News

ಮಳೆಯ ಆರ್ಭಟ- ಉತ್ತರ ಕರ್ನಾಟಕದಲ್ಲಿ ನೆರೆ ಸಂಕಟ, ಅಪಾರ ಕೃಷಿ ಭೂಮಿ ಜಲಾವೃತ

17 August, 2020 10:37 AM IST By:

ಕೆಲವು ದಿನಗಳಿಂದ ವಿರಾಮ ನೀಡಿದ್ದ ಮಳೆ ಮತ್ತೆ ಉತ್ತರ ಕರ್ನಾಟಕದಲ್ಲಿ ತನ್ನ ಆರ್ಭಟ ಮುಂದುವರೆಸಿದ್ದು, ಕಳೆದ ನಾಲ್ಕೈದು ದಿನಗಳಿಂದ ಉತ್ತರ ಕರ್ನಾಟಕದ ಕೆಲ ಜಿಲ್ಲೆಗಳಲ್ಲಿ ಮಳೆಯ ಆರ್ಭಟ (Heavyrain), ಜಿಟಿಜಿಟಿ ಮಳೆಯಿಂದಾಗಿ ನೆರೆ ಸಂಕಟ ಎದುರಾಗಿದೆ. ಇಷ್ಟೇ ಅಲ್ಲದೆ ಅಪಾರ ಪ್ರಮಾಣದ ಕೃಷಿ ಭೂಮಿ ಜಲಾವೃತವಾಗಿದ್ದರಿಂದ ರೈತರ ಬೆಳೆಗಳು (Crop damage) ಹಾನಿಯಾಗಿದೆ. ಹೆಸರು, ಉದ್ದು, ತೊಗರಿ, ಮುಸುಕಿನ ಜೋಳ ಸೇರಿದಂತೆ ತೋಟಗಾರಿಕೆ ಬೆಳೆಗಳ ಹೊಲಗಳಿಗೆ ಮಳೆ ನೀರು ನುಗ್ಗಿದ್ದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.

ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಾರವಾರ, ಕಲಬುರಗಿ, ಬೀದರ್, ಯಾದಗಿರಿ, ಬಳ್ಳಾರಿ, ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ನದಿ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿದ್ದು ನೆರೆ ಪರಿಸ್ಥಿತಿ ನಿರ್ಮಾಣವಾಗಿದೆ. ಸಾವಿರಾರು ಎಕರೆ ಕೃಷಿ ಭೂಮಿ ಮುಳುಗಡೆಯಾಗಿದೆ.

ಆಲಮಟ್ಟಿ(Alamatti): 2.20 ಲಕ್ಷ ಕ್ಯುಸೆಕ್ ನೀರು ಬಿಡುಗಡೆ

ಉತ್ತರ ಕರ್ನಾಟಕದಜಿಲ್ಲೆಗಳಲ್ಲಿ ಶನಿವಾರ ರಾತ್ರಿ ಯಿಂದ ಧಾರಾಕಾರ ಮಳೆ ಸುರಿಯುತ್ತಿದೆ. ಪ್ರವಾಹದ ಭೀತಿ ಎದುರಾಗಿದೆ. ವಿಜಯಪುರ ಜಿಲ್ಲೆಯ ಆಲಮಟ್ಟಿ ಜಲಾಶಯದಿಂದ ಭಾನುವಾರ ಸಂಜೆ 6ರಿಂದ ಎಲ್ಲ 26 ಗೇಟ್‌ಗಳನ್ನು ತೆರೆದು 2.20 ಲಕ್ಷ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ನೆರೆಯ ಮಹಾರಾಷ್ಟ್ರದಲ್ಲಿ ಮಳೆ ಹೆಚ್ಚಾಗಿರುವುದರಿಂದ ಆಲಮಟ್ಟಿ ಜಲಾಶಯಕ್ಕೆ ಹರಿದುಬರುತ್ತಿರುವ ನೀರಿನ ಪ್ರಮಾಣ ಏರುಗತಿಯಲ್ಲಿದೆ.
ಮಹಾರಾಷ್ಟ್ರದ ಕೊಯ್ನಾ ಜಲಾಶಯ ಬಹುತೇಕ ಭರ್ತಿಯಾಗಿದ್ದು, ಭಾನುವಾರ ಅಲ್ಲಿಂದ 35ಸಾವಿರ ಕ್ಯುಸೆಕ್‌ ನೀರು ಬಿಡುಗಡೆ ಮಾಡಲಾಗಿದೆ. ಆ ರಾಜ್ಯದ ವಿವಿಧ ಜಲಾಶಯಗಳಿಂದ ಕರ್ನಾಟಕಕ್ಕೆ ಬರುತ್ತಿರುವ ನೀರಿನ ಪ್ರಮಾಣ ಮುಂದಿನ 48 ಗಂಟೆಗಳಲ್ಲಿ 2 ಲಕ್ಷ ಕ್ಯುಸೆಕ್‌ಗೆ ಏರಿಕೆಯಾಗಲಿದೆ ಎಂದು ಮಹಾರಾಷ್ಟ್ರದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ ನಿರಂತರ ಮಳೆ ಸುರಿಯುತ್ತಿದ್ದು, ಚಿಕ್ಕೋಡಿ, ಕಾಗವಾಡ, ರಾಯಬಾಗ, ಅಥಣಿ, ರಾಮದುರ್ಗ ತಾಲೂಕುಗಳಲ್ಲಿ ಪ್ರವಾಹದ ಆತಂಕ ಆವರಿಸಿದೆ. ಘಟಪ್ರಭಾ, ಕೃಷ್ಣಾ ಮತ್ತು ಮಲಪ್ರಭಾ ನದಿಗಳ ಪ್ರವಾಹದಿಂದ ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಸೇತುವೆಗಳು ನೀರಿನಲ್ಲಿ ಮುಳುಗಿವೆ. ಮಹಾರಾಷ್ಟ್ರದಲ್ಲಿ ವ್ಯಾಪಕ ಮಳೆಯಾಗುತ್ತಿರುವ ಕಾರಣ ಅಲ್ಲಿನ ಕೊಯ್ನಾ ಮತ್ತಿತರ ಜಲಾಶಯಗಳಿಂದ ಹೆಚ್ಚಿನ ಪ್ರಮಾಣದಲ್ಲಿ ನೀರು ಬರುತ್ತಿದ್ದು, ಕೃಷ್ಣಾ ನದಿಗೆ ಒಳಹರಿವಿನ ಪ್ರಮಾಣ ಹೆಚ್ಚಿದೆ.

11 ಸೇತುವೆ ಮುಳುಗಡೆ:

ಬಾಗಲಕೋಟೆ ಜಿಲ್ಲೆಯಲ್ಲಿ ಪ್ರವಾಹ ಭೀತಿ ಮತ್ತೆ ಎದುರಾಗಿದೆ. ಜಿಲ್ಲೆಯ ಕೃಷ್ಣಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಭೂಮಿಗೆ ನೀರು ನುಗ್ಗಿ ಬೆಳೆಗಳು ಮುಳುಗಿವೆ. ಘಟಪ್ರಭಾ ನದಿಯ ಕೆಳ ಮಟ್ಟದ 11 ಸೇತುವೆಗಳು ರವಿವಾರ ಮತ್ತೆ ಜಲಾವೃತಗೊಂಡಿವೆ.

ಧಾರವಾಡ ಜಿಲ್ಲೆಯಲ್ಲಿ ಮಳೆ ಅಬ್ಬರ ಮುಂದುವರಿದಿದ್ದು, ಹಲವು ಸೇತುವೆ ಜಲಾವೃತವಾಗಿದೆ. ಅನೇಕ ಕಡೆ ರಸ್ತೆ ಸಂಪರ್ಕ ಸ್ಥಗಿತಗೊಂಡಿದೆ. ತುಪ್ಪರಿ ಹಳ್ಳದ ನೀರಿನ ಹರಿವಿನಲ್ಲಿ ಹೆಚ್ಚಳವಾಗಿದ್ದು ಧಾರವಾಡ- ಸವದತ್ತಿ ಮಾರ್ಗದ ಸೇತುವೆ ಜಲಾವೃತಗೊಂಡಿದೆ.

ನಾರಾಯಣಪುರ ಜಲಾಶಯ ಭರ್ತಿ:

ಮಹಾರಾಷ್ಟ್ರ ರಾಜ್ಯದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಮಳೆ ಸುರಿಯುತ್ತಿರುವ ಹಿನ್ನೆಲೆಯಲ್ಲಿ ಆಲಮಟ್ಟಿ, ನಾರಾಯಣಪುರ ಜಲಾಶಯಗಳಿಂದಲೂ ಹೆಚ್ಚು ನೀರನ್ನು ಕೃಷ್ಣಾ ನದಿಗೆ ಹರಿಸಲಾಗುತ್ತಿದೆ. ಇದರಿಂದ ರಾಯಚೂರು ಜಿಲ್ಲೆಯ ಲಿಂಗಸುಗೂರು, ದೇವದುರ್ಗ ಮತ್ತು ರಾಯಚೂರು ತಾಲೂಕಿನ ನದಿ ತೀರದ ಗ್ರಾಮಗಳಲ್ಲಿ ಮುಂಜಾಗ್ರತೆಯ ಕ್ರಮಗಳನ್ನು ಜಿಲ್ಲಾಡಳಿತ ತೆಗೆದುಕೊಂಡಿದೆ.

ಅಪಾಯ ಮಟ್ಟದಲ್ಲಿ ಮಲಪ್ರಭಾ ನದಿ:

ಖಾನಾಪುರ ತಾಲೂಕಿನಾದ್ಯಂತ ಧಾರಾಕಾರ ಮಳೆ ಸುರಿಯುತ್ತಿದೆ. ಪರಿಣಾಮವಾಗಿ 20ಕ್ಕೂ ಅಧಿಕ ಸೇತುವೆಗಳು ಮುಳುಗಡೆಯಾಗಿವೆ. ಜತೆಗೆ ನಾಲ್ಕಕ್ಕೂ ಅಧಿಕ ಮಂದಿರಗಳು ಮುಳುಗಡೆಯಾಗಿವೆ. ಸಾವಿರಾರು ಹೆಕ್ಟೇರ್ ಬೆಳೆ ನಾಶವಾಗಿದೆ. ಮಾತ್ರವಲ್ಲ, ಕಣಕುಂಬಿ ಮತ್ತು ಜಾಂಬೋಟಿ ಅರಣ್ಯದಲ್ಲಿ ಭಾರಿ ಮಳೆಯಾಗುತ್ತಿರುವುದರಿಂದ ಮಲಪ್ರಭಾ ನದಿ ಉಕ್ಕಿ ಹರಿಯುತ್ತಿದ್ದು, ಅಪಾಯಮಟ್ಟ ತಲುಪಿದೆ.