ರಾಜ್ಯದಲ್ಲಿ ಮುಂಗಾರು ಚುರುಕಾಗಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 15ರಿಂದ 19ರವರೆಗೆ ಧಾರಾಕಾರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಕಳೆದ ಒಂದು ವಾರದಿಂದ ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ಮಳೆಯಾಗುತ್ತಿದೆ. ಇನ್ನು ಮುಂದೆ ಐದು ದಿನಗಳ ಕರಾವಳಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವುದರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 'ಯೆಲ್ಲೊ ಅಲರ್ಟ್' ಘೋಷಿಸಿದೆ.
ಬೀದರ್ ಕಲಬುರಗಿಯಲ್ಲಿ ಮುಂದಿನ 48 ಗಂಟೆಗಳಲ್ಲಿ ಭಾರಿ ಮಳೆಯಾಗಲಿರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯಬಾರದು ಎಂದು ಇಲಾಖೆ ಎಚ್ಚರಿಸಿದೆ.
ಮಳೆ-ಎಲ್ಲಿ, ಎಷ್ಟು?: ಮಂಗಳೂರಿನಲ್ಲಿ 7 ಸೆಂ.ಮೀ ಮಳೆಯಾಗಿದೆ. ಭಟ್ಕಳ 5, ಕುಂದಾಪುರ 4, ಕಾರವಾರ, ಅಂಕೋಲಾ, ಬೆಳ್ತಂಗಡಿ, ಸುಳ್ಯ, ಭಾಗಮಂಡಲ, ಪಾವಗಡ 3, ಉಡುಪಿ, ಕಂಪ್ಲಿ, ತೀರ್ಥಹಳ್ಳಿ, ಮೊಳಕಾಲ್ಮೂರು, ನಂಜನಗೂಡು 2, ಮೂಡುಬಿದರೆ, ಉಪ್ಪಿನಂಗಡಿ, ರಾಯಚೂರು, ಕಲಬುರಗಿ, ಚಾಮರಾಜನಗರ, ಮಾಗಡಿ, ರಾಮನಗರ, ಬಾಗೇಪಲ್ಲಿ, ಹೊಸನಗರ, ಕೊಪ್ಪದಲ್ಲಿ 1 ಸೆಂ.ಮೀ ಮಳೆಯಾಗಿದೆ.