News

ಭಾರಿ ಮಳೆ ಸಂಭವ: ಜಿಲ್ಲೆಯಲ್ಲಿ ಜು.15ರ ವರೆಗೆ ಹೈ ಅಲರ್ಟ್ ಘೋಷಣೆ

08 July, 2021 8:48 PM IST By:
rain

ಕಲಬುರಗಿ ಜಿಲ್ಲೆಯಲ್ಲಿ ಭಾರೀ ಮಳೆ ಉಂಟಾಗುವ ಸಂಭವ ಹಿನ್ನೆಲೆಯಲ್ಲಿ ಜುಲೈ 8 ರಿಂದ 15 ರವರೆಗೆ ಜಿಲ್ಲಾಧಿಕಾರಿಗಳಾದ ವಿ.ವಿ. ಜೋತ್ಸ್ನಾರವರು ಜಿಲ್ಲೆಯಾದ್ಯಂತ ಹೈ ಅಲರ್ಟ್ ಘೋಷಿಸಿದ್ದಾರೆ.

ಗುರುವಾರ ಇಲ್ಲಿನ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಪ್ರವಾಹ ಪರಿಸ್ಥಿತಿ ಕುರಿತು ಮುನ್ನೆಚರಿಕೆ ಕ್ರಮವಾಗಿ ಜಿಲ್ಲಾಮಟ್ಟದ ವಿವಿಧ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಅವರು ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಮಳೆ ಸುರಿಯುತ್ತಿದ್ದು, ಗ್ರಾಮೀಣ ಭಾಗದ ನದಿಪಾತ್ರದ ಹಳ್ಳಿಗಳಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗುವ ಸಾಧ್ಯತೆ ಇರುವುದರಿಂದ ಹಳ್ಳಿಗಳಲ್ಲಿ ಟಾಸ್ಕ್ ಫೋರ್ಸ್ ತಂಡಗಳನ್ನು ರಚಿಸಬೇಕು.  ಎಲ್ಲಾ ತಾಲೂಕಾ ಮಟ್ಟದ ಅಧಿಕಾರಿಗಳು ಕೇಂದ್ರ ಸ್ಥಾನ ಬಿಟ್ಟುಹೋಗದೆ ಸ್ಥಳದಲ್ಲಿಯೇ ಇದ್ದು ಪರಿಸ್ಥಿತಿಯನ್ನು ಎದುರಿಸಬೇಕು ಎಂದು ಅವರು ಸೂಚಿಸಿದರು.

ಪ್ರವಾಹಕ್ಕೀಡಾಗುವ ಗ್ರಾಮಗಳಲ್ಲಿ ಕಾಳಜಿ ಕೇಂದ್ರಗಳನ್ನು ಆರಂಭಿಸಬೇಕು. ಕಾಳಜಿ ಕೇಂದ್ರದಲ್ಲಿ ಸರಿಯಾದ ಪ್ರಮಾಣದಲ್ಲಿ ಊಟ, ವಸತಿ, ವಿದ್ಯುತ್, ನೀರಿನ ಸೌಲಭ್ಯ ಒದಗಿಸಬೇಕು. ಮಕ್ಕಳಿಗೆ ಹಾಲು ಹಾಗೂ ಬಿಸ್ಕೆಟ್ ನೀಡಬೇಕು. ಹಾಲು ಪೂರೈಕೆಯಲ್ಲಿ ವಿಳಂಬವಾದರೆ ಹಾಲಿನ ಪೌಡರ್ ವ್ಯವಸ್ಥೆ ಸಹ ಮಾಡಿಕೊಳ್ಳಬೇಕು ಎಂದ ಅವರು ಜಿಲ್ಲೆಯಲ್ಲಿರುವ ಎಲ್ಲಾ ಗರ್ಭಿಣಿ ಸ್ತ್ರೀಯರ ಪಟ್ಟಿಯನ್ನು ಅಂಗನವಾಡಿ ಕಾರ್ಯಕರ್ತರಿಂದ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಇದಲ್ಲದೆ ಕೋವಿಡ್ ಮುಂಜಾಗ್ರತಾ ಕ್ರಮವಾಗಿ ಕಾಳಜಿ ಕೇಂದ್ರಗದಲ್ಲಿ ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು, ಮಾಸ್ಕ್ ಹಾಗೂ ಸ್ಯಾನಿಟೈಸರ್ ಬಳಕೆ ಕಡ್ಡಾಯವಾಗಬೇಕು. ಗ್ರಾಮಗಳಲ್ಲಿರುವ ಸಣ್ಣ-ಪುಟ್ಟ ನಾಲೆಗಳ ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿದು ಹೋಗಲು ಸೂಕ್ತ ವ್ಯವಸ್ಥೆ ಮಾಡಬೇಕು. ಬ್ಯಾರೇಜ್‌ಗಳ ಎಲ್ಲಾ ಗೇಟ್ ಗಳು ಸೂಕ್ತವಾಗಿ ಕಾರ್ಯ ನಿರ್ವಹಿಸುತ್ತಿವೆಯೇ ಎಂಬ ಮಾಹಿತಿ ಅರಿಯಬೇಕು. ಪ್ರತಿ ತಾಲೂಕಿನಲ್ಲಿಯೂ ಒಂದೊಂದು ಜೆಸಿಬಿ ವಾಹನವನ್ನು ಸನ್ನದ್ಧ್ದವಾಗಿರಿಸಿರಬೇಕು. ಒಂದು ವೇಳೆ ಪ್ರವಾಹ ಪರಿಸ್ಥಿತಿ ಉಂಟಾದರೆ ಹಳ್ಳಿಗಳಲ್ಲಿ ಕುಡಿಯುವ ನೀರಿನ ಟ್ಯಾಂಕರ್, ವಿದ್ಯುತ್ ಸೇರಿದಂತೆ ಅತ್ಯಾವಶ್ಯಕ ಸೌಕರ್ಯಗಳನ್ನು ತಕ್ಷಣಕ್ಕೆ ಕಲ್ಪಿಸುವಂತಾಗಬೇಕು ಎಂದು ಅವರು ಸಲಹೆ ನೀಡಿದರು.

