News

ಹೊಲದಲ್ಲಿಯೇ ಕೊಳೆಯುತ್ತಿದೆ ಬೆಳೆ- ರೈತರಲ್ಲಿ ಆತಂಕ

28 September, 2020 7:41 AM IST By:

ನಾಲ್ಕೈದು ವರ್ಷಗಳಿಂದ ಮಳೆರಾಯನ ಅವಕೃಪೆಯಿಂದ ಕಂಗೆಟ್ಟ ರೈತರಿಗೆ ಈ ವರ್ಷ ಅತೀ ಮಳೆಯಿಂದ ಬೆಳೆ ಹಾಳಾಗಿ ರೈತರ ನೆಮ್ಮದಿಯನ್ನೇ ಕಸಿದುಕೊಂಡಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲವೆಂಬಂತೆ ಕಟಾವಿಗೆ ಬಂದ ಬೆಳೆಗಳೆಲ್ಲ ಕಳೆದೆರಡು ದಿನಗಳಲ್ಲಿ ಸುರಿದ ಧಾರಾಕಾರ ಮಳೆಗೆ ಕೊಚ್ಚಿಕೊಂಡು ಹೋಗಿದ್ದು ಒಂದೆಡೆಯಾದರೆ ಹೊಲದಲ್ಲಿಯೇ ಮೊಣಕಾಲವರೆಗೆ ನೀರು ನಿಂತು ಹೊಲದಲ್ಲಿಯೇ ಬೆಳೆ ಕೊಳೆಯುತ್ತಿದೆ. ಪ್ರತಿವರ್ಷ ಮಳೆಯ ಪ್ರಮಾಣ ಕಡಿಮೆಯಾಗಿ ರೈತರು ಮುಗಿಲುನತ್ತ ನೋಡುವ ಸ್ಥಿತಿ ಎದುರಾಗುತ್ತಿತ್ತು. ಆದರೆ ಈ ವರ್ಷ ಅತೀವೃಷ್ಟಿಯಿಂದಾಗಿ ಹೊಲದಲ್ಲಿಯೇ ಬೆಳೆ ಕೊಳೆಯುತ್ತಿದೆ.

ಈ ವರ್ಷ ಉತ್ತಮ ಮುಂಗಾರು ಪ್ರವೇಶವಾಗಿದ್ದರಿಂದ ರಾಜ್ಯಾದ್ಯಂತ ರೈತರಲ್ಲಿ ಮಂದಹಾಸ ಮೂಡಿತ್ತು. ಬಿತ್ತಣಿಕೆಯೂ ಸಹ ನಿರೀಕ್ಷೆಗಿಂತೆ ಹೆಚ್ಚಾಗಿತ್ತು.  ಫಸಲು ಸಹ ನಳನಳಿಸಿ  ಇಳುವರಿಯಲ್ಲಿ ಹೆಚ್ಚಾಗುವ  ಸಾಧ್ಯತೆಯಿತ್ತು. ಆದರೆ ಕಳೆದೆರಡು ದಿನಗಳಲ್ಲಿ ಸುರಿದ ಮಳೆ ರೈತರ ನೆಮ್ಮದಿಯ ಬದುಕನ್ನೇ ಕಸಿದುಕೊಂಡಿದೆ.

ಆಗಸ್ಟ್ ತಿಂಗಳಲ್ಲಿ ಕರಾವಳಿ ಜಿಲ್ಲೆಗಳಲ್ಲಿ ಅತೀ ಮಳೆಯಾಗಿ ಬೆಳೆ ಹಾಳಾದರೆ, ಸೆಪ್ಟೆಂಬರ್ ತಿಂಗಳು ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿರುವ ರೈತರ ಬೆಳೆ ಮಳೆಯಲ್ಲಿ ಕೊಚ್ಚಿಕೊಂಡು ಹೋಗಿದೆ.  ಆಗಸ್ಟ್ ತಿಂಗಳ ಅಂತ್ಯದಲ್ಲಿ ಸುರಿದ ನಿರಂತರ ಮಳೆಯಿಂದ  ಕರಾವಳಿ ಹಾಗೂ ಉತ್ತರ ಕರ್ನಾಟಕದ ಕೆಲವು ಜಿಲ್ಲೆಗಳಲ್ಲಿ ಹೆಸರು, ಉದ್ದು, ಮುಸುಕಿನ ಜೋಳ, ಈರುಳ್ಳಿ, ಅಡಕೆ ಸೇರಿದಂತೆ ಇತರ ಬೆಳೆಗಳು ಹಾಳಾಗಿತ್ತು.

