ಕೊರೋನಾ ಆಂತಕದ ನಡುವೆಯೇ ದೇಶದ ಮಹಾರಾಷ್ಟ್ರ, ಅರುಣಾಚಲಪ್ರದೇಶ, ಉತ್ತರ ಪ್ರದೇಶ, ಪಶ್ಚಿಮಬಂಗಾಲ ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗುತ್ತಿದ್ದರೆ ದೆಹಲಿಯಲ್ಲಿ ಮಳೆಯ ಕೊರತೆ ಕಾಡುತ್ತಿದೆ. ಇನ್ನೊಂದೆಡೆ ಪಶ್ಚಿಮಬಂಗಾಳ ಹಾಗೂ ಅಸ್ಸಾಂ ಸೇರಿದಂತೆ ಈಶಾನ್ಯ ಭಾಗಗಳಲ್ಲಿ ಪ್ರವಾಹ ಪರಿಸ್ಥಿತಿಯಿಂದಾಗಿ ಅಲ್ಲಿನ ಜನತೆ ಸಂಕಷ್ಟದಲ್ಲಿದ್ದಾರೆ. ಮಹಾರಾಷ್ಟ್ರದ ಮುಂಬೈ, ಥಾಣೆ, ರಾಯಗಡ ಜಿಲ್ಲೆಗಳಲ್ಲಿ ಭಾರೀ ಮಳೆಯಾಗಲಿದ್ದು, ಮಹಾರಾಷ್ಟ್ರದ 15 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಹಾರಾಷ್ಟ್ರದ ಜನತೆ ಕೊರೋನಾ ಹಾಗೂ ಮಳೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ.
ಪಶ್ಚಿಮಬಂಗಾಳ, ಅಸ್ಸಾಂನಲ್ಲಿ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ಪ್ರವಾಹ ಪರಿಸ್ಥಿತಿ ತಲೆದೋರಿದೆ. ತಗ್ಗುಪ್ರದೇಶಗಳಲ್ಲಿ ವಾಸಿಸುವ ಜನರನ್ನು ಈಗಾಗಲೇ ಸ್ಥಳಾಂತರ ಮಾಡಲಾಗಿದೆ. ಈ ಪ್ರದೇಶದಲ್ಲಿ ಜುಲೈ 14ರವರೆಗೆ ಮಳೆಯ ಆರ್ಭಟ ಹೆಚ್ಚಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಉತ್ತರಪ್ರದೇಶದಲ್ಲಿ ಸೋಮವಾರವೂ ಸಹ ಗುಡುಗು ಮಿಂಚಿನ ಮಳೆಯಾಗಲಿದೆ ಎಂದು ಇಲಾಖೆ ಮುನ್ನೆಚ್ಚರಿಕೆ ನೀಡಿದೆ. ದೆಹಲಿಯಲ್ಲಿ ಮುಂಗಾರು ಅವಧಿಗೆ ಮುಂಚೆಯೇ ಪ್ರವೇಶಿಸಿದರೂ ಸಹ ವಾಡಿಕೆಗಿಂತ ಕಡಿಮೆ ಮಳೆಯಾಗಿದೆ. ಶೇ. 40 ರಷ್ಟು ಮಳೆ ಕೊರತೆ ಉಂಟಾಗಿದೆ. ಕರ್ನಾಟದ ಕರಾವಳಿ ಭಾಗದ ಏಳು ಜಿಲ್ಲೆಗಳಲ್ಲಿ ಗುಡುಗು ಮಿಂಚಿನ ಮಳೆಯಾಗಲಿದೆ. ಕರಾವಳಿ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಜಿಲ್ಲೆಗಳಲ್ಲಿ ಮುಂದಿನ 48 ಗಂಟೆಗಳಲ್ಲಿ ಧಾರಾಕಾರ ಮಳೆಯಾಗುವ ನಿರೀಕ್ಷೆರುವುದರಿಂದ ಇಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.