News

ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಸಾಧ್ಯತೆ- ಆರೆಂಜ್‌ ಅಲರ್ಟ್‌ ಘೋಷಣೆ

13 September, 2020 8:06 AM IST By:

ನೈಋುತ್ಯ ಮುಂಗಾರು ಕರಾವಳಿಯಲ್ಲಿ ತೀವ್ರವಾಗಿದ್ದು, ದಕ್ಷಿಣ ಒಳನಾಡಿನಲ್ಲಿ ಚುರುಕಾಗಿದೆ.ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸೆ.13 ಮತ್ತು 14ರಂದು ಭಾರಿ ಮಳೆಯಾಗುವ ಸಾಧ್ಯತೆಯಿದ್ದು, ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ‘ಆರೆಂಜ್ ಅಲರ್ಟ್’ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರು ನಗರದಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮಹಾರಾಷ್ಟ್ರ ಹಾಗೂ ಕರ್ನಾಟಕ ಕರಾವಳಿಯ ಪ್ರದೇಶಗಳಲ್ಲಿ ಮೈಲ್ಮೈ ಸುಳಿಗಾಳಿ ತೀವ್ರತೆ ಹೆಚ್ಚಾಗಿರುವುದರಿಂದ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಮಳೆಯಾಗುತ್ತಿದೆ.

ತುಮಕೂರು,  ಯಾದಗಿರಿ, ರಾಯಚೂರು, ಕಲಬುರಗಿ, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬೀದರ್, ಬೆಳಗಾವಿ ಜಿಲ್ಲೆಗಳಲ್ಲಿ ‘ಯೆಲ್ಲೊ ಅಲರ್ಟ್’ ಘೋಷಿಸ ಲಾಗಿದೆ .

ಉತ್ತರ ಒಳನಾಡಿನ ಎಲ್ಲಾ ಜಿಲ್ಲೆಗಳಲ್ಲಿ ಒಂದೆರಡು ಕಡೆಗಳಲ್ಲಿ ಮಿಂಚು ಸಹಿತ ಗುಡುಗಿನಿಂದ ಕೂಡಿದ ಮಳೆಯಾಗುವ ಸಾಧ್ಯತೆಯಿದೆ.

ಕರಾವಳಿ ಜಿಲ್ಲೆಗಳಲ್ಲಿ ಗಂಟೆಗೆ 50 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯದಂತೆ ಎಚ್ಚರಿಸಿದೆ.

ಮಳೆಯ ಎಲ್ಲೆಲ್ಲಿ ಎಷ್ಟು:

ಉಡುಪಿ ಜಿಲ್ಲೆಯ ಕೊಲ್ಲೂರಿನಲ್ಲಿ 220 ಮಿ.ಮೀ.ನಷ್ಟು ಅತಿ ಹೆಚ್ಚು ಮಳೆ ಬಿದ್ದಿದೆ. ಕುಂದಾಪುರದಲ್ಲಿ 170, ಮೂಲ್ಕಿ 160, ಭಟ್ಕಳ 150, ಕೋಟ 140, ಮಂಕಿ, ಹೊಸನಗರ ತಲಾ 130, ಶಿರಾಳಿ 120 ಮಿ.ಮೀ. ಮಳೆಯಾಗಿದೆ. ಸಿದ್ದಾಪುರ, ಕೊಟ್ಟಿಗೆಹಾರ ತಲಾ 110, ಉಡುಪಿ, ಆಗುಂಬೆ ತಲಾ 90, ಮಂಗಳೂರು, ಮಾಣಿ, ಹೊನ್ನಾವರ ತಲಾ 80, ಪಣಂಬೂರು, ಕಾರ್ಕಳ, ಭಾಗಮಂಡಲ ತಲಾ 70, ಪುತ್ತೂರು, ಗೋಕರ್ಣ, ಕಾರವಾರ, ಲಿಂಗನಮಕ್ಕಿ ತಲಾ 60, ಬೆಳ್ತಂಗಡಿ, ವಿಟ್ಲ, ಸುಳ್ಯ, ವೀರಾಜಪೇಟೆ ತಲಾ 50 ಮಿ.ಮೀ. ಪ್ರಮಾಣದಷ್ಟು ಮಳೆಯಾಗಿದೆ.