ರಾಜ್ಯದಲ್ಲಿ ಮುಂಗಾರು ಬಿರುಸುಗೊಂಡಿರುವುದರಿಂದ ಕರಾವಳಿ ಜಿಲ್ಲೆಗಳಲ್ಲಿ ಜುಲೈ 4ರಿಂದ 7ರ ವರೆಗೆ ಭಾರಿ ಮಳೆಯಾಗುವ ಸಾಧ್ಯತೆ ಇದ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈಗಾಗಲೇ ಕರಾವಳಿ ಜಿಲ್ಲೆಗಳಲ್ಲಿ ಕಳೆದ ಒಂದು ವಾರದಿಂದ ಉತ್ತಮ ಮಳೆಯಾಗಿದೆ. ಶನಿವಾರವೂ ಈ ಭಾಗದಲ್ಲಿ ಅತಿ ಹೆಚ್ಚು ಮಳೆಯಾಗುವ ನಿರೀಕ್ಷೆಯಿದ್ದು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ 'ಆರೆಂಜ್ ಅಲರ್ಟ್' ಘೋಷಿಸಲಾಗಿದೆ. ಕರಾವಳಿಯಲ್ಲಿ ವೇಗವಾದ ಗಾಳಿ ಬೀಸುತ್ತಿರುವುದರಿಂದ ಮೀನುಗಾರರು ಕಡಲಿಗೆ ಇಳಿಯಬಾರದು ಎಂದು ಎಚ್ಚರಿಕೆ ನೀಡಲಾಗಿದೆ.
ಕಳೆದ ಒಂದು ವಾರದಿಂದ ಬಹುತೇಕ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗುತ್ತಿದೆ. ಇದರಿಂದಾಗಿ ಮುಂಗಾರು ಚಟುವಟಿಕೆ ಸಹ ಚುರುಕುಗೊಂಡಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಪ್ರಸಕ್ತ ವರ್ಷ ಮುಂಗಾರು ಪ್ರವೇಶ ರೈತರಲ್ಲಿ ಮಂದಹಾಸಮೂಡಿಸಿದೆ. ಬಿತ್ತಣಿಕೆ ಕಾರ್ಯವೂ ಸಹ ಚುರುಕುನಿಂದ ಸಾಗಿದೆ.
ಚಿಂಚೋಳಿಯಲ್ಲಿ 122 ಮಿ.ಮೀ ದಾಖಲೆ ಮಳೆ
ಕೊರೋನಾ ಮಹಾಮಾರಿ ವೈರಸ್ ಹಾವಳಿ ಮಧ್ಯೆ ಮಳೆಯೂ ಸಹ ಅಲ್ಲಲ್ಲಿ ಅವಾಂತರ ಸೃಷ್ಟಿ ಮಾಡುತ್ತಿದೆ. ಕಲಬುರಗಿ ತಾಲೂಕಿನ ಚಿಂಚೋಳಿಯಲ್ಲಿ ಮಳೆ ನೀರು ಮನೆಗಳಿಗೆ ನುಗ್ಗಿದರೆ ಇನ್ನೊಂದೆಡೆ ಜೇವರ್ಗಿಯಲ್ಲಿ ರಸ್ತೆ ಸಂಪರ್ಕ ಕಡಿತಗೊಂಡು ತೊಂದರೆಗೀಡು ಮಾಡಿತ್ತು. ಕಲಬುರಗಿ ಜಿಲ್ಲೆಯ ಚಿಂಚೋಳಿ ಪಟ್ಟಣ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ 12ರಿಂದ ಶುಕ್ರವಾರ ಬೆಳಗಿನ 4ಗಂಟೆಯವರೆಗೆ 122 ಮಿ.ಮೀ. ಮಳೆ ಸುರಿದಿದೆ. ಕಳೆದ ಆರು ವರ್ಷಗಳ ಹಿಂದೆ 111 ಮಿ.ಮೀ ಮಳೆ ಸುರಿದಿತ್ತು. ಆ ನಂತರದ ದಾಖಲೆ ಪ್ರಮಾಣದ ಮಳೆ ಇದಾಗಿದೆ. ಚಂದಾಪುರದ 25 ಮನೆಗಳಿಗೆ ನೀರು ನುಗ್ಗಿತ್ತು. ಮುರ್ಕಿ–ಹಂದರಕಿ ರಾಜ್ಯ ಹೆದ್ದಾರಿಯ ಸೇತುವೆ ಮುಳುಗಿ 5 ತಾಸು ಸಂಚಾರ ಬಂದ್ ಆಗಿತ್ತು. ಬಹುತೇಕ ಹೊಲಗಳಲ್ಲಿ ನೀರು ನಿಂತು ಕೆರೆಗಳಂತಾಗಿವೆ.
ಜೇವರ್ಗಿಯಲ್ಲಿ ಕೊಚ್ಚಿಹೋದ ಹಳ್ಳದ ಸೇತುವೆ
ಬುಧವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಜೇವರ್ಗಿ ಹೊರವಲಯದ ಹಳ್ಳದ ಸೇತುವೆ ಕೊಚ್ಚಿಹೋಗಿದೆ. ಇದರಿಂದ ಗುರುವಾರ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಪರೀಕ್ಷಾ ಕೇಂದ್ರಕ್ಕೆ ತೆರಳಲು ಪರದಾಡುವಂತಾಯಿತು. ಮೊರಾರ್ಜಿ ದೇಸಾಯಿ ಬಾಲಕಿಯರ ವಸತಿ ಶಾಲೆಗೆ ತೆರಳುವ ರಸ್ತೆಯಲ್ಲಿಯ ಹಳ್ಳದ ಸೇತುವೆ ಮುಕ್ಕಾಲು ಭಾಗ ಕೊಚ್ಚಿಹೋಗಿದ್ದು, ಶಾಲೆಯ ಆವರಣಗೋಡೆ ರಾತ್ರಿಯೇ ಕುಸಿದಿತ್ತು. ಈ ಶಾಲೆಯಲ್ಲೇ ಪರೀಕ್ಷಾ ಕೇಂದ್ರ ಇದೆ. ಅಗ್ನಿಶಾಮಕ ದಳ ಮತ್ತು ಪುರಸಭೆಯವರು ಹಳ್ಳಕ್ಕೆ ಅಡ್ಡಲಾಗಿ ಏಣಿ ಇಟ್ಟು ವಿದ್ಯಾರ್ಥಿಗಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಿದರು.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸರಾಸರಿ 10 ಸೆಂ.ಮೀ. ಮಳೆ ದಾಖಲಾಗಿದ್ದು, ಕಟೀಲು ಸಂಪರ್ಕಿಸುವ ರಾಜ್ಯ ಹೆದ್ದಾರಿಯ ದೇವರಗುಡ್ಡೆ ರಸ್ತೆ ತಿರುವಿ ನಲ್ಲಿ ಗುಡ್ಡ ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿತ್ತು. ಉಡುಪಿ ಜಿಲ್ಲೆಯಲ್ಲಿ ಮಳೆಯ ಆರ್ಭಟ ಜೋರಾಗಿತ್ತು. ಧಾರವಾಡ, ಉತ್ತರ ಕನ್ನಡ, ಕೊಡಗು, ಶಿವಮೊಗ್ಗ, ಬೀದರ್, ರಾಯಚೂರು, ಯಾದಗಿರಿ, ದಾವಣಗೆರೆಯಲ್ಲೂ ಸಾಧಾರಣ ಮಳೆಯಾಗಿದೆ.