News

ರಾಜ್ಯದಲ್ಲಿ ಆರ್ಭಟಿಸುತ್ತಿರುವ ಮಳೆ-ಜುಲೈ 23 ರಂದು ಕರಾವಳಿಯಲ್ಲಿ ರೆಡ್ ಅಲರ್ಟ್

23 July, 2021 1:29 PM IST By:

ರಾಜ್ಯದಲ್ಲಿ ಆರ್ಭಟಿಸುತ್ತಿರುವ ಮಳೆ ಮುಂದಿನ 5 ದಿನಗಳ ಕಾಲ ಮುಂದುವರೆಯಲಿದೆ. ಕಳೆದ ಎರಡು ವಾರಗಳಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ ಮತ್ತೆ ಬಿರುಸುಗೊಂಡಿದೆ. ಕರಾವಳಿಯ  ಉಡುಪಿ, ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡದಲ್ಲಿ ಜುಲೈ 23 ರಂದು ಭಾರಿ ಮಳೆಯಾಗಲಿರುವುದರಿಂದ ರೆಡ್ ಅಲರ್ಟ್ ಘೋಷಿಸಲಾಗಿದೆ.

ಮಲೆನಾಡಿನ ಜಿಲ್ಲೆಗಳಾದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು, ಹಾಸನ, ಒನಾಡಿನ ಬೆಳಗಾವಿ ಬೆಳಗಾವಿ, ಧಾರವಾಡ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಭಾರಿ ಮಳೆಯಾಗುವ ಮುನ್ಸೂಚನೆಯಿರುವುದರಿಂದ ಆರೇಂಜ್ ಅಲರ್ಟ್ ಘೋಷಿಸಲಾಗಿದೆ. ಅದೇ ರೀತಿ ಕಲಬುರಗಿ, ಬೀದರ್, ಯಾದಗಿರಿ, ಹಾವೇರಿ, ಗದಗ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈಗಾಗಲೇ ದೇಶದ ಉತ್ತರ ಭಾರತ ಹಾಗೂ ದಕ್ಷಿಣ ಭಾರತದಲ್ಲಿ ಜಿಟಿಜಿಟಿ ಮಳೆಯಾಗುತ್ತಿದೆ. ಮುಂಬೈನಲ್ಲಿ ಭಾರಿ ಮಳೆಯಾಗುವ ಮುನ್ನೂಚನೆ ಇರುವದರಿಂದ ಅಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ. ಮಹಾರಾಷ್ಟ್ರ, ಕೇರಳ ಸೇರಿ ಇನ್ನಿತರ ರಾಜ್ಯಗಳಲ್ಲಿ ಮಳೆಯಾಗುತ್ತಿರುವುದರಿಂದ ಗಡಿ ಭಾಗಗಳ ಡ್ಯಾಂಗಳಿಗೆ ಹಾಗೂ ನದಿಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದೆ.

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ರಾಜ್ಯದ ಜಲಾಶಯಗಳಿಗೆ ಅಪಾರ ನೀರು ಹರಿದುಬರುತ್ತಿದೆ. ಮಳೆ ಇದೇ ರೀತಿ ಮುಂದುವರೆದರೆ ಕೆಲ ಜಿಲ್ಲೆಗಳಲ್ಲಿ ಪ್ರವಾಹದ ಆತಂಕ ಎದುರಾಗಿದೆ. ನದಿ ಪಾತ್ರದ ಜನರಿಗೆ ಈಗಾಗಲೇ ಎಚ್ಚರಿಕೆ ನೀಡಲಾಗಿದೆ.

ಮಹಾರಾಷ್ಟ್ರದಲ್ಲಿ ಮುಂದುವರೆದ ಮಳೆಯ ಅಬ್ಬರ

ಮಹಾರಾಷ್ಟ್ರದಲ್ಲಿ  ಮಳೆಯ ಅಬ್ಬರ ಮುಂದುವರೆದಿದೆ. ರತ್ನಗಿರಿ ಜಿಲ್ಲೆಯ ಕೊಂಕಣ ರೈಲ್ವೆ ಮಾರ್ಗದ ರೈಲು ಸಂಚಾರ ಅಸ್ತವ್ಯಸ್ತಗೊಂಡಿದ್ದು, ಸುಮಾರು 6 ಸಾವಿರ ಪ್ರಯಾಣಿಕರು ವಿವಿಧ ರೈಲುಗಳಲ್ಲಿ ಸಿಲುಕಿಕೊಂಡಿದ್ದಾರೆ.ಕೆಲ ರೈಲುಗಳ ಸಂಚಾರ ಸ್ಥಗಿತಗೊಳಿಸಲಾಗಿದೆ. ಕೆಲ ರೈಲು ಸಂಚಾರ ರದ್ದುಗೊಳಿಸಲಾಗಿದೆ.

ಬೆಳಗಾವಿ ಹಾಗೂ ಮಹಾರಾಷ್ಟ್ರದ ಗಡಿ ಭಾಗಗಳಲ್ಲಿ ಬುಧವಾರ ಮಧ್ಯಾಹ್ನದಿಂದ ಆರಂಭವಾದ ವರುಣ ಅಬ್ಬರ ಗುರವಾರ ರಾತ್ರಿಯವರೆಗೂ ಮುಂದುವರೆದಿತ್ತು. ಕೃಷ್ಣ, ಘಟಪ್ರಭಾ ನದಿಗಳು ತುಂಬಿ ಹರಿಯುತ್ತಿದೆ.