News

ಮಳೆ ಆರ್ಭಟಕ್ಕೆ ಬೆಚ್ಚಿಬಿದ್ದ ಉತ್ತರ ಕರ್ನಾಟಕ ಜಿಲ್ಲೆಗಳು, ಅಪಾರ ಬೆಳೆ ಹಾನಿ

15 October, 2020 2:35 PM IST By:

ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ವಾಯುಭಾರ ಕುಸಿತದಿಂದಾಗಿ ಹಾಗೂ ಮುಂಗಾರು ಮಳೆ ಮುನಿಸಿಗೆ ಉತ್ತರ ಕರ್ನಾಟಕದ ಜಿಲ್ಲೆಗಳು ಮತ್ತೆ ತತ್ತರಿಸಿವೆ. ಬಹುತೇಕ ಜಿಲ್ಲೆಗಳಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿರುವುದಲ್ಲದೆ ಲಕ್ಷಾಂತರ ಬೆಳೆ ಹಾಳಾಗಿದೆ.

ರಾಜ್ಯದಲ್ಲಿ ಇನ್ನೂ 48 ಗಂಟೆಗಳ ಕಾಲ ರಭಸದ ಮಳೆಯಾಗಲಿದೆ ಎಂಬ ಮುನ್ಸೂಚನೆ ಇರುವುದರಿಂದ ಪರಿಸ್ಥಿತಿ ಇನ್ನೂ ಹೆಚ್ಚು ವಿಕೋಪಕ್ಕೆ ಹೋಗವ ಆತಂಕ ಎದುರಾಗಿದೆ. ಆಗಸ್ಟ್, ಸೆಪ್ಟೆಂಬರ್ ಹಾಗೂ ಅಕ್ಟೋಬರ್ ಈ ಮೂರು ತಿಂಗಳಲ್ಲಿ ಮಳೆಯ ಆರ್ಭಟ ಹೆಚ್ಚಾಗಿ ಲಕ್ಷಾಂತರ ಎಕರೆ ರೈತರ ಬೆಳೆ ಹಾಳಾಗಿದೆ. ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳಲ್ಲಿ ಸುರಿದ ಮಳೆಯಿಂದಾಗಿ ಸಂಕಷ್ಟದಲ್ಲಿರುವ ರೈತರು ಈಗ ಮತ್ತೆ ಇಕ್ಕಟ್ಟಿಗೆ ಸಿಲುಕಿದ್ದಾರೆ. ಒಮ್ಮೆ ಅತೀವೃಷ್ಟಿ ಇನ್ನೊಮ್ಮೆ ಅನಾವೃಷ್ಟಿಯಿಂದಾಗಿ ರೈತರ ಬದುಕು ಸಂಕಷ್ಟದಲ್ಲಿ ಸಿಲುಕುವಂತಾಗುತ್ತಿದೆ.

ಭೀಮಾ, ಕಾಗಿಣಾ, ಮಲಪ್ರಭಾ, ಕೃಷ್ಣಾ ಸೇರಿದಂತೆ ಪ್ರಮುಖ ನದಿಗಳು ಉಕ್ಕಿ ಹರಿಯುತ್ತಿರುವುದರಿಂದ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಬಾಗಲಕೋಟೆ ಜಿಲ್ಲೆಯಲ್ಲಿ ಕೃಷ್ಣಾ, ಘಟಪ್ರಭಾ ಹಾಗೂ ಮಲಪ್ರಭಾ ನದಿಗಳಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡಿದೆ. ವಿಜಯಪುರದಲ್ಲಿ ಡೋಣಿ ನದಿ ಉಕ್ಕಿ ಹರಿಯುತ್ತಿದೆ. ಸತತ ಮಳೆಯಿಂದಾಗಿ ಗದಗ ಜಿಲ್ಲೆಯ ರೋಣ ತಾಲ್ಲೂಕಿನ ಮಾಡಲಗೇರಿ ಗ್ರಾಮದ ಮನೆಯೊಂದರ ಗೋಡೆ ಕುಸಿದು ವೃದ್ಧೆ ಸಾವನ್ನಪ್ಪಿದ್ದಾರೆ.

