News

ಕರಾವಳಿಯಲ್ಲಿ ಮಳೆ ಅರ್ಭಟ- ವ್ಯಾಪಕ ಹಾನಿ, ಅಪಾಯಮಟ್ಟ ಮೀರಿ ಹರಿಯುತ್ತಿರುವ ನದಿಗಳು

21 September, 2020 9:15 AM IST By:

ಉಡುಪಿ, ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಮತ್ತು ಮಲೆನಾಡಿನ ಜಿಲ್ಲೆಗಳಲ್ಲಿ ಶನಿವಾರದಿಂದ  ಎಡೆಬಿಡದೆ ಸುರಿಯುತ್ತಿರುವ ಮಳೆ ಜನತೆಯನ್ನು ತತ್ತರಿಸುವಂತೆ ಮಾಡಿದೆ. ಭಾನುವಾರ ಸಹ ಇಡೀ ವರುಣನ ಆರ್ಭಟ ಜೋರಾಗಿದ್ದು, ಉಡುಪಿ, ಕಾಪು, ಬ್ರಹ್ಮಾವರ, ಕಾರ್ಕಳ ತಾಲೂಕುಗಳಲ್ಲಿ ಅತೀ ಹೆಚ್ಚಿನ ಹಾನಿಯಾಗಿದೆ. ರೈತರ ಹೊಲಗಳಿದೆ ಮಳೆ ನೀರು ನುಗ್ಗಿದ್ದರಿಂದ ಅಪಾರ ಬೆಳೆ ಹಾನಿಯಾಗಿದೆ.

ನಿರಂತರವಾಗಿ ಸುರಿಯುತ್ತಿರುವ ಮಹಾಮಳೆಗೆ ಉಡುಪಿ ಜಿಲ್ಲೆಯಲ್ಲಿ ದಶಕಗಳಲ್ಲಿ ಕಂಡರಿಯದ ನೆರೆ ಬಂದಿದೆ.ಉಡುಪಿ ನಗರ ದ್ವೀಪದಂತಾಗಿದ್ದು, ಹಲವು ಬಡಾವಣೆಗಳು ಭಾಗಶಃ ಮುಳುಗಡೆಯಾಗಿವೆ. ಶನಿವಾರ ಮಧ್ಯರಾತ್ರಿ ಅಗ್ನಿಶಾಮಕ ಸಿಬ್ಬಂದಿ, ಕೋಸ್ಟ್‌ಗಾರ್ಡ್ ಹಾಗೂ ಸ್ಥಳೀಯರು ದೋಣಿಗಳನ್ನು ಬಳಸಿ ಪ್ರವಾಹಕ್ಕೆ ಸಿಲುಕಿದವರನ್ನು ರಕ್ಷಣೆ ಮಾಡಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುರಿಯುತ್ತಿರುವ ಮಳೆಗೆ ತುಂಗಾ, ಭದ್ರಾವತಿ ನದಿ ತುಂಬಿ ಹರಿಯುತ್ತಿದೆ.ದಕ್ಷಿಣ ಕನ್ನಡ ಜಿಲ್ಲೆಯಲ್ಲೂ ಮಳೆ ಆರ್ಭಟಿಸುತ್ತಿದೆ. ಸರಿಪಳ್ಳದಲ್ಲಿ ಮನೆ ಕುಸಿದು ಇಬ್ಬರಿಗೆ ಗಾಯವಾಗಿದೆ. ವಿಟ್ಲ ಸಮೀಪದ ಬನಾರಿ ಬಾಬಟ ಪ್ರದೇಶ ದಲ್ಲಿ ಗುಡ್ಡ ಕುಸಿದು ಮನೆ ನೆಲಸಮವಾ ಗಿದ್ದು, ಮಣ್ಣಿನಡಿ ಸಿಲುಕಿದ್ದ 6 ಮಂದಿಯನ್ನು ರಕ್ಷಿಸಲಾಗಿದೆ. ಇಬ್ಬರ ಸ್ಥಿತಿ ಗಂಭೀರವಾಗಿದೆ.

ಉಡುಪಿ ನಗರದ ಕಲ್ಸಂಕ ಪ್ರದೇಶ ಪ್ರಮುಖ ವ್ಯಾಪಾರ ಕೇಂದ್ರವಾಗಿದ್ದು, ಇಲ್ಲಿ ಬುಡಗಪೇಟೆ ರಸ್ತೆಗೆ ನುಗ್ಗಿದ ನೀರನಿಂದ ಭಾರಿ ನಷ್ಟವಾಗಿದೆ. ಒಂದೊಂದು ಗೋದಾಮಿನಲ್ಲಿ ಒಂದೆರಡು ಕೋಟಿ.ರೂಪಾಯಿನಷ್ಟು ನಷ್ಟವಾಗಿರುವ ಸಾಧ್ಯತೆಯಿದೆ. ಎಣ್ಣೆ ಗಿರಣಿಯೊಳಗೂ ನೀರು ನುಗ್ಗಿದೆ.

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ– ಕಾರ್ಕಳ, ಕಳಸ– ಹೊರನಾಡು ಹಾಗೂ ಕುದುರೆಮುಖ– ಕಾರ್ಕಳ ಮಾರ್ಗದಲ್ಲಿ ಸಂಚಾರ ಬಂದ್‌ ಆಗಿದೆ. ಮೂಡಿಗೆರೆ ತಾಲ್ಲೂಕಿನ ಜಾವಳಿ ಬಳಿ ಕ್ವಾಲಿಸ್‌ ಕಾರು ಹಳ್ಳಕ್ಕೆ ಉರುಳಿದ್ದು, ಕಾರಿನಲ್ಲಿದ್ದ ಏಳು ಮಂದಿಗೆ ಸಣ್ಣಪುಟ್ಟ ಗಾಯಗಳಾಗಿವೆ.

