News

ವರುಣನ ಆರ್ಭಟಕ್ಕೆ ತೆಲಂಗಾಣ ತತ್ತರ, ಕಂಗೆಟ್ಟ ಕಲ್ಯಾಣ ಕರ್ನಾಟಕ, ಮುಂಬೈ ಮೇಲೆ ಮುನಿಸಿಕೊಂಡಿತು ಮಳೆ

16 October, 2020 10:19 AM IST By:

ರೌದ್ರಾವತಾರ ಎತ್ತಿರುವ ವರುಣ ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶದ ನಂತರ ಮಹಾರಾಷ್ಟ್ರದಲ್ಲೂ ಮರಣ ಮೃದಂಗ ಬಾರಿಸಿದ್ದಾನೆ. ತೆಲಂಗಾಣ ಮತ್ತು ಮಹಾರಾಷ್ಟ್ರಗಳಲ್ಲಿ ಎರಡು ದಿನಗಳ ಅವಧಿಯಲ್ಲಿ ಮಳೆ ಸಂಬಂಧಿ ಅನಾಹುತಗಳಲ್ಲಿ 77 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ತೆಲಂಗಾಣದಲ್ಲಿ 50 ಹಾಗೂ ಮಹಾರಾಷ್ಟ್ರದಲ್ಲಿ 27 ಜನ ಮೃತಪಟ್ಟಿದ್ದಾರೆ. ಕರ್ನಾಟಕದಲ್ಲಿ 7 ಜನ ಪ್ರಾಣ ಕಳೆದುಕೊಂಡಿದ್ದಾರೆ.

ಪಶ್ಚಿಮ ಮಹಾರಾಷ್ಟ್ರದ ಸೊಲ್ಲಾಪುರ, ಸಾಂಗ್ಲಿ ಮತ್ತು ಪುಣೆ ಜಿಲ್ಲೆಗಳಲ್ಲಿ ಸಾಕಷ್ಟು ಸಾವು-ನೋವು ಸಂಭವಿಸಿದೆ. ಸೊಲ್ಲಾ ಪುರವೊಂದರಲ್ಲೇ 14 ಮಂದಿ ಪ್ರಾಣಬಿಟ್ಟಿದ್ದಾರೆ.  ಉಜಾನಿ ಅಣೆಕಟ್ಟೆಯ ನೀರನ್ನು ನೈರಾ ಮತ್ತು ಭೀಮಾ ನದಿಗಳಿಗೆ ಬಿಟ್ಟ ಪರಿಣಾಮ ನದಿ ಪಾತ್ರದಲ್ಲಿ ಭಾರೀ ಪ್ರವಾಹ ಸೃಷ್ಟಿಯಾಗಿದೆ. ಡ್ಯಾಂನಿಂದ 2.3 ಲಕ್ಷ ಕ್ಯುಸೆಕ್‌ ನೀರು ಬಿಡಲಾಗಿದ್ದು, ಭೀಮಾ ತೀರದ ಜನತೆಗೆ ಜಾಗ್ರತೆ ವಹಿಸಲು ಸೂಚಿಸಲಾಗಿದೆ.

ಉತ್ತರ ಕರ್ನಾಟಕದಲ್ಲಿ ಕೃಷ್ಣಾ, ಭೀಮಾ, ಮಲಪ್ರಭಾ, ಕಾಗಿಣಾ, ಡೋಣಿ, ತುಂಗಾ, ಭದ್ರಾ, ಹೇಮಾವತಿ ಸಹಿತ ಪ್ರಮುಖ ನದಿಗಳು ಎಡೆಬಿಡದೆ ಸುರಿಯುತ್ತಿರುವ ಮಳೆಗೆ ಮತ್ತೆ ಉಕ್ಕಿ ಹರಿಯುತ್ತಿವೆ. ನೂರಾರು ಮನೆಗಳು ಧರೆಗುರುಳಿದ್ದು, ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಸೇತುವೆಗಳು ಮುಳುಗಿದ್ದರಿಂದ ಹಲವೆಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ಬಳಿ ಕೊಡದಮನೆಯ ಹೊಳೆಗೆ ಕಾರು ಉರುಳಿ ಬಿದ್ದು ನಾಲ್ವರ ಸಹಿತ ಒಟ್ಟು ಏಳು ಮಂದಿ ಮೃತಪಟ್ಟಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಮಳೆ ತಗ್ಗಿದ್ದರೂ ಮಹಾರಾಷ್ಟ್ರದ ಮಳೆಗೆ ಹೈರಾಣಾಗಿದೆ. ಉಜಿನಿ ಮತ್ತು ವೀರ್‌ ಜಲಾಶಯದಿಂದ ಭೀಮಾ ನದಿಗೆ 7.50 ಲಕ್ಷ ಕ್ಯುಸೆಕ್‌ ನೀರು ಹರಿದು ಬರುತ್ತಿದ್ದು, ತೀರ ಪ್ರದೇಶದ 148 ಗ್ರಾಮಗಳಿಗೆ ಪ್ರವಾಹ ಭೀತಿ ಎದುರಾಗಿದೆ.

ಸೊಲ್ಲಾಪುರ ಜಿಲ್ಲೆಯಲ್ಲಿ ಭೀಮಾ ನದಿ ಉಕ್ಕಿ ಹರಿಯುತ್ತಿರುವ ಕಾರಣ ಹಲವು ಗ್ರಾಮಗಳು ಜಲಾವೃತವಾಗಿವೆ. ಪಂಡರಾಪುರದಲ್ಲಿ ಹಲವು ದೇವಾಲಯಗಳು ಜಲಾವೃತವಾಗಿವೆ. ಜಿಲ್ಲೆಯಲ್ಲಿ 8,000ಕ್ಕೂ ಹೆಚ್ಚು ಜನರನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರ ಮಾಡಲಾಗಿದೆ. ಕೊಲ್ಲಾಪುರ ಜಿಲ್ಲೆಯ ಹಲವು ಗ್ರಾಮಗಳೂ ಜಲಾವೃತವಾಗಿವೆ.

ಕಲಬುರಗಿ ಜಿಲ್ಲೆಯಲ್ಲಿ 8 ಸಾವಿರಕ್ಕೂ ಅಧಿಕ ಜನ ಅತಂತ್ರರಾಗಿದ್ದಾರೆ. ನೂರಾರು ಜನರನ್ನು ಸ್ಥಳಾಂತರಿಸಲಾಗಿದೆ. ಜಿಲ್ಲಾದ್ಯಂತ 50 ಕಾಳಜಿ ಕೇಂದ್ರ ತೆರೆಯಲಾಗಿದೆ.

ಬೀದರ್‌ನಲ್ಲಿ ಕಾರಂಜಾ ಜಲಾಶಯ 5 ವರ್ಷಗಳ ಬಳಿಕ ಭರ್ತಿ ಯಾಗಿದೆ. ನಾರಾಯಣಪುರ ಜಲಾಶಯದಿಂದ 1.61 ಲಕ್ಷ ಕ್ಯುಸೆಕ್‌ ನೀರನ್ನು ಹೊರ ಹರಿಸಲಾಗುತ್ತಿದೆ. ರಾಯಚೂರು ಜಿಲ್ಲೆಯ ಲಿಂಗಸುಗೂರು ತಾಲೂಕಿನ ಶೀಲಹಳ್ಳಿ ಸೇತುವೆ ಮುಳುಗಡೆಯಾಗಿದೆ. ಬೆಳಗಾವಿಯ ಕೃಷ್ಣಾ, ದೂಧ್‌ಗಂಗಾ, ವೇದ್‌ಗಂಗಾ ನದಿ ನೀರಿನ ಮಟ್ಟ ಹೆಚ್ಚಳವಾಗಿದೆ. ಕಲ್ಲೋಳ- ಯಡೂರ, ಮಲಿಕವಾಡ- ದತ್ತವಾಡ ಸೇತುವೆ ಮುಳುಗಡೆಯಾಗಿವೆ.