News

ರಾಜ್ಯದ ಹಲವೆಡೆ ಸುರಿದ ಭಾರಿ ಮಳೆಗೆ ತುಂಬಿದ ಕೆರೆಕಟ್ಟೆಗಳು

10 September, 2020 8:56 AM IST By:

ರಾಜ್ಯದ ಬಹುತೇಕ ಭಾಗದಲ್ಲಿ ಮಂಗಳವಾರ ರಾತ್ರಿ ಹಾಗೂ ಬುಧವಾರ ಉತ್ತಮ ಮಳೆಯಾಗಿದ್ದು, ಕೆರೆ–ಕಟ್ಟೆಗಳು, ಹಳ್ಳ–ಕೊಳ್ಳಗಳು ಭರ್ತಿಯಾಗಿವೆ. 

ರಾಜಧಾನಿಯಲ್ಲಿ ಮಂಗಳವಾರ ಮತ್ತು ಬುಧವಾರ ಆರ್ಭಟಿಸಿದ ಮಳೆಯಿಂದ ಜನರು ತತ್ತರಿಸಿ ಹೋದರು.  300ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿದ್ದು, ಬಹುತೇಕ ರಸ್ತೆ ಮತ್ತು ಅಂಡರ್​ಪಾಸ್​ಗಳು ಜಲಾವೃತಗೊಂಡಿವೆ. ಗುಡುಗು- ಮಿಂಚು ಸಮೇತ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ

ಹೊಲಗದ್ದೆಗಳು ಜಲಾವೃತ್ತವಾಗಿ ಲಕ್ಷಾಂತರ ರೂಪಾಯಿ ಬೆಳೆ ನೀರುಪಾಲಾಗಿದೆ. ಹಲವೆಡೆಮಳೆ ನೀರು ನುಗ್ಗಿ 350ಕ್ಕೂ ಹೆಚ್ಚು ಎಕರೆಯಲ್ಲಿ ಭತ್ತ, ಅಡಕೆ, ಬೆಳೆಗಳು ನೀರುಪಾಲಾಗಿವೆ. ಗದಗದಲ್ಲೂ ಅಪಾರ ಅಪ್ರಾಣದ ಕಬ್ಬು, ಬೇವಿನಜೋಳ, ಈರುಳ್ಳಿ ಬೆಳೆಗಳು ನಾಶವಾಗಿವೆ. ಬಳ್ಳಾರಿ, ಬೀದರ್, ಕಲಬುರಗಿ ಜಿಲ್ಲೆಯಲ್ಲಿಯೂ ಅಪಾರ ಬೆಳೆ ಹಾನಿಯಾಗಿದೆ.

ಕೆ.ಆರ್‌.ಪುರ, ಮಹದೇವಪುರ, ಹೆಣ್ಣೂರು, ಯಲಹಂಕ, ದಾಸರಹಳ್ಳಿ, ಹೆಸರಘಟ್ಟ ಭಾಗದಲ್ಲಿ ತಗ್ಗು ಪ್ರದೇಶಗಳಲ್ಲಿನ ಹಲವು ಬಡಾವಣೆಗಳು ಮುಳುಗಡೆಯಾಗಿದ್ದವು. ವಾಹನಗಳು ನೀರಿನಲ್ಲಿ ತೇಲಿ ಹೋದವು. ರಾಜಕಾಲುವೆಗಳು, ಮ್ಯಾನ್‌ಹೋಲ್‌ಗಳು ಉಕ್ಕಿ ಹರಿದವು. ನಗರದ ಹಲವೆಡೆ 25ಕ್ಕೂ ಹೆಚ್ಚು ಮರಗಳು ಧರೆಗುರುಳಿ ಬಿದ್ದವು.

ಚಿತ್ರದುರ್ಗ ಜಿಲ್ಲೆಯ ಚಳ್ಳೆಕೆರೆ ತಾಲ್ಲೂಕಿನ ಜಾಜೂರು ಗ್ರಾಮದಲ್ಲಿ ಮನೆ ಗೋಡೆ ಕುಸಿದು  ಚಲ್ಮೇಶ ಮತ್ತು ಲಕ್ಷ್ಮೀದೇವಿ ದಂಪತಿಯ ಪುತ್ರಿ ಶ್ರೀಜನ್ಯ (6) ಮೃತಪಟ್ಟಿದ್ದಾಳೆ. ರಾತ್ರಿ ಮಲಗಿದ್ದಾಗ ಗೋಡೆ ಕುಸಿದು ಅನಾಹುತ ಸಂಭವಿಸಿದೆ. ಬಂಗಾರ
ದೇವರಹಟ್ಟಿ ಗ್ರಾಮದಲ್ಲಿ ಚಪ್ಪರ ಕುಸಿದು ಎತ್ತು ಹಾಗೂ ಕುರಿ ಮೃತಪಟ್ಟಿವೆ.

ವಿಜಯಪುರದ ತಾಳಿಕೋಟೆಯಲ್ಲಿ ಡೋಣಿ ನದಿಯಲ್ಲಿ ಬುಧವಾರ ಮಧ್ಯಾಹ್ನ ಪ್ರವಾಹ ಪರಿಸ್ಥಿತಿ ಸೃಷ್ಟಿಯಾಗಿತ್ತು.  ತಾಳಿಕೋಟೆ–ಹಡಗಿನಾಳ ಸಂಪರ್ಕಿಸುವ ನೆಲಮಟ್ಟದ ಚಿಕ್ಕ ಸೇತುವೆ ಡೋಣಿ ನದಿ ಪ್ರವಾಹದಲ್ಲಿ ಮುಳುಗಿತ್ತು.

ಬಾಗಲಕೋಟೆ ಜಿಲ್ಲೆಯ ರಬಕವಿ–ಬನಹಟ್ಟಿಯಲ್ಲಿ ಒಂದು ಗಂಟೆ ಸುರಿದ ಭಾರಿ ಮಳೆಯಿಂದಾಗಿ ಅನೇಕ ಮನೆಗಳಿಗೆ ಮಳೆ ನೀರು ನುಗ್ಗಿತು. ಚಿತ್ರದುರ್ಗ ಜಿಲ್ಲೆ ಯಲ್ಲಿ  ಧಾರಾಕಾರವಾಗಿ ಸುರಿದ ಮಳೆಗೆ ಹಲವು ಹಳ್ಳ, ಕೆರೆ ಹಾಗೂ ಚೆಕ್‌ಡ್ಯಾಂ ಸೇರಿ ಎಲ್ಲ ಜಲಮೂಲಗಳು ತುಂಬಿ ಹರಿದಿವೆ.

 ದಾವಣಗೆರೆ ಜಿಲ್ಲೆಯಲ್ಲಿ ಭಾರಿ ಮಳೆಯಿಂದಾಗಿ ಜಿಲ್ಲೆಯ ವಿವಿಧೆಡೆ ಹಳ್ಳಕೊಳ್ಳಗಳು ತುಂಬಿ ಹರಿದಿದ್ದು, ಭತ್ತದ ಗದ್ದೆಗಳು ಜಲಾವೃತವಾಗಿವೆ. ತುಮಕೂರು ಜಿಲ್ಲೆಯ ಕೆಲವು ಕಡೆಗಳಲ್ಲಿ ಉತ್ತಮ ಮಳೆ ಸುರಿದಿದ್ದು ಕೆರೆ–ಕಟ್ಟೆಗಳಿಗೆ, ಚೆಕ್‌ಡ್ಯಾಂಗಳಿಗೆ ನೀರು ತುಂಬಿದೆ.