News

ಜುಲೈ 14ರವರೆಗೆ ಉಡುಪಿ,ಚಿಕ್ಕಮಗಳೂರು ಸೇರಿದಂತೆ 7 ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ- ರೆಡ್ ಅಲರ್ಟ್ ಘೋಷಣೆ

11 July, 2021 10:20 PM IST By:

ವಾಯುಭಾರ ಕುಸಿತ ಉಂಟಾಗುವ ಸಾಧ್ಯತೆಯಿರುವುದರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಲಕ್ಷಣದಿಂದ ಹವಮಾನ ಇಲಾಖೆಯು ರೆಡ್ ಅಲರ್ಟ್ ಘೋಷಿಸಲಾಗಿದೆ. ರಾಜ್ಯದ ಕರಾವಳಿ, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಜೈಲ 14ರವರೆಗೆ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಉಡುಪಿ, ದಕ್ಷಿಣಕನ್ನಡ, ಉತ್ತರಕನ್ನಡ, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿರುವುದರಿಂದ ಜುಲೈ 11 ಮತ್ತು 12 ರಂದು ರೆಡ್ ಹಾಗೂ 13 ಮತ್ತು 14 ರಂದು ಯೆಲ್ಲೋ ಅಲರ್ಟ್ ಮುಂದುವರೆಸಲಾಗಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ತಿಳಿಸಿದೆ.

ಕರಾವಳಿ ಜಿಲ್ಲೆಗಳಲ್ಲಿ ಇದೇ 15ರವರೆಗೆ ಧಾರಾಕಾರ ಮಳೆಯಾಗಲಿದೆ. ಕರಾವಳಿಯಲ್ಲಿ ಗಂಟೆಗೆ ಗರಿಷ್ಠ 65 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. 3.3 ಮೀಟರ್ ಗಳಷ್ಟು ಎತ್ತರದ ಅಲೆಗಳು ಏಳುವ ಸಾಧ್ಯತೆಯಿರುವುದರಿಂದ ಈ ಸಮಯದಲ್ಲಿ ಮೀನುಗಾರರು ಕಡಲಿಗೆ ಇಳಿಯಬಾರದೆಂದು ಎಚ್ಚರಿಕೆ ನೀಡಲಾಗಿದೆ.

ಉತ್ತರ ಒಳನಾಡಿನ ಜಿಲ್ಲೆಗಳಲ್ಲಿಯೂ ಉತ್ತಮ ಮಳೆಯಾಗುವ ಸಾಧ್ಯತೆಯಿರುವುದರಿಂದ ಜುಲೈ 14ರವರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.

ಈಗಾಗಲೇ ರಾಜ್ಯದ ಕರಾವಳಿಯಲ್ಲಿ ಮುಂಗಾರು ಚುರುಕುಗೊಂಡಿದ್ದು, ಕಳೆದೆರಡು ದಿನಗಳಿಂದ ರಾಜ್ಯಾದ್ಯಂತ ಉತ್ತಮ ಮಳೆಯಾಗಿದೆ.ಶುಕ್ರವಾರ ಮತ್ತು ಶನಿವಾರ ರಾತ್ರಿ ನಿರಂತರ ಮಳೆಯಾಗಿದೆ. ಗಾಳಇಯ ವೇಗ ಹೆಚ್ಚಿರುವ ಹಿನ್ನೆಲೆಯಲ್ಲಿ ಸಮುದ್ರ ತೀರದ ನಿವಾಸಿಗಳು ಹಾಗೂ ಮೀನುಗಾರರು ಎಚ್ಚರವಹಿಸಬೇಕೆಂದು ಇಲಾಖೆ ತಿಳಿಸಿದೆ.

ಭಾರಿ ಮಳೆಗೆ ಹಳ್ಳದಲ್ಲಿ ಬುಧವಾರ ಕೊಚ್ಚಿಹೋಗಿದ್ದ ವಿಜಯಪುರ ಜಿಲ್ಲೆಯ ಆಲಮೇಲ ತಾಲೂಕಿನ ಕುರಬತ್ತಹಳ್ಳಿ ಗ್ರಾಮದ ರೈತ ಬಸಂತರಾಯ ಸಿದ್ದಪ್ಪ ಅಂಬಾಗೊಳ ರೈತರ ಶೋಧ ಕಾರ್ಯ ನಡೆದಿದ್ದರೂ ಇನ್ನೂ ಪತ್ತೆಯಾಗಿಲ್ಲ. ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳಿಗೆ ಜೀವಕಳೆ ಬಂದಿದೆ. ಹಳ್ಳಕೊಳ್ಳಗಳು ಈಗ ತುಂಬಿ ಹರಿಯುತ್ತಿವೆ.

ಎಲ್ಲೆಲ್ಲಿ ಎಷ್ಟು ಮಳೆ

ಶನಿವಾರ ಬೆಳಗ್ಗೆ 9.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ದಕ್ಷಿಣ ಕನ್ನಡ ಮುಲ್ಕಿಯಲ್ಲಿ 16 ಸೆಂ.ಮೀ, ಕಲಬುರಗಿಯಲ್ಲಿ 11 ಸೆಂ.ಮೀ, ದಕ್ಷಿಣ ಕನ್ನಡದ ಮಾಣಿಯಲ್ಲಿ 9 ಸೆಂ.ಮೀ, ಉಡುಪಿಯ ಕೋಟದಲ್ಲಿ 8 ಸೆಂ.ಮೀ, ಉಡುಪಿಯ ಕುಂದಾವರ, ಮಂಗಳೂರು, ಸುಬ್ರಹ್ಮಣ್ಯ, ಬೆಳಗಾವಿಯ ರಾಯಬಾಗದಲ್ಲಿ ತಲಾ 7 ಸೆಂ. ಮೀ ಮಳೆಯಾಗಿದೆ.

ಉಡುಪಿ ಜಿಲ್ಲೆಯಾದ್ಯಂತ ಕಳೆದ ರಾತ್ರಿಯಿಂದ ಸತತ ವಾಗಿ ಸುರಿಯುತ್ತಿರುವ ಭಾರೀ ಮಳೆ ರವಿವಾರ ಕೂಡ ಮುಂದುವರೆದಿದೆ.

ಕಳೆದ 24ಗಂಟೆಗಳ ಅವಧಿಯಲ್ಲಿ ಉಡುಪಿ- 56.2 ಮಿ.ಮೀ., ಬ್ರಹ್ಮಾವರ- 80.9ಮಿ.ಮೀ., ಕಾಪು -44.6ಮಿ.ಮೀ., ಕುಂದಾಪುರ- 73.1ಮಿ.ಮೀ., ಬೈಂದೂರು -62.6ಮಿ.ಮೀ., ಕಾರ್ಕಳ- 36.9ಮಿ.ಮೀ., ಹೆಬ್ರಿ- 91.5 ಮಿ.ಮೀ ಮಳೆಯಾಗಿದೆ. ಜಿಲ್ಲೆಯಾದ್ಯಂತ ಸರಾಸರಿ 64.2 ಮಿ.ಮೀ. ಮಳೆಯಾಗಿರುವ ಬಗ್ಗೆ ವರದಿಯಾಗಿದೆ.