ಮುಂಗಾರು ಈಗಾಗಲೇ ರಾಜ್ಯಾದ್ಯಂತ ಆರಂಭವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಕಳೆದ ನಾಲ್ಕೈದು ದಿನಗಳಿಂದ ಉತ್ತಮ ಮಳೆಯಾಗುತ್ತಿದೆ. ಈ ವರ್ಷ ಗುಡುಗು ಮಿಂಚಿನ ಆರ್ಭಟದೊಂದಿಗೆ ಮಳೆ ಸುರಿಯುತ್ತಿದ್ದರಿಂದ ರೈತ ಬಾಂಧವರಲ್ಲಿ ಮಂದಹಾಸ ಮೂಡಿದೆ.
ರಾಜ್ಯದ ಹಲವೆಡೆ ಬುಧವಾರ ಉತ್ತಮ ಮಳೆಯಾಗಿದೆ. ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಮುಂಗಾರು ಪ್ರವೇಶವಾದ ನಂತರ ಮೊದಲ ಬಾರಿಗೆ ನಿರಂತರವಾಗಿ ಮಳೆ ಸುರಿದಿದೆ. ಬೆಳಿಗ್ಗೆಯಿಂದಲೇ ಮಂಗಳೂರು ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲಿನ ಆರ್ಭಟದೊಂದಿಗೆ ಮಳೆ ಸುರಿಯಿತು.
ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ಇದೇ 12ರಿಂದ 14ರವರೆಗೆ ಧಾರಾಕಾರ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಭಾಗದ ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಎರಡೂ ದಿನಗಳು 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ.
ಉತ್ತರ ಒಳನಾಡಿನ ಬೆಳಗಾವಿ, ಬೀದರ್, ಧಾರವಾಡ, ಕಲಬುರಗಿ, ರಾಯಚೂರು, ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು ಜಿಲ್ಲೆಗಳಲ್ಲಿ ಜೂನ್ 12ರಂದು ಹೆಚ್ಚು ಮಳೆಯಾಗುವ ಹಿನ್ನೆಲೆಯಲ್ಲಿ ‘ಯೆಲ್ಲೊ ಅಲರ್ಟ್’ ಘೋಷಿಸಲಾಗಿದೆ.
ಜೋರು ಮಳೆ: ಶಿವಮೊಗ್ಗ ನಗರ ಹಾಗೂ ಸುತ್ತಮುತ್ತ ಅರ್ಧ ತಾಸು ಬಿರುಸಿನ ಮಳೆಯಾಯಿತು. ಹೊಸನಗರ, ಆನಂದಪುರ, ರಿಪ್ಪನ್‌ಪೇಟೆ, ತೀರ್ಥಹಳ್ಳಿ, ಕೋಣಂದೂರು, ಶಿಕಾರಿಪುರ, ಸಾಗರ, ಭದ್ರಾವತಿ, ಸೊರಬ ಸುತ್ತಮುತ್ತ ಜೋರು ಮಳೆಯಾಗಿದೆ.
ದಾವಣಗೆರೆ ನಗರ ಸೇರಿ ಜಿಲ್ಲೆಯ ಕೆಲವೆಡೆ ಸಾಧಾರಣ ಮಳೆಯಾಗಿದೆ. ಉಚ್ಚಂಗಿದುರ್ಗದಲ್ಲಿ ಉತ್ತಮ ಮಳೆಯಾಗಿದೆ. ನಾಗಮಂಗಲ ತಾಲ್ಲೂಕಿನಲ್ಲಿ ಬುಧವಾರ ಮಧ್ಯಾಹ್ನ ಆಲಿಕಲ್ಲು, ಬಿರುಗಾಳಿ ಸಮೇತ ಒಂದು ಗಂಟೆ ಧಾರಾಕಾರ ಮಳೆ ಸುರಿಯಿತು. ಬಿರುಗಾಳಿಗೆ ಕೆಲವೆಡೆ ಮರಗಳು ನೆಲಕ್ಕುರುಳಿವೆ.
ಕಲಬುರಗಿ, ಬೀದರ್ ಮತ್ತು ರಾಯಚೂರು ಜಿಲ್ಲೆಗಳ ವಿವಿಧೆಡೆ ಬುಧವಾರ ಉತ್ತಮ ಮಳೆಯಾಯಿತು. ಬೀದರ್ ನಗರ, ಭಾಲ್ಕಿ ಮತ್ತು ಹುಮನಾಬಾದ್ ತಾಲ್ಲೂಕಿನಲ್ಲಿ ಧಾರಾಕಾರ ಮಳೆ ಸುರಿಯಿತು.
ಸಿಡಿಲು ಬಡಿದು ರೈತ ಸಾವು
ಪಾವಗಡ ತಾಲ್ಲೂಕಿನ ಚಿತ್ತಗಾನಹಳ್ಳಿಯಲ್ಲಿ ಸಿಡಿಲು ಬಡಿದು ರೈತ ಹನುಮಂತರಾಯಪ್ಪ (69) ಮೃತಪಟ್ಟಿದ್ದಾರೆ. ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ತೆರಳಿದ್ದಾರೆ. ಆಗ ಸಿಡಿಲು ಬಡಿದು ಮೃತಪಟ್ಟಿದ್ದಾರೆ.