News

ಕರಾವಳಿಯಲ್ಲಿ ತಗ್ಗಿದ ಮಳೆ-ಕಲ್ಯಾಣ ಕರ್ನಾಟಕದಲ್ಲಿ ವರುಣನ ಆರ್ಭಟ

16 September, 2020 8:32 AM IST By:

ಕರಾವಳಿ ಹಾಗೂ ಇನ್ನಿತರ ಕಡೆಗಳಲ್ಲಿ ಸೆ. 18 ರವರೆಗೆ ಗುಡುಗು ಸಹಿತ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕರ್ನಾಟಕ ಹಾಗೂ ಹೈದ್ರಾಬಾದ್ ಕರ್ನಾಟಕದಲ್ಲಿಯೂ ಭಾರಿಯ ಮಳೆಯಾಗುವ ಸಾಧ್ಯತೆಯಿದೆ. ಬೆಳಗಾವಿ, ಧಾರವಾಡ, ಕಲಬುರಗಿ, ವಿಜಯಪುರ, ಗದಗ, ಹಾವೇರಿ, ಬೀದರ್, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆಯಿದೆ.

ಕಲ್ಯಾಣ ಕರ್ನಾಟಕದ ಮಳೆಯಬ್ಬರ:

ಕಲ್ಯಾಣ ಕರ್ನಾಟಕದ ಕಲಬುರಗಿ, ಬೀದರ್ ಜಿಲ್ಲೆಯಾದ್ಯಂತ ಸೋಮವಾರ ರಾತ್ರಿಯಿಂದ ಮಂಗಳವಾರ ಬೆಳಿಗ್ಗಿಗೆವರೆಗೂ ಭಾರಿ ಮಳೆಯಾಗಿದ್ದರೆ, ಕರಾವಳಿ, ಮಲೆನಾಡು ಜಿಲ್ಲೆಗಳಲ್ಲಿ ಸಾಧಾರಣ ಪ್ರಮಾಣದಲ್ಲಿ ಮಳೆಯಾಗಿದೆ.

ಕಲಬುರ್ಗಿ ತಾಲ್ಲೂಕಿನಲ್ಲಿ ದನದ ಕೊಟ್ಟಿಗೆಯಲ್ಲಿ ಸಿಲುಕಿದ್ದ ಇಬ್ಬರನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಿಸಿದ್ದಾರೆ. ನಗರದ ಸಿದ್ದೇಶ್ವರ ನಗರದಲ್ಲಿ ಮನೆ ಕುಸಿದು ಮೂವರಿಗೆ ಪೆಟ್ಟಾಗಿದೆ. ಬೀದರ್‌ ಜಿಲ್ಲೆಯ ಕಮಲನಗರದಲ್ಲಿ 15 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಗರಿಷ್ಠ 14.2 ಸೆಂ.ಮೀ. ಮಳೆಯಾಗಿರುವುದು ದಾಖಲಾಗಿದೆ.

ಚಿತ್ತಾಪುರ, ಕಾಳಗಿ, ಸೇಡಂ ತಾಲ್ಲೂಕುಗಳಲ್ಲಿ ಹಳ್ಳಗಳ ಕಿರು ಸೇತುವೆಗಳು ಮುಳುಗಿದ್ದರಿಂದ ಕೆಲ ಹಳ್ಳಿಗಳ ಸಂಪರ್ಕ ಕಡಿತಗೊಂಡಿದೆ. ಜಮೀನಿಗೆ ನೀರು ನುಗ್ಗಿ ಬೆಳೆಯೂ ಹಾನಿಯಾಗಿದೆ.

ಕರಾವಳಿಯಲ್ಲಿ ಸಂಪೂರ್ಣವಾಗಿ ಮಳೆ ಇಳಿಮುಖವಾಗಿದೆ. ಆದರೆ ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿ ಮಾತ್ರ ಮಳೆಯಬ್ಬರ ಮುಂದುವರೆದಿದೆ. ಇನ್ನೂ ಎರಡು ದಿನಗಳ ಕಾಲ ಭಾರಿ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.