News

ಕರಾವಳಿ ಜಿಲ್ಲೆಗಳಲ್ಲಿ ಮೂರು ದಿನ ಭಾರಿ ಮಳೆ ಸಾಧ್ಯತೆ-ರೆಡ್ ಅಲರ್ಟ್

22 September, 2020 8:24 AM IST By:

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತ ಹಾಗೂ ಮೇಲ್ಮೈ ಸುಳಿಗಾಳಿ ತೀವ್ರತೆ ಹೆಚ್ಚಾಗಿರುವುದರಿಂದ ರಾಜ್ಯದಲ್ಲಿ ಮುಂಗಾರು ಬಿರುಸುಗೊಂಡಿದ್ದು, ಕರಾವಳಿ ಹಾಗೂ ಒಳನಾಡಿನ ಜಿಲ್ಲೆಗಳಲ್ಲಿ ಸೆ.22ರಿಂದ 24ರವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 3 ದಿನಗಳಿಂದ ಹೆಚ್ಚು ಮಳೆಯಾಗುತ್ತಿದ್ದು, ಸೆ.22ರವರೆಗೆ ‘ರೆಡ್ ಅಲರ್ಟ್’ ಮುಂದುವರಿಸಲಾಗಿದೆ. ಸೆಪ್ಟೆಂಬರ್ 23 ಕ್ಕೆ ಆರೇಂಜ್ ಅಲರ್ಟ್, ಸೆ. 24 ಕ್ಕೆ ಯೆಲ್ಲೋ ಅಲರ್ಟೋ ಘೋಷಿಸಲಾಗಿದೆ. ಈ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನ 115 ಮಿ.ಮೀ ನಿಂದ 204 ಮಿ.ಮೀ ವರೆಗೆ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿಯಲ್ಲಿ ಗರಿಷ್ಠ 4 ಮೀಟರ್‌ಗಳಷ್ಟು ಎತ್ತರ ಅಲೆಗಳು ಏಳುತ್ತಿದ್ದು, ಗಂಟೆಗೆ 55 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದ ರಿಂದ ಮೀನುಗಾರರು ಮಂಗಳ ವಾರ (ಸೆ.22) ಸಮುದ್ರಕ್ಕೆ ಇಳಿ ಯಬಾರದು ಎಂದು ಇಲಾಖೆ ಎಚ್ಚರಿಸಿದೆ.

ಶಿವಮೊಗ್ಗ, ಹಾಸನ, ಕೊಡಗು, ಚಿಕ್ಕಮಗಳೂರು, ಯಾದಗಿರಿ, ರಾಯಚೂರು, ಕಲಬುರಗಿ, ಹಾವೇರಿ, ಧಾರವಾಡ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗುವ ನಿರೀಕ್ಷೆ ಇರುವುದರಿಂದ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.

ಮಳೆ-ಎಲ್ಲಿ, ಎಷ್ಟು?: ಬ್ರಹ್ಮಾವರದಲ್ಲಿ ಅತೀ ಹೆಚ್ಚು ಮಳೆ39 ಸೆಂ.ಮೀ, ಕಾರ್ಕಳದಲ್ಲಿ 28 ಸೆಂ. ಮೀ, ಮೂಲ್ಕಿ ಉಡುಪಿಯಲ್ಲಿ ತಲಾ 27 ಸೆಂ.ಮೀಟರ, ಮಂಗಳೂರು ವಿಮಾನ ನಿಲ್ದಾಣ ಹಾಗೂ ಆಗುಂಬೆಯಲ್ಲಿ 22 ಸೆಂ.ಮೀ. ಮಳೆಯಾಗಿದೆ. ಕೊಲ್ಲೂರು 24 14, ಹೊನ್ನಾವರ 12, ತೀರ್ಥಹಳ್ಳಿ 10, ಮೂಡು ಬಿದಿರೆ, ಕುಂದಾಪುರ 9, ಕೊಪ್ಪ 8, ಪುತ್ತೂರು, ಉಡುಪಿ, ಬೀದರ್, ಮೂಡಿಗೆರೆ 7, ಕಾರವಾರ, ವಿರಾಜಪೇಟೆ 6, ಉಪ್ಪಿನಂಗಡಿ, ನರಗುಂದ, ಮುದ್ದೇಬಿಹಾಳ, ಸಕಲೇಶಪುರದಲ್ಲಿ 5 ಸೆಂ.ಮೀ. ಮಳೆಯಾಗಿದೆ.