ಸೆಪ್ಟೆಂಬರ್ 25 ರಂದು ರಾತ್ರಿ (ಶುಕ್ರವಾರ  ಮಧ್ಯರಾತ್ರಿಯಿಂದ ಶನಿವಾರದವರೆಗೆ ಸುರಿದ ಮಳೆಗೆ ಕಲ್ಯಾಣ ಕರ್ನಾಟಕದ ಬೀದರ್, ಕಲಬುರಗಿ, ಯಾದರಿರಿ, ರಾಯಚೂರು, ಬಳ್ಳಾರಿ, ಕೊಪ್ಪಳ ಸೇರಿದಂತೆ ಬೆಳಗಾವಿ, ಬಿಜಾಪುರ, ಗದಗ, ಬಾಗಲಕೋಟೆ ಜಿಲ್ಲೆಗಳಲ್ಲಿ ಲಕ್ಷಾಂತರ ಎಕರೆ ಬೆಳೆ ಹಾಳಾಯಿತು. ಕಟಾವಿಗೆ ಬಂದಂತಹ ಬೆಳೆಗಳಲ್ಲಿ ನೆಲಪಾಲಾಗಿ ರೈತರನ್ನು ಸಂಕಷ್ಟಕ್ಕೆ ಸಿಲುಕಿಸಿತು.

ಹೊಲದಲ್ಲಿಯೇ ಕೊಳೆತು ಹೋಗುತ್ತಿದೆ ಬೆಳೆ:

ಬಿಜಾಪುರ ಜಿಲ್ಲೆಯಲ್ಲಿ ಸಜ್ಜೆ, ಮೆಕ್ಕೆಜೋಳ, ಸೂರ್ಯಕಾಂತಿ ಬೆಳೆ ರಾಶಿ ಮಾಡಲು ಮಳೆ ಅವಕಾಶ ಕೊಡುತ್ತಿಲ್ಲ. ಸಜ್ಜೆ ಬೆಳೆ ಒಂದೆಡೆ ಹರಿದಿಟ್ಟರೂ ರಾಶಿ ಮಾಡಲು ಬಿಟ್ಟಿಲ್ಲ.ತಾಲ್ಲೂಕಿನ ವಂದಾಲ, ಗಣಿ, ಗೊಳಸಂಗಿ, ಬುದ್ನಿ, ಇಟಗಿ, ಹೆಬ್ಬಾಳ, ಯಲ್ಲಮ್ಮನ ಬೂದಿಹಾಳ ಸೇರಿದಂತೆ ನಾನಾ ಕಡೆ ಹೊಲದಲ್ಲಿ ನೀರು ನಿಂತಿವೆ. ಹೂವು ಬಿಟ್ಟಿರುವ ತೊಗರಿ, ಹತ್ತಿ ಬೆಳೆಗೂ ನಷ್ಟವಾಗುವ ಸಾಧ್ಯತೆ. ಮುಂಗಾರಿಯಾಗಿ ಕೆಲವೆಡೆ ಬಿತ್ತನೆ ಮಾಡಿದ್ದ ಈರುಳ್ಳಿಯಂತೂ ಮಣ್ಣಿನಲ್ಲಿಯೇ ಕೊಳೆತು ಹೋಗಿದೆ

ಸಾಂದರ್ಭಿಕ ಚಿತ್ರ

ಹಾಳಾದ ಸೂರ್ಯಕಾಂತಿ ಬೆಳೆ:

ಹಟ್ಟಿಚಿನ್ನದಗಣಿಯ ಗುರುಗುಂಟಾ ವ್ಯಾಪ್ತಿಯಲ್ಲಿ ಅತಿಯಾದ ಮಳೆಯಿಂದಾಗಿ ಸೂರ್ಯಕಾಂತಿ ಬೆಳೆ ಹಾಳಾಗಿದೆ. ಪ್ರಾರಂಭದಲ್ಲಿ ಮಳೆ ಉತ್ತಮವಾಗಿ ಸುರಿದಿದ್ದರಿಂದ ಗುರುಗುಂಟಾ, ಆನ್ವರಿ ಗೆಜ್ಜಲಗಟ್ಟಾ, ಮೇಧಿನಾಪೂರ, ಗುಡದನಾಳ ಗ್ರಾಮದಲ್ಲಿ  5 ಸಾವಿರ ಎಕರೆಯಲ್ಲಿ ಪ್ರದೇಶದಲ್ಲಿ ಸೂರ್ಯಕಾಂತಿ  ಬಿತ್ತನೆ ಮಾಡಲಾಗಿತ್ತು. ಬೆಳೆ ಕೂಡ ಹೂ ಬಿಟ್ಟು ಸಮೃದ್ದವಾಗಿ ಬೆಳೆದಿತ್ತು. ಕಾಳುಗಟ್ಟಿಯಾಗುವ ಸಂದರ್ಭದಲ್ಲಿ ನಿರಂತರವಾಗಿ ಸುರಿದ ಮಳೆಯಿಂದಾಗಿ ಬೆಳೆ ಹಾಳಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

 ಹೊಲಗಳಿಗೆ ನೀರು ನುಗ್ಗಿ ಬೆಳೆ ಹಾನಿ:

ಬೀದರ್ ಜಿಲ್ಲೆಯ ಮಾಳೆಗಾಂವ್, ಚಿಮಕೋಡ, ಜಾಂಪಾಡ ಹಾಗೂ ಬಸಂತಪುರ ಗ್ರಾಮಗಳಲ್ಲಿ ಹೊಲಗಳಲ್ಲಿ ನೀರು ನಿಂತು ಬೆಳೆ ಹಾನಿ ಉಂಟಾಗಿದೆ. ಸರಾಗವಾಗಿ ನೀರು ಹರಿದು ಹೋಗುವಂತೆ ಸೇತುವೆ ನಿರ್ಮಿಸದ ಕಾರಣ ನೀರು ಸೇತುವೆ ಮೇಲಿಂದ ಹರಿದಿದೆ. ನೀರಿನ ಒತ್ತಡ ಹೆಚ್ಚಾಗಿ ಸುತ್ತಮುತ್ತಲಿನ ಹೊಲಗಳಿಗೆ ನುಗ್ಗಿ ಬೆಳೆ ಹಾನಿ ಸಂಭವಿಸಿದೆ. ಚಿಲ್ಲರ್ಗಿ ಗ್ರಾಮದಲ್ಲಿ ಉದ್ದು ರಾಶಿಗೆ ಸಿದ್ಧತೆ ಮಾಡಿಕೊಂಡಿದ್ದ ಅನೇಕ ರೈತರು ಬೆಳೆ ಕಟಾವು ಮಾಡಿದ್ದರು. ಆದರೆ, ಭಾರಿ ಮಳೆಯಿಂದಾಗಿ ಬೆಳೆ ನೀರಿನಲ್ಲಿ ಕೊಚ್ಚಿಕೊಂಡು ಹೋಗಿದೆ. ಉದ್ದು, ಸೋಯಾ ಸಂಪೂರ್ಣ ನೀರಲ್ಲಿ ಮುಳುಗಿದರೆ, ಕಬ್ಬು, ಹತ್ತಿ ಬೆಳೆಗಳಲ್ಲಿ ನೀರು ನಿಂತಿದೆ .ಭಾರಿ ಮಳೆಯಿಂದ ನೀರು ಸಂಗ್ರಹವಾಗಿ ಹೊಲಗಳು ಹೊಂಡಗಳಾಗಿ ಮಾರ್ಪಟ್ಟಿವೆ. ಉದ್ದು ಬೆಳೆದ ರೈತರ ಸ್ಥಿತಿ ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂಬಂತಾಗಿದೆ.

