ಕೋವಿಡ್ 19 ಸೋಂಕಿನ ಹೊಡೆತಕ್ಕೆ ಸಿಕ್ಕಿ ನಲುಗುತ್ತಿರುವ ಮುಂಬಯಿಗೆ ಶುಕ್ರವಾರ ಮಳೆ ಆಘಾತ ನೀಡಿದೆ. ಮುಂಬೈ ಮಹಾನಗರದಲ್ಲಿ ಶುಕ್ರವಾರ ಭಾರಿ ಮಳೆಯಾಗಿದ್ದು, ಬೆಳಗ್ಗೆಯಿಂದಲೇ ಮಳೆ ಬೀಳಲು ಆರಂಭಿಸಿತ್ತು. ಮಧ್ಯಾಹ್ನದ ನಂತರ ಭಾರಿ ಮಳೆಯಾದ ಕಾರಣ ಮುಂಬೈ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ರಸ್ತೆಗಳೆಲ್ಲಾ ಎಂದಿನಂತೆ ಜಲಾವೃತಗೊಂಡವು. ಕೆಲ ತಗ್ಗುಪ್ರದೇಶಗಳಲ್ಲಿ ಇರುವ ಮನೆಗಳಿಗೆ ನೀರು ನುಗ್ಗಿ ಜನರು ಪರದಾಡುವಂತಾಗಿದೆ. ಮುಂದಿನ 2 ದಿನಗಳ ಕಾಲ ಭಾರತೀಯ ಹವಾಮಾನ ಇಲಾಖೆಯು ಆರೆಂಜ್ ಅಲರ್ಟ್ ಘೋಷಿಸಿದೆ.,
ಕಳೆದ ತಿಂಗಳು ನಿಸರ್ಗ ಚಂಡಮಾರುತದ ಅಬ್ಬರಕ್ಕೆ ಸಿಲುಕಿದ್ದ ರತ್ನಗಿರಿ ಜಿಲ್ಲೆಯಲ್ಲಿ ಶುಕ್ರವಾರ ಭಾರೀ ಮಳೆಯಾಗಿದ್ದು, ಶನಿವಾರ ರಾಯಗಡ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವರುಣ ಅಬ್ಬರಿಸಲಿದ್ದಾನೆ ಎಂದೂ ಇಲಾಖೆ ಎಚ್ಚರಿಸಿದೆ.
ಬಿಸಿಲಿನ ಝಳ ಹೆಚ್ಚಿರುವ ದೆಹಲಿ ಮತ್ತು ಗುಜರಾತ್‌ನಲ್ಲೂ ಶನಿವಾರ ಮಳೆಯಾಗಲಿದೆ ಎಂದು ಐಎಂಡಿ ತಿಳಿಸಿದೆ. ರಾಜಸ್ಥಾನದಲ್ಲಿ ಬಿಸಿಗಾಳಿ ಮುಂದುವರಿಯಲಿದ್ದು, ಮಳೆ ವಿಳಂಬವಾಗಲಿದೆ ಎಂದಿದೆ.