ಕೊಡಗು ಜಿಲ್ಲೆಯಲ್ಲೂ ಮಳೆಯ ಅಬ್ಬರ ಮುಂದು ವರಿದಿದೆ. ಭಾಗಮಂಡಲ ಮತ್ತೆ ಜಲಾ ವೃತಗೊಂಡಿದೆ. ಕೇರಳದಲ್ಲಿ ಭಾರಿ ಮಳೆ ಯಾಗುತ್ತಿರುವುದರಿಂದ ಮೈಸೂರು ಜಿಲ್ಲೆಯಲ್ಲಿ ಕಬಿನಿ ಜಲಾಶಯದ ಒಳ ಹರಿವಿನಲ್ಲಿ ಏರಿಕೆಯಾಗಿದ್ದು, ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಕೆಆರ್‌ಎಸ್‌ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. 

ಭದ್ರಾ ಜಲಾಶಯದಿಂದ 60 ಸಾವಿರ ಕ್ಯುಸೆಕ್‌ ನೀರು ಬಿಡು ಗಡೆ: ಶಿವಮೊಗ್ಗ ಜಿಲ್ಲೆಯಲ್ಲಿ ಆಗಾಗ್ಗೆ ಜೋರು ಮಳೆಯಾಗುತ್ತಿದ್ದು, ಭದ್ರಾ ಜಲಾಶಯದಿಂದ ನೀರಿನ ಹೊರಹರಿವು ಹೆಚ್ಚಿದೆ. ಭಾನುವಾರ 60 ಸಾವಿರ ಕ್ಯುಸೆಕ್ ನೀರು ಹೊರಬಿಡಲಾಗುತ್ತಿದೆ. ಶಿವಮೊಗ್ಗ ಜಿಲ್ಲೆಯ ಹೊಸನಗರ, ತೀರ್ಥಹಳ್ಳಿ, ಭದ್ರಾವತಿ, ಸೊರಬಸ ಸಾಗರ, ಶಿಕಾರಿಪುರದಲ್ಲಿ ಉತ್ತಮ ಮಳೆಯಾಗಿದೆ. ಹೊಸನಗರ ತಾಲ್ಲೂಕಿನ ನಗರ ಹೋಬಳಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ತಾಲ್ಲೂಕಿನ ಕೆಲವೆಡೆ ಧರೆ ಕುಸಿತದ ಭೀತಿ ಎದುರಾಗಿದೆ. 

ಉತ್ತರ ಕರ್ನಾಟಕದ ಹಲವಾರು ಜಿಲ್ಲೆಗಳಲ್ಲಿಯೂ ಭಾರಿ ಮಳೆ ಸುರಿದಿದ್ದು, ಕಲಬುರಗಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ಭೀಮಾ ಹಾಗೂ ಕೃಷ್ಣಾ ನದಿಗಳು ಉಕ್ಕಿ ಹರಿಯುತ್ತಿವೆ. ಈ ನದಿಗಳ ಪಾತ್ರದಲ್ಲಿ ಪ್ರವಾಹ ಬಂದಿದೆ. ಬಿಸಿಲನಾಡು ರಾಯಚೂರು ಜಿಲ್ಲೆ ಈಗ ಮಳೆಯ ನಾಡಾಗಿದೆ. ಯಾದಗಿರಿ ಜಿಲ್ಲೆಯಲ್ಲಿಯೂ ಮಳೆ ಆರ್ಭಟ ಜೋರಾಗಿದೆ.

ಬೆಂಗಳೂರಿನಲ್ಲಿ ಇಡೀ ದಿನ ಜಿಟಿ ಜಿಟಿ ಮಳೆ ಸುರಿದಿದ್ದರಿಂದ ವಾಹನ ಸಂಚಾರ, ವ್ಯಾಪಾರ ವಹಿವಾಟಿಗೆ ತೊಂದರೆಯಾಯಿತು.

ಗುಡ್ಡ ಕುಸಿತ, ಸಂಚಾರ ಸ್ಥಗಿತ:

ಮಂಗಳೂರು ತಾಲೂಕಿನ ಕೆಂಜಾರಿನಿಂದ ಅದ್ಯಪಾಡಿ ಮೂಲಕ ಹಾದು ಹೋಗುವ ಜಿಲ್ಲಾ ಮುಖ್ಯ ರಸ್ತೆ ಮೇಲೆ ಗುಡ್ಡ ಕುಸಿದು ಬಿದ್ದಿದ್ದು ಸಂಚಾರ ಸ್ಥಗಿತಗೊಂಡಿದೆ. ಶನಿವಾರ ತಡರಾತ್ರಿ ರಸ್ತೆ ಬದಿಯ ಗುಡ್ಡ ಪ್ರದೇಶದಿಂದ ದೊಡ್ಡ ಬಂಡೆಯೊಂದು ರಸ್ತೆಯ ಮೇಲೆ ಬಿದ್ದಿದ್ದು, ಸಂಚಾರ ಸ್ಥಗಿತಗೊಂಡಿದೆ. ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ.