ರಾಜ್ಯದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂಗಾರು ಚುರುಕಾಗಿದ್ದು, ಜಲಾಶಯಗಳು (Dam) ಅವಧಿಗೂ ಮುನ್ನವೇ ಭರ್ತಿಯಾಗುವ ಸಾಧ್ಯತೆಯಿದೆ. ಮಲೆನಾಡು ಭಾಗದಲ್ಲಿ ಧಾರಾಕಾರ ಮಳೆಯಾಗುತ್ತಿರುವುದರಿಂದ ನದಿ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ ಉತ್ತರ ಕನ್ನಡ ಜಿಲ್ಲೆಯ ಕರಾವಳಿಯಲ್ಲಿ ಹಾಗೂ ಕಾರವಾರ, ಅಂಕೋಲಾ, ಕುಮಟಾ, ಭಟ್ಕಳದಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.
ಹಾರಂಗಿ ಜಲಾಶಯ ಭರ್ತಿ(Harangi dam)
ಕೊಡಗಿನಲ್ಲಿಯೂ ಕಳೆದೆರಡು ದಿನಗಳಿಂದ ಧಾರಾಕಾರ ಮಳೆಯಾಗುತ್ತಿರುವುದರಿಂದ ಜೀವನದಿ ಕಾವೇರಿಯಲ್ಲಿ (kaveri river) ನೀರಿನ ಒಳಹರಿವು ಹೆಚ್ಚಾಗಿದೆ. ಕಾವೇರಿ ಕಣಿವೆಯ ಹಾರಂಗಿ ಜಲಾಶಯವು ಬಹುತೇಕ ಭರ್ತಿಯಾಗುವ ಮಟ್ಟಕ್ಕೆ ತಲುಪಿದ್ದು, ನದಿಗೆ ಶುಕ್ರವಾರ 5,500 ಕ್ಯುಸೆಕ್ ನೀರು ಬಿಡಲಾಗಿದೆ.ಜಲಾಶಯದ ಗರಿಷ್ಠ ಮಟ್ಟ 2,859 ಅಡಿಯಾಗಿದ್ದು, ಪ್ರಸ್ತುತ 2,853.42 ಅಡಿ ನೀರು ಸಂಗ್ರಹವಿದೆ. ಒಳಹರಿವು 8,590 ಕ್ಯುಸೆಕ್ ಇದೆ.
ಬುಧವಾರ ರಾತ್ರಿಯಿಂದಲೇ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ ಭಾಗದಲ್ಲಿ ಭಾರೀ ಮಳೆಯಾಗುತ್ತಿದೆ. ಕುದುರೆಮುಖ, ಕಳಸ, ಕೊಟ್ಟಿಗೆಹಾರ, ಚಾರ್ಮಾಡಿ ಘಾಟಿ ಪ್ರದೇಶದಲ್ಲೂ ಮಳೆಯಾಗುತ್ತಿದೆ. ಇದರಿಂದಾಗಿ ತುಂಗಾ, ಭದ್ರಾ, ಹೇಮಾವತಿ ನದಿಗಳು (hemavati river)ಮೈದುಂಬಿ ಹರಿಯುತ್ತಿವೆ.
ಉಡುಪಿ ನಗರದ ಮೂಡನಿಡಂಬೂರು, ಬನ್ನಂಜೆ, ಮಠದಬೆಟ್ಟು, ಕಲ್ಸಂಕ ಪರಿಸರ ಜಲಾವೃತಗೊಂಡಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಕುಂದಾಪುರ, ಬೈಂದೂರು, ಕಾರ್ಕಳ, ಹೆಬ್ರಿ, ಕಾಪು, ಬ್ರಹ್ಮಾವರ ತಾಲ್ಲೂಕುಗಳಲ್ಲೂ ಮಳೆಯ ಅಬ್ಬರ ಜೋರಾಗಿದೆ.
ಉತ್ತರ ಕನ್ನಡ, ಬೆಳಗಾವಿ, ಧಾರವಾಡ, ಹಾವೇರಿ, ಬಾಗಲಕೋಟೆ ಜಿಲ್ಲೆಗಳಲ್ಲಿ ಶುಕ್ರವಾರ ದಿನವಿಡೀ ಮಳೆಯಾಗಿದೆ. ಕಾರವಾರ (karvar)ಜಿಲ್ಲೆಯಾದ್ಯಂತ ದಿನವಿಡೀ ಜೋರಾಗಿ ಮಳೆಯಾಗಿದೆ. ಉತ್ತರ ಕನ್ನಡ ಜಿಲ್ಲೆ ಹೊನ್ನಾವರ, ಕಾರವಾರ, ಅಂಕೋಲಾ, ಕುಮಟಾ, ಭಟ್ಕಳದಲ್ಲೂ ಭಾರೀ ಮಳೆಯಾಗಿದೆ. ಲಕ್ಷ್ಮಣ ತೀರ್ಥ, ರಾಮ ತೀರ್ಥ (ramteerta river) ನದಿಯಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ.
ನಾರಾಯಣಪುರ ಡ್ಯಾಂನಿಂದ (Narayanpur dam)ಕೃಷ್ಣಾ ನದಿಗೆ ನಿತ್ಯ 45 ಸಾವಿರ ಕ್ಯೂಸೆಕ್ ನೀರು ಹರಿಬಿಡುತ್ತಿದ್ದರಿಂದ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹೂವಿನಹೆಡಗಿ ಗ್ರಾಮದ ಗಡ್ಡೆಗೂಳಿ ಬಸವೇಶ್ವರ ದೇಗುಲ ಮುಳುಗಡೆಯಾಗಿದೆ. ಕೊಪ್ಪರ ಹಾಗೂ ಗೂಗಲನ ಶ್ರೀ ಅಲ್ಲಂಪ್ರಭು ದೇವಸ್ಥಾನ ಸುತ್ತ ನೀರು ಆವರಿಸಿದೆ.