News

ಇಂದಿನಿಂದ ಎರಡು ದಿನ ಗುಡುಗು ಸಿಡಿಲು ಸಹಿತ ಭಾರಿ ಮಳೆ ಸಾಧ್ಯತೆ

12 October, 2020 8:57 AM IST By:

ರಾಜ್ಯದಲ್ಲಿ ಈಗಾಗಲೇ ಕಳೆದೆರಡು ದಿನಗಳಿಂದ ವಿವಿಧೆಡೆ ಭಾರಿ ಮಳೆಯಾಗಿ ಅವಾಂತರ ಸೃಷ್ಟಿಮಾಡಿದೆ. ಇನ್ನೆರಡು ದಿನಗಳ ಕಾಲ ಮತ್ತೆ ಭಾರಿ ಮಳೆಯಾಗುವ ಕುರಿತು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದ ಕರಾವಳಿ ಭಾಗದಲ್ಲಿ ಅ.12, 13 ರಂದು ಗುಡುಗು, ಸಿಡಿಲು ಸಹಿತ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇರುವುದರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ‘ರೆಡ್ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಂಗಾಳಕೊಲ್ಲಿಯಲ್ಲಿ  ಮೈಲ್ಮೈ ಸುಳಿಗಾಳಿ ಎದ್ದಿರುವುದರಿಂದ ಮುಂದಿನ 24 ಗಂಟೆಗಳಲ್ಲಿ ಚಂಡಮಾರುತವಾಗಿ ಪರಿವರ್ತನೆಯಾಗಲಿದೆ. ಇದರಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಕಂಡಿರುವುದರಿಂದ ರಾಜ್ಯದ ಕರಾವಳಿ ಹಾಗೂ ಒಳನಾಡಿನಲ್ಲಿ ಮಳೆಯಾಗುವ  ಸಾಧ್ಯತೆ ಇದೆ. ಮಾರುತಗಳು ಆಂಧ್ರಪ್ರದೇಶದತ್ತ ಸಾಗುತ್ತಿದ್ದು, ಆ ಭಾಗದಲ್ಲಿಯೂ ಹೆಚ್ಚು ಮಳೆಯಾಗಲಿದೆ.

ಯಾದಗಿರಿ, ಶಿವಮೊಗ್ಗ, ಕೊಡಗು, ಹಾಸನ, ಬೆಳಗಾವಿ, ಬೀದರ್, ಕಲಬುರಗಿ, ರಾಯಚೂರು, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಹೆಚ್ಚು ಮಳೆಯಾಗುವ ನಿರೀಕ್ಷೆ ಇರುವುದರಿಂದ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ.

ತುಮಕೂರು, ಚಿಕ್ಕಬಳ್ಳಾಪುರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ವಿಜಯಪುರ, ಕೊಪ್ಪಳ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಹಾವೇರಿ, ಗದಗ, ಧಾರವಾಡ ಹಾಗೂ ಬಾಗಲಕೋಟೆ ಜಿಲ್ಲೆಗಳಲ್ಲೂ ಗುಡುಗು, ಸಿಡಿಲಿನೊಂದಿಗೆ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ ಎಂದು ತಿಳಿಸಿದೆ.