ಕೇರಳ: 10 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’

ಕೇರಳ ರಾಜ್ಯದ 10 ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’‌ ಘೋಷಿಸಲಾಗಿದೆ. ಕೊಟ್ಟಾಯಂ, ಎರ್ನಾಕುಳಂ, ಇಡುಕ್ಕಿ, ತ್ರಿಶೂರ್, ಪಾಲಕ್ಯಾಡ್, ಮಲಪುರಂ, ಕಲ್ಲಿಕೋಟೆ, ವಯನಾಡ್, ಕಣ್ಣೂರ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಆರೇಜಂ ಅಲರ್ಟ್ ಘೋಷಿಸಲಾಗಿದೆ.

ಕಾಸರಗೋಡು ಜಿಲ್ಲೆಯಲ್ಲಿ ಸುರಿದ ಭಾರಿ ಮಳೆಗೆ 8 ಮನೆಗಳು ನೆಲಕಚ್ಚಿವೆ. ತಿರುವನಂತಪುರದಲ್ಲಿ ಮಳೆ ಸಂಬಂಧಿ ಘಟನೆಯಲ್ಲಿ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಮಳೆಯಿಂದ ಉರುಳಿಬಿದ್ದಿದ್ದ ವಿದ್ಯುತ್ ಕಂಬದಲ್ಲಿನ ತಂತಿಯನ್ನು ಮುಟ್ಟಿ, ವಿದ್ಯುದಾಘಾತದಿಂದ ವ್ಯಕ್ತಿ ಮೃತಪಟ್ಟಿದ್ದಾರೆ ಎಂದು ರಾಜ್ಯ ವಿಪತ್ತು ನಿರ್ವಹಣಾ ಪಡೆ ಮಾಹಿತಿ ನೀಡಿದೆ.

ರಾಜ್ಯದ ಕುಂಡಳ, ಕಲ್ಲಾರ್‌ಕುಟ್ಟಿ, ಮಲಂಗರ ಮತ್ತು ಪೊನ್ಮುಡಿ ಜಲಾಶಯ ಗಳಿಗೆ ಒಳಹರಿವು ಹೆಚ್ಚಾಗಿದ್ದು, ಜಲಾಶಯಗಳು ಭರ್ತಿಯಾಗುತ್ತಿವೆ. ಹೀಗಾಗಿ ಈ ಜಲಾಶಯಗಳಿಂದ ನೀರನ್ನು ಹೊರಗೆ ಬಿಡಲಾಗತ್ತಿದೆ.

ಮಧ್ಯಪ್ರದೇಶದಲ್ಲೂ ಭಾರಿ ಮಳೆ ಸಾಧ್ಯತೆ-ಯೆಲ್ಲೋ ಅಲರ್ಟ್

ಮಧ್ಯಪ್ರದೇಶದ ರಾಜ್ಯದ ವಿವಿಧ ರಾಜ್ಯಗಳಲ್ಲಿ ಭಾರಿ ಮಳೆ ಮುನ್ಸೂಚನೆ ನೀಡಲಾಗಿದ್ದು, ಸಿಯಾನಿ, ಮಾಂಡ್ಲಾ, ಬಾಲಾಘಾಟ್, ದಿನದೋರಿ ಜಿಲ್ಲೆಗಳಲ್ಲಿ ಆರೇಂಜ್ ಅಲರ್ಟ್. ಜಬಲ್ಪುರ ಸೇರಿದಂತೆ ಇತರ ಏಳು ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.