ಕಲಬುರಗಿ ಜಿಲ್ಲೆಯಲ್ಲಿ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಿಗ್ಗೆಯವರೆಗೆ ಸುರಿದ ಭಾರಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಜೇವರ್ಗಿ ತಾಲ್ಲೂಕಿನ ನರಿಬೋಳದಲ್ಲಿ ಭೀಮಾ ನದಿ ಪ್ರವಾಹದಲ್ಲಿ ಭಗವಾನ ತಿಪ್ಪಣ್ಣ ಹಡಪದ (21) ಕೊಚ್ಚಿಹೋಗಿದ್ದಾರೆ. ಕಲಬುರ್ಗಿಯ ಸುಂದರನಗರದಲ್ಲಿ ಭೀಮಬಾಯಿ (96) ಮಲಗಿದ್ದಾಗ ಮನೆಗೆ ನುಗ್ಗಿದ ಮಳೆ ನೀರಿನಲ್ಲಿ ವಿದ್ಯುತ್ ಪ್ರವಹಿಸಿ ಸಾವಿಗೀಡಾಗಿದ್ದಾರೆ.ಕಲಬುರ್ಗಿ ಮತ್ತು ಬೀದರ್‌ ಜಿಲ್ಲೆಗಳ ನದಿ, ಹಳ್ಳ–ಕೊಳ್ಳ,ಕೆರೆ,ಕಟ್ಟೆ, ನಾಲೆಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶದಲ್ಲಿಯ ಮನೆಗಳಿಗೆ ನೀರು ನುಗ್ಗಿದ್ದರಿಂದ ಜನ ಪರದಾಡಿದರು.

ಗದಗ ಜಿಲ್ಲೆಯ ಕೊಣ್ಣೂರ ಬಳಿ ಹಳೆಯ ಮಲಪ್ರಭಾ ಸೇತುವೆ ಮುಳುಗಡೆಯಾಗಿದೆ. ಸುರಕೋಡ, ಕುರ್ಲಗೇರಿ ಬಳಿ ಬೆಣ್ಣೆ ಹಳ್ಳ ತುಂಬಿ ಹರಿಯುತ್ತಿವೆ. ನರಗುಂದ ಕಣಕಿಕೊಪ್ಪ ಮಧ್ಯೆ ಹಿರೇಹಳ್ಳ ಸೇತುವೆ ಕೊಚ್ಚಿ ಕೊಂಡು ಹೋಗಿ, ಸಂಚಾರ ಸ್ಥಗಿತಗೊಂಡಿದೆ.

ಆಲಮಟ್ಟಿ ಜಲಾಶಯದ ಒಳಹರಿವು ಬುಧವಾರ ಸಂಜೆ 1.17 ಲಕ್ಷ ಕ್ಯುಸೆಕ್ ಗೆ ಹೆಚ್ಚಿದ್ದು, ಅಷ್ಟೇ ಪ್ರಮಾಣದ ನೀರನ್ನು ಜಲಾಶಯದಿಂದ ಬಿಡಲಾಗುತ್ತಿದೆ.

ಧಾರವಾಡ ಜಿಲ್ಲೆಯ ವಿವಿಧೆಡೆ ಮಳೆ ಯಾಗಿದೆ. ಕಮಲಾಪುರ, ನವಲಗುಂದದ ಕೆಲಭಾಗಗಳಲ್ಲಿ ಮನೆ ಗಳು ಕುಸಿದಿವೆ. ನವಲಗುಂದ, ಅಣ್ಣಿಗೇರಿಯಲ್ಲಿ ಗೋವಿನ ಜೋಳ, ಹತ್ತಿ ಬೆಳೆ ನಾಶವಾಗಿದೆ. ಬೆಳಗಾವಿಯಲ್ಲೂ ಮಳೆ ಮುಂದುವರಿದಿದೆ.

ಬಳ್ಳಾರಿ ಜಿಲ್ಲೆಯ ಕಂಪ್ಲಿ ತಾಲ್ಲೂಕಿನ ದೇವಸಮುದ್ರ ಗ್ರಾಮದಲ್ಲಿ ಎರಡು ಕಚ್ಚಾ ಮನೆಗಳು ಕುಸಿದಿವೆ. ಕಾರವಾರ ತಾಲ್ಲೂ ಕಿನ ಅರಗಾದಲ್ಲಿ ರಾಷ್ಟ್ರೀಯ ಹೆದ್ದಾರಿ 66 ಜಲಾವೃತವಾದ ಕಾರಣ ವಾಹನ ಸಂಚಾರ ಅಸ್ತವ್ಯವಸ್ತಗೊಂಡಿತು.

ಬೀದರ್‌ ಜಿಲ್ಲೆಯ ಮಾಂಜ್ರಾ ಮತ್ತು ದೇವಣಿ ನದಿಗಳು ತುಂಬಿ ಹರಿಯುತ್ತಿದ್ದು, 12 ಕಿರು ಸೇತುವೆಗಳು ಮುಳುಗಡೆಯಾಗಿವೆ. ಜಿಲ್ಲೆಯಲ್ಲಿ 100ಕ್ಕೂ ಹೆಚ್ಚು ಮನೆ ಕುಸಿದಿವೆ. ಕಮಲನಗರ ತಾಲ್ಲೂಕಿನಲ್ಲಿ ಬಾಳೂರ (ಕೆ), ಸೋನಾಳ್, ಹೊಳಸಮುದ್ರ–ಹುಲಸೂರ, ಸಂಗಮ–ಖೇಡ, ಕಮಲನಗರ–ಔರಾದ್, ತೋರಣಾ–ಮುಧೋಳ, ಬಳತ (ಕೆ )–ಬೇಡಕುಂದ ಸೇತುವೆಗಳು ಮುಳುಗಿವೆ.

ಯಾದಗಿರಿ, ರಾಯಚೂರು, ಕೊಪ್ಪಳ ಜಿಲ್ಲೆಗಳಲ್ಲಿಯೂ ಮಳೆ ಆರ್ಭಟ ಮುಂದುವರೆದಿದೆ. ಇದರಿಂದಾಗಿ ನದಿ ಹಳ್ಳಕೊಳ್ಳಗಳು ಉಕ್ಕಿ ಹರಿಯುತ್ತಿವೆ. ಜನಜೀವನ ಅಸ್ತವ್ಯಸ್ತವಾಗಿದೆ.

ಮಳೆಯ ಪ್ರವಾಹದಿಂದ ಮಳೆಗಳಿಗೆ ನೀರು ನುಗ್ಗಿ ಅತಂತ್ರರಾಗಿದ್ದ ಒಟ್ಟು ಇಲ್ಲಿಯವರೆಗೆ 77 ಜನರನ್ನು ರಕ್ಷಣಾ ತಂಡಗಳು ರಕ್ಷಿಸಿವೆ. ಚಿತ್ತಾಪೂರ ತಾಲೂಕಿನ ಮಾಲಗತ್ತಿಯಲ್ಲಿ ಮೂವರು, ಶಹಾಬಾದ ಪಟ್ಟಣದ ಜೆ.ಪಿ.ಕಾಲೋನಿ ಪ್ರದೇಶದ ಐವರು ಮತ್ತು ಹಳೆ ಶಹಾಬಾದ ಪ್ರದೇಶದ ಆರು ಜನರು ಹಾಗೂ ತಾಲೂಕಿನ ಭಂಕೂರ ಗ್ರಾಮದಲ್ಲಿ ಓರ್ವರನ್ನು ರಕ್ಷಿಸಲಾಗಿದೆ.

ಸೇಡಂ ತಾಲೂಕಿನಲ್ಲಿ ಸಟಪನಹಳ್ಳಿ ಗ್ರಾಮದಲ್ಲಿ ಇಬ್ಭರು ಮತ್ತು ಮಳಖೇಡ್ ಗ್ರಾಮದಲ್ಲಿ 26 ಜನರು ಹಾಗೂ ಚಿಂಚೋಳಿ ತಾಲೂಕಿನ ಗಾರಂಪಳ್ಳಿಯಲ್ಲಿ 13, ಚಿಂಚೋಳಿ ಪಟ್ಟಣದಲ್ಲಿ ನಾಲ್ವರು ಐನೊಳ್ಳಿಯಲ್ಲಿ ಮೂವರು ಮತ್ತು ಜಟ್ಟೂರು ಗ್ರಾಮದಲ್ಲಿ 14 ಜನರನ್ನು ರಕ್ಷಿಸಲಾಗಿದೆ.