ತಾಲ್ಲೂಕು ಆಸ್ಪತ್ರೆಗಳಲ್ಲಿ ವಿದ್ಯುತ್ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು. ಜನರೇಟರಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿವೇ ಎಂದು ಪರೀಕ್ಷಿಸಿ, ಜನರೇಟರಗೆ ಅಗತ್ಯವಿರುವಷ್ಟು ಇಂಧನ ವ್ಯವಸ್ಥೆ ಮಾಡಬೇಕು. ಹಾಗೆಯೇ ಪ್ರಥಮ ಚಿಕೆತ್ಸೆಯ ವ್ಯವಸ್ಥೆ ಮಾಡಬೇಕು ಎಂದು ಡಿ.ಹೆಚ್.ಓ ಅವರಿಗೆ ತಿಳಿಸಿದರು.

ತಾಲ್ಲೂಕು ಮಟ್ಟ ಹಾಗೂ ಪ್ರತಿಹಳ್ಳಿ ಮಟ್ಟದಲ್ಲಿ ನೋಡಲ್ ಅಧಿಕಾರಿಗಳನ್ನು ನೇಮಕ ಮಾಡಬೇಕು. ಸಹಾಯಕ ಆಯುಕ್ತರು ಹಾಗೂ ತಹಸೀಲ್ದಾರಗಳೊಂದಿಗೆ ಈ ನೋಡಲ್ ಅಧಿಕಾರಿಗಳು ನಿರಂತರ ಸಂಪರ್ಕದಲ್ಲಿರಬೇಕು. ಸಹಾಯಕ ಆಯುಕ್ತರು , ತಹಸೀಲ್ದಾರರು ಸೇರಿ ಜೆಸ್ಕಾಂ, ಪೊಲೀಸ್, ಅಗ್ನಿಶಾಮಕ ಇಲಾಖೆ ಮುಂತಾದ ಇಲಾಖೆಗಳು ಪರಿಸ್ಥಿತಿಗೆ ಅನುಗುಣವಾಗಿ ಶ್ರಮವಹಿಸಿ ಕಾರ್ಯನಿರ್ವಹಿಸಬೇಕು ಎಂದು ಅವರು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಮಹಾನಗರ ಪಾಲಿಕೆ ಆಯುಕ್ತ ಸ್ನೇಹಲ್ ಸುಧಾಕರ್ ಲೋಖಂಡೆ, ಅಪರ ಜಿಲ್ಲಾಧಿಕಾರಿ ಡಾ. ಶಂಕರ ವಣಿಕ್ಯಾಳ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಸನ್ನ ದೇಸಾಯಿ, ಸಹಾಯಕ ಆಯುಕ್ತರುಗಳಾದ ರಾಮಚಂದ್ರ ಗಡಾದೆ, ರಮೇಶ್ ಕೋಲ್ಹಾರ ಹಾಗೂ ಎಲ್ಲಾ ತಾಲೂಕಗಳ ತಹಸೀಲ್ದಾರರು, ಇಓಗಳು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.