News

ಇಂದಿನಿಂದ ಕರಾವಳಿ ಜಿಲ್ಲೆಗಳಲ್ಲಿ ಭಾರಿ ಮಳೆ ಸಾಧ್ಯತೆ-ಯೆಲ್ಲೋ ಅಲರ್ಟ್ ಘೋಷಣೆ

07 September, 2020 7:55 AM IST By:

ರಾಜ್ಯದಲ್ಲಿ ಮುಂಗಾರು ಚರುಕುಗೊಂಡಿದ್ದು, ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಸೆ. 7ರಿಂದ 11ರವರೆಗೆ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದ ಐದು ದಿನಗಳ ಕಾಲ ರಾಜ್ಯದ 13 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ, ಚಿಕ್ಕಮಗಳೂರು, ಚಾಮ ರಾಜನಗರ, ಬೆಳಗಾವಿ, ಧಾರವಾ,  ತುಮಕೂರು, ಶಿವಮೊಗ್ಗ, ಮೈಸೂರು, ಮಂಡ್ಯ, ಕೊಡಗು, ಹಾಸನ, ಚಿತ್ರದುರ್ಗ, ಗದಗ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡು ಜಿಲ್ಲೆಗಳಲ್ಲಿ ಮಳೆ ಪ್ರಮಾಣ ತಗ್ಗಿದ್ದು, ಕೆಲವೆಡೆ ಚದುರಿದಂತೆ ಸಾಧಾರಣೆ ಮಳೆಯಾಗಬಹುದು ಎಂದು ಇಲಾಖೆ ತಿಳಿಸಿದೆ.

ಅರಬ್ಬಿ ಸಮುದ್ರದ ಆಗ್ನೆಯ ಮತ್ತು ಮಧ್ಯಭಾಗದಲ್ಲಿ ವಾಯುಭಾರ ಕುಸಿತ ಉಂಟಾಗಿರುವ ಪರಿಣಾಮ ಕರಾವಳಿಯ ಎಲ್ಲಾ ಜಿಲ್ಲೆಗಳಲ್ಲಿ ಬಹುತೇಕ ಮಳೆಯಾಗುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.

ಭಾನುವಾರ ರಾಜ್ಯದ ಕೆಲವೆಡೆ ಗುಡುಗು ಮಿಂಚಿನ ಆರ್ಭಟದ ಮಳೆಯಾದರೆ ಇನ್ನೊಂದೆಡೆ ಸಾಧಾರಣ  ಮಳೆಯಾಯಿತು. ಕೆಲವೆಡೆ ಮಳಿಯಂದಾಗಿ ತಗ್ಗುಪ್ರದೇಶಗಳಿಗೆ ಮಳೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿತು. ವಾಹನ ಸಂಚಾರ ಅಸ್ತವ್ಯಸ್ತವಾಯಿತು.  

ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿಯಲ್ಲಿ 8 ಸೆಂ.ಮೀ ಮಳೆಯಾಗಿದೆ. ಬ್ರಹ್ಮಾವರ, ಆಗುಂಬೆ 4, ಕಾರ್ಕಳ, ಬೆಳ್ತಂಗಡಿ 3, ಪುತ್ತೂರು, ಸುಳ್ಯ, ಮೂಡುಬಿದರೆ, ಸಕಲೇಶಪುರ, ಭಾಗಮಂಡಲ ಹಾಗೂ ಚಿಕ್ಕಮಗಳೂರಿನಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾನುವಾರ ಸಾಧಾರಣ ಮಳೆಯಾಗಿದೆ. ಕೊಪ್ಪ ತಾಲ್ಲೂಕಿನಲ್ಲಿ ಗುಡುಗು ಸಹಿತ ಬಿರುಸು ಮಳೆಯಾಗಿದೆ.ಮೂಡಿಗೆರೆ ತಾಲ್ಲೂಕಿನ ಬಣಕಲ್, ಬಾಳೂರು, ನಿಡುವಾಳೆ, ಕೂವೆ ಮತ್ತಿತರ ಪ್ರದೇಶಗಳಲ್ಲಿ  ಹಾಗೂ ಮೈಸೂರಿನಲ್ಲಿ ಧಾರಾಕಾರ ಮಳೆ ಸುರಿಯಿತು. ಶಿವಮೊಗ್ಗ ಜಿಲ್ಲೆಯಲ್ಲಿ ಕೆಲವೆಡೆ ಸಾಧಾರಣ ಮಳೆಯಾಗಿದೆ. ಕೊಡಗು, ಹಾಸನ ಮತ್ತು ಬೀದರ್ ಜಿಲ್ಲೆಯ ಕೆಲವು ತಾಲೂಕಿನಲ್ಲಿ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗಿದೆ.