News

ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಮಳೆಯಬ್ಬರ

06 August, 2020 10:05 AM IST By:

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಕೊಂಕಣ ಪ್ರದೇಶದಲ್ಲಿ ಬುಧವಾರ ಭರ್ಜರಿ ಮಳೆ (Heavy rain) ಸುರಿದಿದ್ದು,  ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಮತ್ತೊಂದು ಪ್ರವಾಹ ಆತಂಕ ಸೃಷ್ಟಿಸಿದೆ.

ಕಳೆದೆರಡು ದಿನಗಳಿಂದ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಶಿವಮೊಗ್ಗ, ಧಾರವಾಡ, ಬೆಳಗಾವಿ, ಕೊಡಗು ಜಿಲ್ಲೆಗಳ ನದಿಗಳಲ್ಲಿ ಪ್ರವಾಹ ಬಂದಿದೆ. ಏಕಾಏಕಿ ಚುರುಕು ಪಡೆದುಕೊಂಡಿರುವ ಮಳೆರಾಯ ರಾಜ್ಯದ ಅಲ್ಲಲ್ಲಿಅನಾಹುತಗಳನ್ನು ಸೃಷ್ಟಿಸಿದ್ದಾನೆ. ಮೈಸೂರಿನ ಎಚ್‌.ಡಿ. ಕೋಟೆಯಲ್ಲಿ ಮರವೊಂದು ಉರುಳಿ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದರೆ, ಚಿಕ್ಕಮಗಳೂರಿನ ಕಡೂರು ತಾಲೂಕಿನ ಜಕ್ಕನಹಳ್ಳಿಯಲ್ಲಿ ವಿದ್ಯುತ್‌ ತಂತಿ ತುಳಿದು ಕೃಷಿಕರೊಬ್ಬರು ಪ್ರಾಣ ಬಿಟ್ಟಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನಲ್ಲಿ ಹಳ್ಳದ ನೀರಿನ ಸೆಳೆತಕ್ಕೆ ಬೈಕ್‌ ಸಮೇತ ವ್ಯಕ್ತಿಯೊಬ್ಬರು ಕೊಚ್ಚಿ ಹೋಗಿದ್ದು, ಹುಡುಕಾಟ ಮುಂದುವರಿದಿದೆ.

ನೂರಾರು ಎಕರೆ ಜಮೀನಿಗೆ ಮಳೆ ನೀರು ನುಗ್ಗಿ ಲಕ್ಷಾಂತರ ರೂಪಾಯಿ ಬೆಳೆಹಾನಿ (Crop damage) ಯಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಗಾಳಿಸಹಿತ ಮಳೆಯಾರ್ಭಟಕ್ಕೆ ಹಲವೆಡೆ ನೂರಾರು ಮರ, ವಿದ್ಯುತ್ ಕಂಬಗಳು ಉರುಳಿ ಬಿದ್ದು ಭಾರಿ ಹಾನಿಯಾಗಿದೆ. ತುಂಗಾ, ಭದ್ರಾ ಹಾಗೂ ಹೇಮಾವತಿ ನದಿಗಳು ತುಂಬಿ ಹರಿಯುತ್ತಿರುವುದರಿಂದ ತಗ್ಗು ಪ್ರದೇಶಗಳು ಜಲಾವೃತವಾಗಿವೆ.ಭದ್ರಾ ನದಿಗೆ ಅಡ್ಡಲಾಗಿ ಕಟ್ಟಿರುವ ಸೇತುವೆ ಮುಳುಗಡೆಯಾಗಿದ್ದು, ಕಳಸ-ಹೊರನಾಡು ಸಂಪರ್ಕ ಕಡಿತಗೊಂಡಿದೆ.

ಮಂಗಳೂರು, ಕೊಡಗು, ಚಿಕ್ಕಮಗಳೂರು, ಸಕಲೇಶಪುರ, ಕುಂದಾಪುರ ಹಾಗೂ ಬೆಳಗಾವಿ ಹಾಗೂ ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ಹೆಚ್ಚು ಮಳೆ ಸುರಿದಿದೆ. ಇದರಿಂದಾಗಿ ರಾಜ್ಯದ ಪ್ರಮುಖ ನದಿಗಳು ತುಂಬಿ ಹರಿಯತೊಡಗಿದ್ದು, ಹಳ್ಳ, ಕೊಳ್ಳಗಳೂ ಭರ್ತಿಯಾಗಿವೆ. ಕೆಲವೆಡೆ ಸೇತುವೆಗಳ ಮೇಲೆ ನೀರು ಹರಿದ ಕಾರಣ ರಸ್ತೆ ಸಂಪರ್ಕ ಬಂದ್‌ ಆಗಿವೆ. ಘಾಟಿ ಪ್ರದೇಶದಲ್ಲಿ ರಸ್ತೆ ಮೇಲೆ ಮರಗಳು ಉರುಳಿ ಬಿದ್ದಿದ್ದರಿಂದ ಕಿಲೋಮೀಟರ್‌ ವಾಹನಗಳ ದಟ್ಟಣೆ ಉಂಟಾಯಿತು. ವಾಹನಗಳ ಒಳಗೆ ಸಿಲುಕಿಕೊಂಡ ಪ್ರಯಾಣಿಕರು ಪರದಾಡಿದರು.

ದ.ಕ. ಜಿಲ್ಲೆಯ ಲ್ಲಿಬುಧವಾರ ಸರಾಸರಿ ಜಿಲ್ಲೆಯಲ್ಲಿ ಸರಾಸರಿ 88.3 ಮಿಮೀ ಮಳೆಯಾಗಿದೆ. ಹವಾಮಾನ ಇಲಾಖೆ ಗುರುವಾರ ರೆಡ್‌ ಅಲರ್ಟ್‌ ಘೋಷಣೆ ಮಾಡಿದೆ. ಹಾಸನ ಜಿಲ್ಲೆಯ ಸಕಲೇಶಪುರ ವ್ಯಾಪ್ತಿಯಲ್ಲೂ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ. 40ಕ್ಕೂ ಹೆಚ್ಚು ಮನೆಗಳು ಭಾಗಶಃ ಕುಸಿತಗೊಂಡಿವೆ. 180ಕ್ಕೂ ಹೆಚ್ಚು ವಿದ್ಯುತ್‌ ಕಂಬಗಳಿಗೆ ಹಾನಿಯಾಗಿದೆ. ನೂರಾರು ಎಕರೆ ಕೃಷಿ ಭೂಮಿ ಜಲಾವೃತಗೊಂಡಿದೆ. ಕೊಡಗಿನಲ್ಲಿ ಗುರುವಾರ ಹೈ ಅಲರ್ಟ್‌ ಘೋಷಿಸಲಾಗಿದೆ.

ರಾಜ್ಯದ ಬಹುತೇಕ ನದಿಗಳ ನೀರು ಹರಿವಿನ ಪ್ರಮಾಣ ಹೆಚ್ಚಳವಾಗಿದ್ದು, ಜಲಾಶಗಳಲ್ಲಿ ಜಲಮಟ್ಟ ಏರಿಕೆಯಾಗುತ್ತಿವೆ. ಕಬಿನಿ ಹಾಗೂ ಯಗಚಿ ಜಲಾಶಯಗಳು ತುಂಬಿರುವ ಕಾರಣ ನೀರು ಹೊರಕ್ಕೆ ಹರಿಯಬಿಡಲಾಗಿದೆ. ಕೊಡಗಿನ ಭಾಗಮಂಡಲದಲ್ಲಿ ಜಲಪ್ರಳಯ ಸೃಷ್ಟಿಯಾಗಿ ದ್ವೀಪದಂತೆ ಗೋಚರಿಸುತ್ತಿದೆ. ಈ ನಡುವೆ ಮಳೆ ಹಾನಿ ತುರ್ತು ಸಂದರ್ಭದಲ್ಲಿಬಳಸಲು 50 ಕೋಟಿ ರೂ. ಬಿಡುಗಡೆ ಮಾಡಲು ರಾಜ್ಯ ಸರಕಾರ ನಿರ್ಧರಿಸಿದೆ.