ಕಲಬುರಗಿ ಜಿಲ್ಲೆಯಲ್ಲಿ ಬೆಳೆಗೆ ಕಂಟಕವಾದ ಮಳೆ:

ಕಲಬುರಗಿ ಗ್ರಾಮಾಂತರ, ಚಿತ್ತಾಪುರ, ಚಿಂಚೋಳಿ, ಜೇವರ್ಗಿ, ಅಫಜಲ್ಪುರ, ಸೇಡಂ, ಆಳಂದ, ಸೇರಿದಂತೆ ಸಾವಿರಾರು ಎಕರೆ ಬೆಳೆ ಕೊಚ್ಚಿಕೊಂಡು ಹೋಗಿದೆ. ಕಳೆದ ಹದಿನೈದು ದಿನಗಳ ಹಿಂದೆ ನಿರಂತರ ಮಳೆಯಿಂದ ಹೆಸರು, ಉದ್ದು ಹೊಲದಲ್ಲಿಯೇ ಮೊಳಕೆ ಒಡೆದು ಹಾಳಾಗಿತ್ತು. ಈಗ ಅತೀ ಮಳೆಯಿಂದ ಬೆಳೆಯಲ್ಲಾ ಕೊಚ್ಚಿಕೊಂಡು ಹೋಗಿದೆ.

ಯಾದಗಿರಿಯಲ್ಲಿ ಹೊಲಗಳೆಲ್ಲ ಜಲಾವೃತ:

ಯಾದಗಿರಿ ಜಿಲ್ಲೆಯಲ್ಲಿ ಸುರಿದ ಧಾರಾಕಾರ ಮಳೆಗೆ ಜಮೀನು, ಗ್ರಾಮಗಳು ಜಲಾವೃತವಾಗಿವೆ. ಹೊಲ, ಗದ್ದೆಗಳಿಗೆ ತೆರಳಿದ ರೈತರು ತಮ್ಮ ಗ್ರಾಮಕ್ಕೆ ತಿರುಗಿ ಬರಲಾರದೆ ಹಳ್ಳದ ಆಚೆಯಲ್ಲೇ ಸಿಲುಕಿಕೊಂಡ ಘಟನೆ ಅಲ್ಲಿಲ್ಲಿ ವರದಿಯಾಗಿದೆ.  ಕೃಷಿ ಚಟುವಟಿಕೆಗೆ ಎಂದು ಜಾನುವಾರುಗಳೊಂದಿಗೆ ಹೊಲ, ಗದ್ದೆಗಳಿಗೆ ತೆಳಿದ ಇಲ್ಲಿನ ರೈತರು ಮಳೆ ಹೆಚ್ಚಾಗಿದ್ದರಿಂದ ನೀರಿನ ಹರಿವು ಹೆಚ್ಚಾಗಿದ್ದರಿಂದ ವಾಪಸ್‌ ಬರಲು ಪರದಾಡಿದ್ದಾರೆ. 

ಕೆರೆಯಂತಾದ ಹೊಲಗಳು:

ಸೈದಾಪು ಸಮೀಪದ ಬದ್ದೆಪಲ್ಲಿ, ಕಿಲ್ಲನಕೇರಾ ಗ್ರಾಮಗಳಲ್ಲಿರುವ ಕೆರೆಗಳು ತುಂಬಿ ಕೋಡಿ ಬಿದ್ದ ಪರಿಣಾಮವಾಗಿ ಕೆರೆಯ ನೀರು ಸಮೀಪದ ಹತ್ತಿ ಹೊಲ- ಭತ್ತದ ಗದ್ದೆಗಳಿಗೆ ನುಗ್ಗಿ ಹೊಲಗಳೆಲ್ಲವು ಕೆರೆಯಂತೆ ಕಾಣುತ್ತಿವೆ. ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ. ಹಳ್ಳದ ದಡದಲ್ಲಿರುವ ರೈತರ ಹೊಲಗಳಿಗೆ ಹಳ್ಳದ ನೀರು ನುಗ್ಗಿದ ನೀರಿನ ರಭಸಕ್ಕೆ ಬೆಳೆಗಳು ಕೊಚ್ಚಿಕೊಂಡು ಹೋಗಿವೆ.

ಬಾಳೆತೋಟಕ್ಕೆ ನುಗ್ಗಿದ ನೀರು:

ಹೊಸಪೇಟೆ ನಗರ ಸೇರಿದಂತೆ ಸುತ್ತಮುತ್ತಲಿನ ಭಾಗಗಳಲ್ಲಿ ಶುಕ್ರವಾರ ರಾತ್ರಿ ಆರಂಭವಾದ ಮಳೆ‌ ಬಿಟ್ಟೂ ಬಿಡದೆ ಸುರಿದಿದ್ದರಿಂದ ಹಂಪಿ ಸುತ್ತಮುತ್ತಲಿನ ಸುಮಾರು 20 ಎಕರೆ ಬಾಳೆತೋಟದಲ್ಲಿ ಅಪಾರ ನೀರು ಸಂಗ್ರಹವಾಗಿದೆ.

ಕೊಯ್ಲಿಗೂ ಬಿಡುವು ನೀಡದ ಮಳೆ:

ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನಾದ್ಯಂತ ಕಳೆದ ನಾಲ್ಕು ದಿನದಿಂದ ಅಬ್ಬರಿಸುತ್ತಿರುವ ಮಳೆ ಕೊಯ್ಲಿಗೆ ಬಂದಿರುವ ಬೆಳೆಗಳನ್ನು ಹೊಲದಲ್ಲೇ ಕೊಳೆಯುವಂತೆ ಮಾಡಿದೆ. ಹಲವು ಬೆಳೆಗಳು ಹಾಳಾಗುತ್ತಿದ್ದು, ಮುಂಗಾರು ಹಂಗಾಮಿನ ಮೊದಲ ಬೆಳೆಗಳಾದ ಹೆಸರು, ಉದ್ದು ಹಾಗೂ ಶೇಂಗಾ ಬೆಳೆ ಕೊಯ್ಲಿಗೆ ರೈತರು ಸಿದ್ಧವಾಗಿದ್ದರೂ ಮಳೆ ಅವಕಾಶ ನೀಡುತ್ತಿಲ್ಲ. ಬೆಳೆಯನ್ನು ಹೊಲದಲ್ಲೇ ಬಿಟ್ಟರೆ ಅಧಿಕ ತೇವಾಂಶದಿಂದ ಕಾಳು ಗುಣಮಟ್ಟ ಕಳೆದುಕೊಳ್ಳುವ ಭೀತಿ ರೈತರಲ್ಲಿ ಹೆಚ್ಚಾಗಿದೆ. ತಾಲ್ಲೂಕಿನ ಕೊಣ್ಣೂರ, ಸಾವಳಗಿ, ಗೋಠೆ ಭಾಗದಲ್ಲಿ ಹೆಸರು ಕಾಳು, ಉದ್ದು ಬೆಳೆಗಳ ಕೊಯ್ಲು ನಡೆಯುತ್ತಿದೆ. ಕೆಲ ಗ್ರಾಮಗಳಲ್ಲಿ ರೈತರು ಬೆಳೆಯನ್ನು ತೆಗೆದಿದ್ದು, ಇನ್ನು ಕೆಲವರು ಕಿತ್ತು ಹೊಲದಲ್ಲಿಯೇ ಬಿಟ್ಟಿದ್ದಾರೆ, ಕೆಲವರು ಕೀಳುವುದನ್ನು ಪ್ರಾರಂಭಮಾಡಿಲ್ಲ. ಮತ್ತೆ ಕೆಲ ಜಮೀನುಗಳಲ್ಲಿ ರಾಶಿಯೂ ಮಳೆಗೆ ತೊಯ್ದಿದೆ.