ಬೆಂಗಳೂರು: ಅರಬ್ಬಿ ಸಮುದ್ರದಲ್ಲಿ ವಾಯುಭಾರ ಕುಸಿತದ ಕಾರಣ ಅ.5ರಿಂದ ರಾಜ್ಯದ ದಕ್ಷಿಣ ಒಳನಾಡಿನ ನಾನಾ ಜಿಲ್ಲೆಗಳಲ್ಲಿ ಉತ್ತಮದಿಂದ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಅ.5ರಿಂದ ಒಂದೆರೆಡು ದಿನಗಳ ಕಾಲ ಕರಾವಳಿಯ ಬಹುತೇಕ ಕಡೆ, ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಶಿವಮೊಗ್ಗ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ. ಅ.8ರಂದು ಚಾಮರಾಜನಗರ, ಮಂಡ್ಯ, ಬೆಂಗಳೂರು ನಗರ, ಗ್ರಾಮಾಂತರ ಜಿಲ್ಲೆಗಳಲ್ಲಿ ಅಲ್ಲಲ್ಲಿ ಮಳೆ ಸುರಿಯಲಿದೆ.
ಮುಂಗಾರು ಕ್ಷೀಣಗೊಳ್ಳುತ್ತಿದೆ. ದಕ್ಷಿಣ ಒಳನಾಡಿನ ಮಧ್ಯಭಾಗದ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಸಂಜೆ ಮಳೆಯಾಗುತ್ತಿದೆ. ಮುಂದಿನ ಎರಡು ದಿನಗಳ ಕಾಲ ಉತ್ತರ ಒಳನಾಡಿನ ವಿವಿಧೆಡೆ ಹಗುರದಿಂದ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಉತ್ತರ ಭಾರತದಿಂದ ದಕ್ಷಿಣ ಭಾರತದ ಕಡೆ ಬಿಸಿಗಾಳಿ ಬೀಸುತ್ತಿರುವುದರಿಂದ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ತಾಪಮಾನದಲ್ಲಿ ಏರಿಕೆಯಾಗಿ ಸೆಕೆ ಹೆಚ್ಚಿದೆ. ಬುಧವಾರ ಬಳ್ಳಾರಿಯಲ್ಲಿ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್, ಕಲಬುರಗಿಯಲ್ಲಿ 35 ಡಿಗ್ರಿ ಸೆಲ್ಸಿಯಸ್, ಬಾಗಲಕೋಟ, ವಿಜಯಪುರದಲ್ಲಿ 34 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ಉತ್ತರ ಕರ್ನಾಟಕಕ್ಕೆ ಉತ್ತರ ಭಾರತದ ರಾಜ್ಯಗಳಿಂದ ಬಿಸಿಗಾಳಿ ಬೀಸುತ್ತಿದೆ. ಇದರ ಪರಿಣಾಮವಾಗಿ ಸೆಕೆ ಹೆಚ್ಚತೊಡಗಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ. ಜಿ.ಎಸ್. ಶ್ರೀನಿವಾಸ ರೆಡ್ಡಿ ತಿಳಿಸಿದರು.
ಮುಂಗಾರು ಕಳೆದು ಹಿಂಗಾರಿನ ಆಗಮನವೂ ಆಗುತ್ತಿದೆ. ಅ.5 ಅಥವಾ 6ರಿಂದ ದಕ್ಷಿಣ ಒಳನಾಡು, ಅದರಲ್ಲೂ ಬೆಂಗಳೂರು ನಗರ ಹಾಗೂ ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆಯಾಗಲಿದೆ. ಈ ಭಾಗದಲ್ಲಿ ಉಂಟಾಗಿರುವ ದಟ್ಟ ಮೋಡಗಳ ಸಾಲು (ಟ್ರಫ್) ಕೂಡಾ ಮಳೆಗೆ ಕಾರಣವಾಗಲಿದೆ.