ಮಲೆನಾಡು ಹಾಗೂ ಉತರ ಕರ್ನಾಟಕ ವಿವಿಧೆಡೆ ಭಾರಿ ಗಾಳಿ ಜತೆಗೆ ಧಾರಾಕಾರ ಮಳೆಯಾಗಿದ್ದು, ಜನಜೀವನ ಅಸ್ತ್ಯವ್ಯಸ್ತವಾಗಿದೆ. ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿವೆ . ಕೊಡಗು ಜಿಲ್ಲೆಯಲ್ಲಿ ಪ್ರವಾಹ ಭೀತಿ ಎದುರಾಗಿದೆ. ಕಾವೇರಿ ಹಾಗೂ ಲಕ್ಷ್ಮಣತೀರ್ಥ ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಕುಶಾಲನಗರದ ನಿವಾಸಿಗಳಿಗೆ ಸತತ 3ನೇ ವರ್ಷವೂ ಜಲಾವೃತದ ಆತಂಕ ಶುರುವಾಗಿದೆ. ರಾಪವಾಪ ಮೂಲದ ವ್ಯಕ್ತಿಯೊಬ್ಬ ಗೋವಾದಲ್ಲಿ ಕಾರಿನ ಮೇಲೆ ಮರ ಬಿದ್ದು ಮೃತಪಟ್ಟಿದ್ದಾನೆ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ ನರಸಿಂಹಪುರ ಸುತ್ತಮುತ್ತ ಭಾರಿ ಮಳೆಯಾಗುತ್ತಿದೆ. ಮಳೆಯೊಂದಿಗೆ ಭಾರಿ ಗಾಳಿ ಬಿಸಿದ ಪರಿಣಾಮ ಕಾಫಿತೋಟ ಸೇರಿ ಅಲ್ಲಲ್ಲಿ ಬೃಹತ್ ಮರಗಳು ಧರೆಗುರುಳಿವೆ.
ಮೈಸೂರು ಜಿಲ್ಲೆಯ ಹಲವೆಡೆ ಮಳೆಯಾಗಿದೆ. ಕಬಿನಿ ಜಲಾನಯನ ಪ್ರದೇಶದಲ್ಲಿ ಉತ್ತಮ ಮಳೆಯಾಗುತ್ತಿದ್ದು, ಒಳಹರಿವು ಹೆಚ್ಚಳವಾಗಿದೆ. ಜಲಾಶಯವು ಗರಿಷ್ಠ ಮಟ್ಟ ತಲುಪುವ ಸಾಧ್ಯತೆ ಇರುವುದರಿಂದ ಮಂಗಳವಾರ 30 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿಸಲಾಗಿದೆ. ನದಿ ಪಾತ್ರದ ಗ್ರಾಮಗಳ ಜನರು ಎಚ್ಚರಿಕೆ ವಹಿಸಬೇಕೆಂದು ಜಿಲ್ಲಾಡಳಿತ ಘೋಷಿಸಿದೆ.
ಭಾಗಮಂಡಲ ತ್ರಿವೇಣಿ ಸಂಗಮ ಸಂಪೂರ್ಣ ಭರ್ತಿಯಾಗಿದೆ. ಮಡಿಕೇರಿ, ಮಾದಾಪುರ, ಸೋಮವಾರಪೇಟೆ ಭಾಗ ದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಹಾರಂಗಿಗೆ ಭಾರಿ ಪ್ರಮಾಣದ ನೀರು ಹರಿದು ಬರುತ್ತಿದೆ. ಹೊರ ಹರಿವು ಮತ್ತೆ ಹೆಚ್ಚಿಸಲಾಗಿದೆ.
ಪ್ರವಾಹ ಮುನ್ನೆಚ್ಚರಿಕೆ: ಶಿವಮೊಗ್ಗ ಜಿಲ್ಲೆಯಲ್ಲಿ ಮಂಗಳವಾರ ಮಳೆಯ ಆರ್ಭಟ ಮುಂದುವರಿದಿದೆ. ಹೊಸ ನಗರ, ತೀರ್ಥಹಳ್ಳಿ ಭಾಗದಲ್ಲಿ ಅತಿ ಹೆಚ್ಚು ಮಳೆ ಸುರಿದಿದೆ. ತುಂಗ–ಭದ್ರಾ ನದಿಯ ನೀರಿನ ಮಟ್ಟ ಏರಿಕೆಯಾಗಿದೆ.
ತೀರ್ಥಹಳ್ಳಿಯಲ್ಲಿ 104 ಸೆ.ಮೀ, ಹೊಸನಗರದಲ್ಲಿ 210.80 ಸೆ.ಮೀ ಮಳೆಯಾಗಿದೆ. ಪ್ರಮುಖ ನದಿಗಳಾದ ತುಂಗೆ, ಮಾಲತಿ, ಕುಶಾವತಿ ಹೊಳೆ, ಕುಂಟೇಹಳ್ಳ ಸೇರಿ ಸಣ್ಣ ಪುಟ್ಟ ಹಳ್ಳಗಳು ತುಂಬಿ ಹರಿಯುತ್ತಿವೆ.
ದಾವಣಗೆರೆ, ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ, ಕಲಬುರಗಿ, ಬೀದರ್ ಹಾಗೂ ಬಸವಕಲ್ಯಾಣದಲ್ಲಿಯೂ ಸಾಧಾರಣ ಮಳೆಯಾಯಿತು. ಬೆಳಗಾವಿ, ಧಾರವಾಡ, ಹಾವೇರಿ ಜಿಲ್ಲೆಗಳಲ್ಲಿ ಮಳೆಯಾಗಿದೆ.