,, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಎರಡೂ ದಿನಗಳು ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಕರಾವಳಿಯಲ್ಲಿ ಗಂಟೆಗೆ 45 ರಿಂದ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದ್ದು, ಮೀನುಗಾರರು ಕಡಲಿಗೆ ಇಳಿಯದಂತೆ ಇಲಾಖೆ ಸೂಚಿಸಿದೆ. ಜೂನ್ 15 ರ ನಂತರ ಕರಾವಳಿಯಲ್ಲಿ ಮಳೆಯ ಅಬ್ಬರ ಅಲ್ಪ ಕಡಿಮೆಯಾಗಲಿದೆ ಉತ್ತರ ಒಳನಾಡು, ಹಾಗೂ ದಕ್ಷಿಣ ಒಳನಾಡಿನ ಹಲವೆಡೆ ಸಾಧಾರಣ ಮಳೆಯಾಗಲಿದೆ.
ಕರಾವಳಿ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಶನಿವಾರ ಉತ್ತಮ ಮಳೆಯಾಗಿದೆ. ಹೇಮಾವತಿ ಉಪನದಿಗಳಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದೆ. ಕೆಲ ಜಿಲ್ಲೆಗಳಲ್ಲಿ ಹಳ್ಳ–ಕೊಳ್ಳಗಳು ತುಂಬಿ ಹರಿಯುತ್ತಿವೆ.
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಗರ್ವಾಲೆ ಎಂಬಲ್ಲಿ ಶುಕ್ರವಾರ ಸಂಜೆ ಮರದ ಕೊಂಬೆ ಬಿದ್ದು, ಮಾದಾಪುರ ಗ್ರಾಮದ ಕಾರ್ಮಿಕ ಮಹಿಳೆ ಪಾರ್ವತಿ (48) ಮೃತಪಟ್ಟಿದ್ದಾರೆ.
ಬೆಳಗಾವಿ ಜಿಲ್ಲೆಯ ಖಾನಾಪುರ, ಮೂಡಿಗೆರೆಯಲ್ಲಿ ಧಾರಾಕಾರ ಮಳೆ ಸುರಿದಿದೆ. ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಮಳೆ ತಗ್ಗಿದರೆ, ಘಟ್ಟ ಪ್ರದೇಶದಲ್ಲಿ ಮಳೆಯ ಅಬ್ಬರ ಶನಿವಾರ ಜೋರಾಗಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿ ಮಳೆ ಬಿದ್ದಿದೆ. ಹೊಸನಗರ ತಾಲ್ಲೂಕಿನ ಹುಲಿಕಲ್ ಘಾಟ್ ರಸ್ತೆಯಲ್ಲಿ ಬೆಳಿಗ್ಗೆ ಮರ ಬಿದ್ದ ಪರಿಣಾಮ ಶಿವಮೊಗ್ಗ ಮತ್ತು ಉಡುಪಿ ಜಿಲ್ಲೆ ಸಂಪರ್ಕ ಮಾರ್ಗದಲ್ಲಿ 2 ಗಂಟೆಗೂ ಹೆಚ್ಚು ಕಾಲ ಸಂಚಾರ ಸ್ಥಗಿತವಾಗಿತ್ತು. ದಕ್ಷಿಣ ಕೊಡಗು, ಮೈಸೂರು ನಗರ ಹಾಗೂ ಜಿಲ್ಲೆ, ಹಾಸನ, ಸಕಲೇಶಪುರ, ದಾವಣಗೆರೆ, ಧಾರವಾಡ, ಉತ್ತರ ಕನ್ನಡ, ಬೆಳಗಾವಿ ಹಾಗೂ ಬಾಗಲ ಕೋಟೆ ಜಿಲ್ಲೆಯಲ್ಲಿಯೂ ಉತ್ತಮ ಮಳೆ ಸುರಿಯಿತು. ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ರಾಯಚೂರು, ಬಳ್ಳಾರಿ, ಯಾದಗಿರಿ ಜಿಲ್ಲೆಗಳಲ್ಲಿ ಅಲ್ಲಲ್ಲಿ ಸಾಧಾರಣ ಮಳೆಯಾಗಿದೆ. ಭಾನುವಾರ ಮತ್ತು ಸೋಮವಾರ ಮಳೆಯಾಗುವ ಸಾಧ್ಯತೆಯಿದೆ.